ಸಮಾಜದ ಪ್ರಗತಿಗೆ ಓದುವುದು ನಿಜವಾದ ಅಧ್ಯಯನ:ಡಾ.ಮುತ್ತಯ್ಯ

 

ಚಳ್ಳಕೆರೆ : ಸಮಾಜದ ಪ್ರಗತಿಗೆ ಓದುವುದು ನಿಜವಾದ ಅಧ್ಯಯನ. ಆದರೆ ಸಾಹಿತಿಗಳು, ಚಿಂತಕರು, ಜನಸಾಮಾನ್ಯರು ಸಮಾಜದಲ್ಲಿ ತಮ್ಮ ಮೇಲಿರುವ ಜವಾಬ್ದಾರಿಯನ್ನು ಮರೆತು ಬದುಕುತ್ತಿರುವುದು ನೋವಿನ ಸಂಗತಿ ಎಂದು ಸಂಸ್ಕøತಿ ಚಿಂತಕ ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಡಾ.ಮುತ್ತಯ್ಯ ಎಸ್.ಎಂ. ಹೇಳಿದರು.

ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ, ದಾವಣಗೆರೆ ವಿಶ್ವವಿದ್ಯಾನಿಲಯ, ಶ್ರೀಮತಿ ಕೋಟೆ ಬೋರಮ್ಮ ಪ್ರಥಮ ದರ್ಜೆ ಕಾಲೇಜು ಚಳ್ಳಕೆರೆ ಇವುಗಳ ಸಂಯುಕ್ತಾಶ್ರಯದಲ್ಲಿ ಚಳ್ಳಕೆರೆ ಪಟ್ಟಣದಲ್ಲಿರುವ ಶ್ರೀಮತಿ ಕೋಟೆ ಬೋರಮ್ಮ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ 2023-24 ನೇ ಸಾಲಿನ ಸಾಂಸ್ಕøತಿಕ ಕ್ರೀಡೆ, ಎನ್.ಎಸ್.ಎಸ್. ರೆಡ್‍ಕ್ರಾಸ್, ಪ್ರಥಮ ಬಿ.ಎ.ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಡಾ.ಸಂಜೀವಕುಮಾರ ಮು.ಪೋತೆರವರ ಪ್ರತಿಕ್ರಾಂತಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ದೇಶಕ್ಕೆ ಭದ್ರವಾದ ಸಂವಿಧಾನವನ್ನು ಕೊಡುಡೆಯಾಗಿ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಇಡಿ ಜೀವಮಾನವನ್ನು ಓದುವುದರಲ್ಲೇ ಕಳೆಯುತ್ತಿದ್ದರು. ಇದರಿಂದ ದೇಶದ ಪ್ರಗತಿಯ ಕೊಂಡಿಗಳನ್ನು ಹುಡುಕುತ್ತ ವಿಮೋಚನೆ ನೀಡಿದ್ದಾರೆನ್ನುವುದು ಈ ಕೃತಿ ಸ್ಪಷ್ಠಪಡಿಸುತ್ತದೆ. ವಿದೇಶಗಳಲ್ಲಿ ಶಿಕ್ಷಣ ಪಡೆದ ಡಾ.ಬಿ.ಆರ್.ಅಂಬೇಡ್ಕರ್ ಸ್ವಾರ್ಥಕ್ಕಾಗಿ ಬದುಕಿದವರಲ್ಲ. ದೇಶದ ಪ್ರತಿ ಪ್ರಜೆಗೂ ಸಂವಿಧಾನದಲ್ಲಿ ಸಮಾನತೆಯನ್ನು ನೀಡಿದ್ದಾರೆಂದು ಗುಣಗಾನ ಮಾಡಿದರು.
