ಪ್ರಾಕೃತಿಕ ನಿಯಮ ಮತ್ತು ನಮ್ಮ ಭ್ರಮೆ.

 

ಪ್ರಾಕೃತಿಕ ನಿಯಮ ಮತ್ತು ನಮ್ಮ ಭ್ರಮೆ……

ನಮ್ಮ ನೆಲದ ಒಂದು ಇಂಚು ಭೂಮಿಯನ್ನು ಸಹ ನಾವು ಯಾವುದೇ ದೇಶಕ್ಕೆ ಬಿಟ್ಟು ಕೊಡುವುದಿಲ್ಲ………

ವಿವಿಧ ಕಾಲ ಸಂದರ್ಭ ಸನ್ನಿವೇಶಗಳಲ್ಲಿ ಆ ದೇಶದ ಮುಖ್ಯಸ್ಥರು ಈ ರೀತಿಯ ಹೇಳಿಕೆಗಳನ್ನು ದೇಶದ ಪರವಾಗಿ ನೀಡುತ್ತಾರೆ. ಜನರು ಸಹ ಇದನ್ನು ವಿಶ್ವಾಸದಿಂದ ಸ್ವೀಕರಿಸುತ್ತಾರೆ.

ಭಾರತ ಪಾಕಿಸ್ತಾನ ಬಾಂಗ್ಲಾದೇಶ ಉಕ್ರೇನ್ ತೈವಾನ್ ಕೊರಿಯಾ ಚೀನಾ ಇರಾನ್ ಇರಾಕ್ ಸಿರಿಯಾ ರಷ್ಯಾ ಅಮೆರಿಕ ಜರ್ಮನಿ ಫ್ರಾನ್ಸ್ ಮುಂತಾದ ಎಲ್ಲಾ ದೇಶಗಳಲ್ಲೂ ಇದೇ ಅಭಿಪ್ರಾಯ.

ಸಾಮಾನ್ಯವಾಗಿ ಶತ್ರು ದೇಶಗಳ ಬೆದರಿಕೆ, ಆಕ್ರಮಣ, ಯುದ್ದ ಘೋಷಣೆ, ಬ್ಲಾಕ್ ಮೇಲ್, ಒತ್ತಡ ಮುಂತಾದ ಪರಿಸ್ಥಿತಿಗಳಲ್ಲಿ ಈ ರೀತಿಯ ಹೇಳಿಕೆ ಸಾಮಾನ್ಯ.

ಆದರೆ ವಾಸ್ತವ ಏನು ? ಪ್ರಕೃತಿಯ ಸಹಜ ನಿಯಮ ಏನು ?………….

ಇತಿಹಾಸದ ಅನುಭವದ ಆಧಾರದಲ್ಲಿ ಹೇಳುವುದಾದರೆ ವಾಸ್ತವದ ಪ್ರಕೃತಿಯ ನಿಯಮವು ಬಲಿಷ್ಠರು ದುರ್ಬಲರನ್ನು ಸೋಲಿಸುತ್ತಾರೆ, ಆಕ್ರಮಿಸುತ್ತಾರೆ, ಸಾಯಿಸುತ್ತಾರೆ, ನಿಮ್ಮ ಆಕ್ರೋಶ, ನಿಮ್ಮ ಧೈರ್ಯ, ನಿಮ್ಮ ಧರ್ಮ, ನಿಮ್ಮ ದೇವರು, ನಿಮ್ಮ ನ್ಯಾಯ ನೀತಿ, ನಿಮ್ಮ ದೇಶ ಭಕ್ತಿ ಎಷ್ಟೇ ತೀವ್ರವಾಗಿ ಇದ್ದರೂ ಯಾರು ಬಲಿಷ್ಠರೋ ಅವರೇ ಗೆಲ್ಲುತ್ತಾರೆ.

ಅದು ಮನುಷ್ಯರೇ ಇರಲಿ, ಪ್ರಾಣಿ ಪಕ್ಷಿ ಕೀಟಗಳೇ ಇರಲಿ ಸಾಮಾನ್ಯವಾಗಿ ಬಹುತೇಕ ಇದೇ ನಿಯಮ ಚಾಲ್ತಿಯಲ್ಲಿದೆ. ತೀರಾ ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಕೆಲವು ಸಂದರ್ಭಗಳಲ್ಲಿ ಪವಾಡದ ರೀತಿಯಲ್ಲಿ ದುರ್ಬಲರು ಬಲಿಷ್ಠರನ್ನು ತಮ್ಮ ಧೈರ್ಯದಿಂದ ಮತ್ತು ಯುಕ್ತಿಯಿಂದ ಪ್ರಬಲರ ಮೇಲೆ ವಿಜಯ ಸಾಧಿಸಿದ ಉದಾಹರಣೆಗಳು ಸಹ ಇವೆ.

