ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ.

 

ಚಿತ್ರದುರ್ಗ: ಇಂದು ನಗರದ ಎ.ಪಿ.ಎಂ.ಪಿ ಬಳಿಯ ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಆವರಣದಲ್ಲಿ 2021-22 ನೇ ಸಾಲಿನ ಮುಂಗಾರು ಹಂಗಾಮ ಪ್ರಯುಕ್ತ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು.
ಚಿತ್ರದುರ್ಗ,ಮೇ.25:
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯ ಉತ್ತಮವಾಗುವ ನಿರೀಕ್ಷೆ ಇದೆ. ಹಾಗಾಗಿ ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಿ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಎಪಿಎಂಸಿ ಬಳಿಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿತ್ತನೆಬೀಜಗಳಾದ ಶೇಂಗಾ, ಉದ್ದು, ಮೆಕ್ಕೆಜೋಳ ಸೇರಿದಂತೆ ಬಿತ್ತನೆ ಬೀಜಕ್ಕೆ ಸಬ್ಸಿಡಿ ನಿಗಧಿಪಡಿಸಲಾಗಿದ್ದು,  ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನಿಗಧಿತ ಸಮಯದಲ್ಲಿ ಕೃಷಿ ಪರಿಕರ, ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಬಾರಿ ಉತ್ತಮವಾಗಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಕಾರ್ಯವಾಗುವ ಆಶಾಭಾವನೆ ಇದೆ.ಹಾಗಾಗಿ ಕೃಷಿ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮವಹಿಸಿ ರೈತರಿಗೆ ಗುಣಮಟ್ಟದ ಬೀಜ ವಿತರಣೆಗೆ ಅಗತ್ಯಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.  
ಕಳೆದ ವರ್ಷ ರಾಜ್ಯ ಮತ್ತು ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ತುಂಬಾ ಸಮಸ್ಯೆಯಾಯಿತು. ಆದಾಗ್ಯೂ ಜಿಲ್ಲೆಗೆ ಅಗತ್ಯಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ಮಾಡಿ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಯಿತು ಎಂದರು.
ರಿಯಾಯಿತಿ ದರದ ಬಿತ್ತನೆ ಬೀಜ ವಿವರ;
2021ರ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ ವತಿಯಿಂದ ರಿಯಾಯಿತಿ ದರಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿವಿಧ ಬಿತ್ತನೆ ಬೀಜಗಳಾದ ಜೋಳ, ತೊಗರಿ, ಅಲಸಂದೆ, ರಾಗಿ, ನವಣೆ, ನೆಲಗಡಲೆ, ಸೂರ್ಯಕಾಂತಿ, ಹಾಗೂ ಮುಸುಕಿನ ಜೋಳ ಬಿತ್ತನೆ ಬೀಜಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ.50ರ ರಿಯಾಯಿತಿದರದಲ್ಲಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ.75ರ ರಿಯಾಯಿತಿ ದರಲ್ಲಿ ಎಲ್ಲ ವರ್ಗದ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್ ಅಥವಾ ಅವರ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ವಿತರಣೆ ಮಾಡಲಾಗುವುದು.

 ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮವು ತಾಲ್ಲೂಕಿನ ಎಲ್ಲಾ ಹೋಬಳಿ ರೈತ ಸಂಪರ್ಕಗಳ ಮುಖಾಂತರ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ವಿತರಿಸಲಾಗುವುದು.
ರೈತರು ತಮ್ಮ ಎಫ್‍ಐಡಿ ಕಾರ್ಡ್ ಅಥವಾ ಆಧಾರ್ ಕಾರ್ಡ್ ಸಲ್ಲಿಸಿ ಕೋವಿಡ್ ನಿಯಮಗಳನ್ನು ಪಾಲಿಸಿ ಬಿತ್ತನೆ ಬೀಜಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದೆ.
ಪ್ರಸ್ತುತ ರಸಗೊಬ್ಬರ ದಾಸ್ತಾನು ಸಾಕಷ್ಟ ಲಭ್ಯವಿದ್ದು, ತಾಲ್ಲೂಕಿನ ಎಲ್ಲ ರೈತ ಬಾಂಧವರಲ್ಲಿ ತಮ್ಮ ಹತ್ತಿರದ ಖಾಸಗಿ ರಸಗೊಬ್ಬರ ಮಾರಾಟಗಾರರು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಹಳೆಯ ದರದಲ್ಲಿ ರಸಗೊಬ್ಬರಗಳನ್ನು ಪಡೆಯಲು ಕೋರಿದೆ. ಉದಾಹರಣೆಗೆ ಇಫ್ಕೋ ಸಂಸ್ಥೆಯ ರಸಗೊಬ್ಬರಗಳಾದ (ಪ್ರತಿ ಚೀಲಕ್ಕೆ) ಡಿಎಪಿ-ರೂ.1200,  10:26:26-ರೂ.1175, 20:20:0:13-ರೂ.975, 12:32:16-ರೂ.1185 ದರದಲ್ಲಿ ರಸಗೊಬ್ಬರವನ್ನು ಪಡೆಯಬಹುದು.
 ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ರಮೇಶ್‍ಕುಮಾರ್, ಉಪನಿರ್ದೇಶಕ ಹುಲಿರಾಜ್, ಸಹಾಯಕ ಕೃಷಿ ನಿರ್ದೇಶಕರಾದ ಎನ್.ಚಂದ್ರಕುಮಾರ್ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ರೈತರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours