ನರೇಂದ್ರ ಮೋದಿ ಅವರ ಒಂಬತ್ತು ವರ್ಷಗಳ ಅಧಿಕಾರವಧಿಯಲ್ಲಿ ಸಮಗ್ರ ಅಭಿವೃದ್ದಿ: ಎ.ನಾರಾಯಣಸ್ವಾಮಿ

 

ಚಿತ್ರದುರ್ಗ : ಪ್ರಧಾನಿ ನರೇಂದ್ರಮೋದಿರವರು ಒಂಬತ್ತು ವರ್ಷಗಳ ಅಧಿಕಾರವಧಿಯಲ್ಲಿ ದೇಶದ ಸಮಗ್ರ ಅಭಿವೃದ್ದಿಗೆ ಸಾಕಷ್ಟು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆಂದು ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ತಿಳಿಸಿದರು.

ಬಿಜೆಪಿ. ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ.ನಾರಾಯಣಸ್ವಾಮಿ 2014 ರಲ್ಲಿ ದೇಶದ ಪ್ರಧಾನಿಯಾದಾಗ ನರೇಂದ್ರಮೋದಿ ನೀರಾವರಿ, ವಸತಿ, ವಿದ್ಯುತ್, ನಿವೇಶನ ನೀಡಿ ದಕ್ಷತೆಯಿಂದ ದೇಶವನ್ನು ಅಭಿವೃದ್ದಿಯತ್ತ ತೆಗೆದುಕೊಂಡು ಹೋಗಿದ್ದನ್ನು ಮೆಚ್ಚಿ 2019 ರಲ್ಲಿ ನಡೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ತಂದ ಪರಿಣಾಮ ಎರಡನೆ ಬಾರಿಗೆ ಪ್ರಧಾನಿಯಾದ ಮೋದಿ ಒಂಬತ್ತು ವರ್ಷಗಳ ಅಧಿಕಾರವಧಿಯಲ್ಲಿ ದೇಶದ ಚಿತ್ರಣವನ್ನೆ ಬದಲಿಸಿ ಭ್ರಷ್ಠಾಚಾರ ರಹಿತ ಆಡಳಿತ ನೀಡುತ್ತಿದ್ದಾರೆ ಎಂದು ಹೇಳಿದರು.
ಶೋಷಿತರನ್ನು ಗುರಿಯಾಗಿಸಿಕೊಂಡು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಹನ್ನೊಂದು ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದಾರೆ. ಸ್ವಚ್ಚ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಾಣ, ಉಜ್ವಲ್ ಯೋಜನೆಯಡಿ ಒಂಬತ್ತು ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ವಿತರಣೆ, ಕಿಸಾನ್ ಸಮ್ಮಾನ್ ಅಡಿ ಪ್ರತಿ ರೈತನಿಗೆ ತಿಂಗಳಿಗೆ ಆರು ಸಾವಿರ ರೂ.ಗಳನ್ನು ನೀಡಿರುವ ಹೆಗ್ಗಳಿಕೆ ಪ್ರಧಾನಿಗೆ ಸಲ್ಲಬೇಕು ಎಂದು ಶ್ಲಾಘಿಸಿದರು.
ರೈತರಿಗೆ ಗೊಬ್ಬರದ ಅಭಾವ ನೀಗಿಸಿರುವ ಕೇಂದ್ರ ಸರ್ಕಾರದ ಕಾಳಜಿಯಿಂದಾಗಿ ಆಯುಷ್ಮಾನ್ ಭಾರತ್ ಮೂಲಕ ಐದು ಲಕ್ಷ ಮಂದಿಗೆ ಇನ್ಸುರೆನ್ಸ್ ಸಿಕ್ಕಿದೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ನಿರ್ಮಾಣಗೊಂಡ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿಗೊಳಿಸಿ ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಿದೆ. 45 ಏರ್‍ಪೋರ್ಟ್‍ಗಳನ್ನು 75 ಕ್ಕೆ ಹೆಚ್ಚಿಸಿ ಕರ್ನಾಟಕದಲ್ಲಿ ಆರು ಹೊಸ ಏರ್‍ಪೋರ್ಟ್‍ಗಳನ್ನು ನಿರ್ಮಾಣ ಮಾಡಿರುವ ಕೀರ್ತಿ ಕೇಂದ್ರಕ್ಕಿದೆ. ಉನ್ನತ ಶಿಕ್ಷಣಕ್ಕೆ ಬಿಜೆಪಿ. ಒತ್ತು ಕೊಟ್ಟಿದೆ. ಸಾರ್ವಭೌಮತ್ವ, ನೆಲದ ವಿಚಾರ ಬಂದಾಗ ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ನ್ನು ರದ್ದುಪಡಿಸಿದ ಪ್ರಧಾನಿ ಮೋದಿ ಭಯೋತ್ಪಾದನೆಗೆ ತೆರೆ ಎಳೆದಿದ್ದಾರೆ. ಇಂತಹ ದಿಟ್ಟತನವನ್ನು ದೇಶದ ಯಾವ ಪ್ರಧಾನಿಯೂ ಇದುವರೆವಿಗೂ ಕೈಗೊಂಡಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಯುವಕರು ಸ್ವ-ಉದ್ಯೋಗ ಕೈಗೊಳ್ಳಲು ಮುದ್ರಾ ಯೋಜನೆಯಡಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ. ಬೀದಿ ಬದಿ ವ್ಯಾಪಾರ ಮಾಡುವ ಮೂವತ್ತೈದು ಲಕ್ಷ ಮಂದಿಗೆ ಹತ್ತರಿಂದ ಐವತ್ತು ಸಾವಿರ ರೂ.