ಯಾವುದೋ ದೊಡ್ಡ ಪ್ರಾಣಿಯನ್ನು ಸಣ್ಣ ಪ್ರಾಣಿ, ದೊಡ್ಡ ದೇಶವನ್ನು ಸಣ್ಣ ದೇಶ ಸೋಲಿಸಿವೆ. ಇದು ಕೇವಲ ಅಸಾಮಾನ್ಯ ಸನ್ನಿವೇಶದಲ್ಲಿ ಮಾತ್ರ ಸಂಭವಿಸಿರುವುದು.

ಇದರ ಅರಿವು ದೇಶದ ನಾಯಕರಿಗೆ ಇದ್ದರೂ ಸಹ ಜನರನ್ನು ರಂಜಿಸಲು, ಮೆಚ್ಚಿಸಲು, ಅಧಿಕಾರ ಉಳಿಸಿಕೊಳ್ಳಲು ಅಥವಾ ಕೆಲವೊಮ್ಮೆ ಮಾನಸಿಕ ಧೈರ್ಯ ತುಂಬಲು ಈ ರೀತಿಯ ಹೇಳಿಕೆ ನೀಡುತ್ತಾರೆ.

ಇರಾಕಿನ ಸದ್ದಾಂ ಹುಸೇನ್‌, ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ರೀತಿಯ ಸರ್ವಾಧಿಕಾರಿಗಳು ಮಾತ್ರವಲ್ಲ ಪ್ರಜಾಪ್ರಭುತ್ವದ ದೇಶಗಳು ಸಹ ಈ ವಿಷಯದಲ್ಲಿ ಜನರಿಗೆ ಸತ್ಯವನ್ನು ಮನವರಿಕೆ ಮಾಡಿಕೊಡದೆ ಭ್ರಮೆ ಸೃಷ್ಟಿಸುತ್ತಾರೆ.

ಇದರಲ್ಲಿ ಮಾಧ್ಯಮಗಳ ಪಾತ್ರ ಕೂಡ ಇದೆ. ಸುದ್ದಿಗಳು ಪಕ್ಷಪಾತದಿಂದ ಕೂಡಿರುತ್ತವೆ. ತಮ್ಮ ತಮ್ಮ ದೇಶಗಳ ಪರವಾಗಿ ವಿಷಯವನ್ನು ತಿರುಚುತ್ತವೆ ಮತ್ತು ಶತ್ರು ದೇಶಗಳನ್ನು ಟೀಕಿಸುತ್ತಾರೆ. ಆಗಲು ವಿವೇಚನೆಯ ಸತ್ಯ ಹೊರ ಬರುವುದಿಲ್ಲ.

ಯಾವುದೇ ನ್ಯಾಯದ ಮೂಲ ಪ್ರಕೃತಿಯೇ ಹೊರತು ದೇಶ – ಸೈನಿಕ ಸಾಮರ್ಥ್ಯವಲ್ಲ. ಯಾರು ಬಲಿಷ್ಠರೋ ಅವರೇ ಗೆಲ್ಲುವ ಸಾಧ್ಯತೆ ಹೆಚ್ಚು.

ಹಾಗೆಂದು ದುರ್ಬಲರು ಬಲಿಷ್ಠರಿಗೆ ಶರಣಾಗಬೇಕೆಂದು ಅರ್ಥವಲ್ಲ.‌ ದುರ್ಬಲರು ಇತರ ಶಕ್ತಿಗಳನ್ನು ಒಂದು ಗೂಡಿಸಿ ಪ್ರಬಲರ ಮೇಲೆ ಪ್ರತಿರೋಧ ತೋರಿಸಿ ಜಯ ಸಾಧಿಸಬಹುದು. ಪ್ರಬಲರು ಒಂದು ವೇಳೆ ಅಹಂಕಾರಿಗಳಾಗಿ – ಸೋಮಾರಿಗಳಾಗಿ ತಮ್ಮ ಸಾಮರ್ಥ್ಯ ದುರುಪಯೋಗ ಪಡಿಸಿಕೊಳ್ಳುವ ಸಂದರ್ಭದಲ್ಲಿ ದುರ್ಬಲರು ತಮ್ಮೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಸಹ ಪ್ರಬಲರನ್ನು ನಾಶ ಮಾಡಬಹುದು. ಕಡಿಮೆ ಶಕ್ತಿ ಇರುವವರು ತಾಳ್ಮೆಯಿಂದ ಸಮಯ ಸಂದರ್ಭ ಅವಕಾಶಕ್ಕಾಗಿ ಕಾದು ಕುಳಿತು ಪ್ರಬಲರ ದುರ್ಬಲ ಸಮಯದಲ್ಲಿ ಮೇಲೆ ಜಯ ಸಾಧಿಸಬಹುದು.