ಸನಾತನ ಮತ್ತು ಹಿಂದೂ ಧರ್ಮದ ಪ್ರಸ್ತುತ ಚರ್ಚಿತ ವಿಷಯಕ್ಕೆ ಯಾರಾದರೂ ಪ್ರತಿಕ್ರಿಯೆ ನೀಡಬೇಕೆಂದರೆ ಡಾ.ಸಂಜೀವಕುಮಾರ ಮು.ಪೋತೆರವರ ಪ್ರತಿಕ್ರಾಂತಿ ಕೃತಿ ಸಹಕಾರಿಯಾಗಲಿದೆ. ಸಮಾಜದ ಅಭಿವೃದ್ದಿಗಾಗಿ ನಾವೆಲ್ಲರೂ ಮಾತನಾಡುವ ಹಾಗೂ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳುವ ಕಾಲಘಟ್ಟದಲ್ಲಿದ್ದೇವೆ. ವೈದ್ದಿಕ ಧರ್ಮವು ಅಸಮಾನತೆಯನ್ನು ಪ್ರೋತ್ಸಾಹಿಸಿದೆ. ಅದಕ್ಕಾಗಿಯೇ ದೇಶದಲ್ಲಿ ಇನ್ನು ಕೆಲವರ ಅಭಿವೃದ್ದಿ ಮೂಲದಲ್ಲಿದೆ ಎನ್ನುವುದನ್ನು ಕೃತಿಕಾರರು ತಮ್ಮ ಬರಹದ ಮೂಲಕ ತಿಳಿಸಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ಶ್ರೀಮಂತ-ಬಡವ ಎನ್ನುವ ತಾರತಮ್ಯಕ್ಕೆ ನಾವು ಕಾರಣರಲ್ಲ. ಅದಕ್ಕೆ ಈಗಿನ ಶ್ರೇಣಿಕೃತ ವ್ಯವಸ್ಥೆ ಕಾರಣ. ಈ ವ್ಯವಸ್ಥೆ ಬಹುಜನರನ್ನು ಪಾತಾಳಕ್ಕೆ ತುಳಿದಿದೆ. ಸಮಾಜವನ್ನು ಜಾತಿಯತೆ ಎನ್ನುವ ಆಯುಧದ ಮೇಲೆ ಛಿದ್ರಗೊಳಿಸಿ ಶೋಷಣೆ ಮಾಡಲಾಗುತ್ತಿದೆ. ಹನ್ನೆರಡನೆ ಶತಮಾನದ ವಚನ ಚಳುವಳಿ ಎಲ್ಲಾ ತಾರತಮ್ಯಗಳನ್ನು ಪ್ರಶ್ನಿಸುತ್ತ ಶೋಷಣೆ, ಅಸಮಾನತೆ ವ್ಯವಸ್ಥೆಯನ್ನು ತಿರಸ್ಕರಿಸುತ್ತ ನಿರಂತರ ಹೋರಾಟದ ಮೂಲಕ ಸದೃಢ ಸಮಾಜ, ಭ್ರಾತೃತ್ವ, ಸಮಾಜವಾದಿ, ಸಮತಾವಾದದ ಆಧಾರದ ಮೇಲೆ ವಿಮೋಚನೆಗೆ ರಹದಾರಿ ಎನ್ನುವುದನ್ನು ಕೃತಿ ತಿಳಿಸುತ್ತಿದೆ ಎಂದರು.
ಸಾಹಿತಿ ಡಾ.ಬಿ.ಎಲ್.ವೇಣು ಈ ಪುಸ್ತಕದ ಬೆನ್ನುಡಿಯಲ್ಲಿ ಬರೆದಿರುವಂತೆ ಬುದ್ದ, ಬಸವ ಹುಟ್ಟಿ ಬರದಿದ್ದರೆ ಈ ದೇಶದ ಸ್ಥಿತಿ ಏನಾಗುತ್ತಿತ್ತೋ ಎಂದು ಅನೇಕರು ಹಲಬುತ್ತಾರೆ. ಸಮಾಜದಲ್ಲಿ ದೀನದಲಿತರು, ಶೋಷಿತರಿಗೆ ಸಮಾನತೆ ಎನ್ನುವುದು ಇನ್ನು ಕನಸಾಗಿಯೇ ಉಳಿದಿದೆ ಎನ್ನುವುದು ಗೊತ್ತಾಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ರಚಿಸಿ ದೇಶಕ್ಕೆ ನೀಡದೆ ಹೋಗಿದ್ದರೆ ಈ ದೇಶ ಇನ್ಯಾವ ದುರ್ಗತಿಗೆ ಈಡಾಗುತ್ತಿತ್ತೋ ಏನೋ ಎನ್ನುವ ಆತಂಕವನ್ನು ಹೊರ ಹಾಕಿದ್ದಾರೆ.
