ಪ್ರತಿ  ಹೋಬಳಿಗೆ ಒಂದರಂತೆ ಮಾದರಿ ಶಾಲೆ ನಿರ್ಮಾಣ ಮಾಡಲು ಉದ್ದೇಶ: ಸಂಸದ ನಾರಾಯಣಸ್ವಾಮಿ.

 

ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಸಂಸದ ಎ. ನಾರಾಯಣಸ್ವಾಮಿ ಹೇಳಿಕೆ
ಹೋಬಳಿಗೊಂದು ಮಾದರಿ ಶಾಲೆ ನಿರ್ಮಾಣ
ಚಿತ್ರದುರ್ಗ,ಏಪ್ರಿಲ್19:
 ಚಿತ್ರದುರ್ಗ ಜಿಲ್ಲೆಯ ಪ್ರತಿ  ಹೋಬಳಿಗೆ ಒಂದರಂತೆ ಮಾದರಿ ಶಾಲೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಂಸದ ಎ. ನಾರಾಯಣಸ್ವಾಮಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
 ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಸೋಮವಾರ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‍ಆರ್) ಅಡಿಯಲ್ಲಿ ಅನುದಾನ ಬಳಕೆ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
 ಗ್ರಾಮ ಪಂಚಾಯಿತಿವಾರು ಶಾಲೆಗಳಿಗೆ ಅಗತ್ಯವಾಗಿರುವ ಶಾಲಾ ಕೊಠಡಿಗಳ ಮೇಲ್ಛಾವಣೆ, ಕಾಂಪೌಂಡ್ ನಿರ್ಮಾಣ, ಸುಣ್ಣ-ಬಣ್ಣ ಮುಂತಾದ ಸಣ್ಣ ಪುಟ್ಟ ರಿಪೇರಿ ಇರುವಂತಹ ಶಾಲೆಗಳ ವಿವರವನ್ನು ಪಟ್ಟಿಮಾಡಿ ಒಂದು ವಾರದೊಳಗೆ ಪ್ರಸ್ತಾವ ಸಲ್ಲಿಸಬೇಕು ಎಂದು ಹೇಳಿದರು.
 ಸಾಮಾಜಿಕ ಹೊಣೆಗಾರಿಕೆ ನಿಧಿ ಅಡಿಯಲ್ಲಿ ಮಾದರಿ ಶಾಲೆಗಳ ನಿರ್ಮಾಣಕ್ಕೆ ಸಾಕಷ್ಟು ಅವಕಾಶಗಳು ಇವೆ. ಹಾಗಾಗಿ ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ಇರುವ ಶಾಲೆಗಳ  ಆರಂಭವಾದ ವರ್ಷ, ಶಾಲೆಯ ಇತಿಹಾಸ, ಶಾಲೆಯ ಕಾರ್ಯವೈಖರಿ, ಶಾಲೆಯ ವಿಸ್ತೀರ್ಣ, ಶಾಲೆಯಲ್ಲಿರುವ ಮಕ್ಕಳ ಸಂಖ್ಯೆ, ಶಾಲೆಯ ಸಾಧನೆ ಹೀಗೆ ಮುಂತಾದ ವಿಷಯಗಳ ಬಗ್ಗೆ ಸವಿಸ್ತರವಾದ ವರದಿ ಸಿದ್ಧಪಡಿಸುವಂತೆ ತಾಕೀತು ಮಾಡಿದರು.
ಸಾಮಾಜಿಕ ಹೊಣೆಗಾರಿಕೆ ನಿಧಿ ಅಡಿಯಲ್ಲಿ ಸಾಕಷ್ಟು ಅನುದಾನ  ಶಾಲೆಗಳ ಅಭಿವೃದ್ಧಿಗಾಗಿ ಮೀಸಲಿದೆ. ಇದನ್ನು ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ವಯಂ ಪ್ರೇರಿತವಾಗಿ ಬಂದು ಸದುಪಯೋಗಪಡಿಸಿಕೊಂಡು ಶಾಲೆಗಳ ಅಭಿವೃದ್ಧಿಗಾಗಿ ಶ್ರಮವನ್ನು ವಹಿಸಬೇಕು ಎಂದರು. ಮುಂಬರುವ ಶೈಕ್ಷಣಿಕ ವರ್ಷದೊಳಗೆ ಜಿಲ್ಲೆಯ ಪ್ರತಿ ಕ್ಷೇತ್ರದಲ್ಲಿ ಸಾಮಾಜಿಕ ಹೊಣೆಗಾರಿಕೆ ನಿಧಿ ಅನುದಾನದಲ್ಲಿ ಮಾದರಿ ಶಾಲೆ ಆರಂಭವಾಗಿರಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಶಿಕ್ಷಕರು ಮಕ್ಕಳಿಗೆ ಯಾವ ವಿಧಾನದಲ್ಲಿ ಬೋಧನೆ ಮಾಡಬೇಕು. ಮಕ್ಕಳು ಕಲಿಕೆಯಲ್ಲಿ ಹೇಗೆ ಆಸಕ್ತಿಯುತವಾಗಿ ತೊಡಗಿಸಿಕೊಳ್ಳಬೇಕು ಎಂಬುವುದರ ಕುರಿತು ನುರಿತ ವಿಷಯ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಕರಿಗೆ ತರಬೇತಿ ನೀಡಿ ಎಂದು ಹೇಳಿದರು.  
ಇದಕ್ಕೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ರವಿಶಂಕರ್ ರೆಡ್ಡಿ, ಉತ್ತಮ ಫಲಿತಾಂಶ ಹೆಚ್ಚಿಸುವ ದೃಷ್ಟಿಯಿಂದ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಇಲಾಖೆಯಿಂದ ವಿಷಯವಾರು ವಿಶೇಷ ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ಶಿಕ್ಷಕರಿಗೂ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಬೇತಿಗಳನ್ನು ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಸಹ ನಿರ್ದೇಶಕರಾದ ಹೆಚ್.ಮಂಜುನಾಥ್,  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ರವಿಶಂಕರ್ ರೆಡ್ಡಿ, ಡಯಟ್ ಪ್ರಾಂಶುಪಾಲ ಎಸ್‍ಕೆಬಿ ಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

[t4b-ticker]

You May Also Like

More From Author

+ There are no comments

Add yours