ಹೀಗೆ ಅನೇಕ ಸಾಧ್ಯತೆಗಳು ಇರುತ್ತವೆ. ‌ಆದರೆ ಸಹಜ ಸಾಮಾನ್ಯ ಪರಿಸ್ಥಿತಿಯಲ್ಲಿ, ತತ್ ಕ್ಷಣದಲ್ಲಿ ಶಕ್ತಿವಂತರು ಮಾತ್ರವೇ ಗೆಲ್ಲುವುದು.
ದೊಡ್ಡ ಜಿಂಕೆಗಳ ಹಿಂಡು ಇದ್ದರೂ ಹುಲಿಯೊಂದು ಜಿಂಕೆಯನ್ನು ಬೇಟೆಯಾಡಿ ತಿನ್ನುತ್ತದೆ. ಆದರೆ ಅಲ್ಲಿ ಮನುಷ್ಯ ಪ್ರತ್ಯಕ್ಷವಾಗಿ ತನ್ನ ಬಂದೂಕಿನಿಂದ ಹುಲಿಯನ್ನು ಕೊಂದು ಜಿಂಕೆಯನ್ನು ರಕ್ಷಿಸಬಹುದು.

ತೈವಾನ್ ದೇಶವನ್ನು ಚೀನಾ ಆಕ್ರಮಿಸುವುದು ಸುಲಭ. ಆದರೆ ಅಮೆರಿಕ ನೇತೃತ್ವದಲ್ಲಿ ವಿಶ್ವ ಒಕ್ಕೂಟ ನೇರವಾಗಿ ಚೀನಾ ವಿರುದ್ಧ ತೈವಾನ್ ರಕ್ಷಣೆಗೆ ಧಾವಿಸಿದರೆ ಚೀನಾ ಪರಿಸ್ಥಿತಿ ಹದಗೆಡುತ್ತದೆ. ಉಕ್ರೇನ್ ಇನ್ನೂ ಪ್ರತಿರೋಧ ತೋರುತ್ತಿರುವುದು ಸಹ ಇದೇ ಆಧಾರದಲ್ಲಿ ಆದರೆ ರೂಪ ಬೇರೆ. ಇದು ಎಲ್ಲಾ ದೇಶಗಳಿಗು ಅನ್ವಯಿಸುತ್ತದೆ. ಪಾಕಿಸ್ತಾನವನ್ನು ಭಾರತ ಆಕ್ರಮಿಸುವುದು ಸುಲಭ. ಆದರೆ ಅದಕ್ಕೆ ಇತರ ದೇಶಗಳ ಬೆಂಬಲ ದೊರೆತರೆ ಭಾರತಕ್ಕೆ ಕಷ್ಟ.

ಭಾರತ ಚೀನಾ ಗಡಿಯಲ್ಲಿ ಇತ್ತೀಚೆಗೆ ನಡೆದ ಸಣ್ಣ ಸೈನಿಕ ಘರ್ಷಣೆಯನ್ನು ಮಾಧ್ಯಮಗಳು ವಿವೇಚನೆ ಇಲ್ಲದೆ ಬಣ್ಣಿಸಿದಾಗ, ರಾಜಕೀಯ ಪಕ್ಷಗಳು ಪಕ್ಷಪಾತದ ಅಭಿಪ್ರಾಯ ವ್ಯಕ್ತಪಡಿಸುತ್ತಿರುವಾಗ ಪ್ರಾಕೃತಿಕ ಸಹಜ ನಿಯಮಗಳು ಯಾವ ರೀತಿಯಲ್ಲಿ ಇರಬಹುದು ಎಂದು ಸಮಚಿತ್ತದಿಂದ ಯೋಚಿಸಿದಾಗ ಈ ಅಭಿಪ್ರಾಯ ಮೂಡಿತು.

ಪ್ರಕೃತಿಗೆ ದೇಶ ಭಾಷೆ ಧರ್ಮ ಜಾತಿ ಬಣ್ಣ ಪ್ರದೇಶಗಳಿಲ್ಲ. ಅದು ಅನಂತ, ಸರ್ವವ್ಯಾಪಿ, ಸಹಜ ಸೃಷ್ಟಿ. ನಾವು ಮಾತ್ರ ಸಂಕುಚಿತ ಅಸಹಜ ಅಮಾನವೀಯ ಸ್ವಾರ್ಥ ಮತ್ತು ನಮ್ಮ ಬುದ್ದಿ ಸೀಮಿತದ ಅಲ್ಪ ಪ್ರಾಣಿಗಳು.

ನಮ್ಮ ದೇಶ ನಮ್ಮ ಭಾಷೆ ನಮ್ಮ ‌ಧರ್ಮ ನಮ್ಮ ಜಾತಿ ನಮ್ಮ ದೇವರು ಎಂದು ಕಚ್ಚಾಡುತ್ತಾ ಸೃಷ್ಟಿಗೇ ಅವಮಾನ ಮಾಡುತ್ತಾ ಬದುಕನ್ನು ಹೆಚ್ಚು ಸಂಕೀರ್ಣ ಗೊಳಿಸಿಕೊಂಡು ಒದ್ದಾಡುತ್ತಿದ್ದೇವೆ. ಅದರ ಪರಿಣಾಮವೇ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ಲೇಖನ: ವಿವೇಕಾನಂದ ಎಚ್. ಕೆ.
9844013068…

[t4b-ticker]

You May Also Like

More From Author

+ There are no comments

Add yours