ಚಳ್ಳಕೆರೆ ನಗರಸಭೆ ಸದಸ್ಯೆ ಶ್ರೀಮತಿ ಓ.ಸುಜಾತ ಪ್ರಹ್ಲಾದ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳು ಓದುವ ಛಲ ಮತ್ತು ಗುರಿಯಿಟ್ಟುಕೊಳ್ಳಬೇಕು. ಓದನ್ನು ಅರ್ಧಕ್ಕೆ ಮೊಟಕುಗೊಳಿಸದೆ ಅಧ್ಯಯನ ಮಾಡಿದಾಗ ಪ್ರತಿಫಲ ಸಿಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರೊ.ಸಂದೀಪ್ ಎಸ್. ಮಾತನಾಡುತ್ತ ಸಮಾಜ ಸೇವೆಯ ಮನೋಭಾವನೆಯಿಟ್ಟುಕೊಂಡಾಗ ಸದೃಢರು ಹಾಗೂ ಸಮರ್ಥರನ್ನಾಗಿ ರೂಪಿಸುತ್ತದೆ. ಸಮಾಜವಾದದ ಚಿಂತನೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. ಮಾನವ ಮೂಲ ಸಂಘ ಜೀವಿಯಾಗಿದ್ದಾನೆ. ಸಾಮಾಜಿಕ ಪರಿಸರದ ಆಳ ಮತ್ತು ಅಗಲವನ್ನು ಅರಿಯದೆ ಪ್ರಗತಿಯ ಕೀ ಸಿಗುವುದಿಲ್ಲ ಎಂದರು.
ಬೌದ್ದಿಕ ದಾರಿದ್ರ್ಯದಿಂದ ಬಳುತ್ತಿರುವ ಸಮಾಜವನ್ನು ಹೋರಾಟದ ಮೂಲಕ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು.
ಚಳ್ಳಕೆರೆಯ ಶ್ರೀಮತಿ ಕೋಟೆ ಬೋರಮ್ಮ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ತಿಪ್ಪೇಸ್ವಾಮಿ ಜಿ.ಎಸ್. ಮಾತನಾಡುತ್ತ ಪೋತೆರವರು ಬರಹಗಳಲ್ಲಿ ಅಸಮಾನತೆ ವಿರುದ್ದವಾದ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಪರವಾದ ತಾತ್ವಿಕ ಸಂಘರ್ಷವನ್ನೇ ಹಿನ್ನೆಲೆಯಾಗಿಟ್ಟುಕೊಂಡು ಕೃತಿಯನ್ನು ರಚಿಸಿದ್ದಾರೆಂದು ಶ್ಲಾಘಿಸಿದರು.
ಕೃತಿಕಾರ ಡಾ.ಸಂಜೀವಕುಮಾರ ಮು.ಪೋತೆ, ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ನಿರ್ದೇಶಕ ಎಂ.ಸೂರನಾಯಕ, ತಿಪ್ಪೇಶ್‍ಕುಮಾರ್ ಜಿ. ಪ್ರೊ.ಲೋಕೇಶ್ ಟಿ. ಪ್ರೊ.ವಿನಯ್ ಎಸ್.ಎನ್. ಪ್ರೊ.ನಾಗಭೂಷಣ, ಪ್ರೊ.ಶ್ರೀನಿವಾಸ ನಾಯ್ಕ, ಡಾ.ಗಂಗಾಧರ, ಪ್ರೊ.ಪ್ರಶಾಂತ್, ವೀರೇಶ್ ಆರ್. ಶ್ರೀಮತಿ ಭಾರತಿ ಪಿ. ಪ್ರಹ್ಲಾದ ಡಿ.ಬಿ. ಇವರುಗಳು ವೇದಿಕೆಯಲ್ಲಿದ್ದರು.

[t4b-ticker]

You May Also Like

More From Author

+ There are no comments

Add yours