ಗಳವರೆಗೆ ಬ್ಯಾಂಕ್‍ನಲ್ಲಿ ಸಾಲ ಕೊಟ್ಟಿದೆ. ಕುಡಿಯುವ ನೀರಿಗೆ ಹಾಹಾಕಾರವಿದ್ದುದನ್ನು ಗಮನಿಸಿ ಪ್ರಧಾನಿ ಮೋದಿರವರು ಜಲಜೀವನ್ ಮಿಷನ್ ಯೋಜನೆಯಡಿ ಶುದ್ದ ಕುಡಿಯುವ ನೀರು ಪೂರೈಸಿದ್ದಾರೆ. ವಿಶ್ವವಿದ್ಯಾಲಯಗಳನ್ನು ತೆರೆಯಲಾಗಿದೆ. ಮೂರು ಸಾವಿರ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಐ.ಎ.ಎಸ್.ಕೋಚಿಂಗ್ ನೀಡಲಾಗುತ್ತಿದೆ. ಅದಕ್ಕಾಗಿ ಪ್ರತಿ ತಿಂಗಳು ನಾಲ್ಕು ಸಾವಿರ ರೂ.ಗಳ ಸ್ಟೈಫಂಡ್ ನೀಡಲು ಆದೇಶಿಸಿದ್ದೇನೆ. ಉನ್ನತ ಹುದ್ದೆಗೆ ಪಡೆಯಲು ಈ ವರ್ಷದಿಂದಲೆ ತರಬೇತಿ ಆರಂಭವಾಗಲಿದೆ. ಇನ್ನು ಒಂದು ವರ್ಷದ ಅಧಿಕಾರವಧಿಯಲ್ಲಿ ಪ್ರಧಾನಿ ಮೋದಿರವರು ಅಭಿವೃದ್ದಿಯನ್ನು ದುಪ್ಪಟ್ಟುಗೊಳಿಸಲಿದ್ದಾರೆಂದು ಎ.ನಾರಾಯಣಸ್ವಾಮಿ ಭರವಸೆ ನೀಡಿದರು.
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ. ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಕಾರ್ಯಕರ್ತರು ಸೇನಾನಿಗಳಂತೆ ನಿರ್ವಹಿಸಬೇಕು. ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಧಿಕ್ಕರಿಸಿರುವ ಕಾಂಗ್ರೆಸ್ ಸರ್ಕಾರ ಐದು ಗ್ಯಾರೆಂಟಿಗಳ ಆಸೆ ಹುಟ್ಟಿಸಿ ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದಿದೆ. ಒಳಮೀಸಲಾತಿಯ ಕೂಗು ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿಯೇ ವಿನಃ. ರಾಜಕೀಯಕ್ಕಾಗಿ ಅಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಬಸವರಾಜ್‍ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರು. ಇದಕ್ಕೂ ನಮ್ಮ ಪಕ್ಷದ ಹಿನ್ನೆಡೆಗೂ ಸಂಬಂಧವಿಲ್ಲ ಎಂದು ಎ.ನಾರಾಯಣಸ್ವಾಮಿ ಸ್ಪಷ್ಠಪಡಿಸಿದರು.
ವಿಧಾನ ಪರಿಷತ್ ಸದಸ್ಯ ಬಿಜೆಪಿ.ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಮಾತನಾಡಿ ಒಂದು ತಿಂಗಳ ಕಾಲ ವಿಕಾಸ ತೀರ್ಥ ಯಾತ್ರೆ ಅಭಿಯಾನ ನಡೆಯಲಿದೆ. ಇದಕ್ಕಾಗಿ ರಾಜ್ಯದ ಕೆಲವು ನಾಯಕರುಗಳು ಜಿಲ್ಲೆಗೆ ಆಗಮಿಸಲಿದ್ದಾರೆ. ಶಕ್ತಿ ಕೇಂದ್ರ, ಬೂತ್ ಅಧ್ಯಕ್ಷರು, ಫಲಾನುಭವಿಗಳನ್ನು ಭೇಟಿ ಮಾಡಲಾಗುವುದು. ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರು, ಪದಾಧಿಕಾರಿಗಳ ಸಭೆ ನಡೆಸಲಾಗುವುದು. ಜೂ. 20 ರಂದು ಪ್ರಧಾನಿ ಮೋದಿರವರು ಡಿಜಿಟಲ್ ರ್ಯಾಲಿ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಏಳು ದಿನಗಳ ಕಾಲ ಜಿಲ್ಲೆಯಲ್ಲಿ ಮನೆ ಮನೆ ಸಂಪರ್ಕಕ್ಕೂ ಸಿದ್ದತೆ ನಡೆಸಲಾಗುವುದು ಎಂದು ಹೇಳಿದರು.
ಕೇಂದ್ರದ ಯೋಜನೆಗಳನ್ನು ಪ್ರತಿ ಮನೆಗೆ ತಿಳಿಸುವುದು ಎಲ್ಲರ ಜವಾಬ್ದಾರಿ. ಮುಂದಿನ ವರ್ಷ ನಡೆಯಲಿರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ರಾಜ್ಯದಿಂದ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ನರೇಂದ್ರಮೋದಿರವರನ್ನು ಮತ್ತೆ ದೇಶದ ಪ್ರಧಾನಿಯನ್ನಾಗಿಸಬೇಕು ಎಂಬುದು ನಮ್ಮ ಗುರಿ. ಕೇಂದ್ರದಿಂದ ಅನೇಕ ಯೋಜನೆಗಳು ಜಿಲ್ಲೆಗೆ ಸಿಕ್ಕಿದೆ ಎಂದು ತಿಳಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ನರೇಂದ್ರ ಹೊನ್ನಾಳ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours