ಫಲ-ಪುಷ್ಪ ಪ್ರದರ್ಶನಕ್ಕೆ ಸಚಿವ ಡಿ.ಸುಧಾಕರ್ ಚಾಲನೆ,ಕಣ್ಮನ ಸೆಳೆಯುತಿರುವ ಫಲ ಪುಷ್ಪ ಪ್ರದರ್ಶನ

 

ಚಿತ್ರದುರ್ಗ (ಕರ್ನಾಟಕ ವಾರ್ತೆ)ಫೆ.02:
ಚಿತ್ರದುರ್ಗ ನಗರದ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ  31ನೇ ಫಲ-ಪುಷ್ಪ ಪ್ರದರ್ಶನಕ್ಕೆ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಶುಕ್ರವಾರ ಚಾಲನೆ ನೀಡಿದರು.
ಫಲ-ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಡಿ.ಸುಧಾಕರ್, ಜಿಲ್ಲೆಯ ರೈತರು ಹೆಚ್ಚು ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ತರಕಾರಿ, ಫಲ-ಪುಷ್ಪ ಬೆಳೆಗಳನ್ನು ಬೆಳೆಯುವ ಮೂಲಕ ತೋಟಗಾರಿಕೆ ಬೆಳೆಗಳನ್ನು ಅವಲಂಬಿಸಿದ್ದಾರೆ. ಅದರಂತೆ ಚಿತ್ರದುರ್ಗ ಜಿಲ್ಲೆಯ ರೈತರು ಕೂಡ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ತೋಟಗಾರಿಕೆ ಬೆಳೆಗಳಿಗೆ ಅವಶ್ಯಕ ಇರುವ ಸರ್ಕಾರದ ವತಿಯಿಂದ ಅಥವಾ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಜಿಲ್ಲೆಯ ಆಸಕ್ತ ಹಾಗೂ ಪ್ರಗತಿಪರ ರೈತರನ್ನು ಫಲ-ಪುಷ್ಪ ಪ್ರದರ್ಶನ ವೀಕ್ಷಿಸಲು ಕ್ರಮಕೈಗೊಳ್ಳುವ ಮೂಲಕ ತೋಟಗಾರಿಕೆ ಬೆಳೆಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ಕೆಲಸ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಹೇಳಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಫಲ-ಪುಷ್ಪ ಪ್ರದರ್ಶನ ವೀಕ್ಷಿಸುವ ಮೂಲಕ ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಗಳ ಮಾಹಿತಿ ಪಡೆದು, ತೋಟಗಾರಿಕೆ ಬೆಳೆಗಳನ್ನು ಬೆಳೆದು ಉತ್ತಮ ಆದಾಯ ಗಳಿಸಬೇಕು ಎಂದರು.
ಫಲ-ಪುಷ್ಪ ಪ್ರದರ್ಶನದಲ್ಲಿ ಭಾರತದ ಸಂವಿಧಾನದ ಬಗ್ಗೆ ಕಲಾಕೃತಿ, ಐತಿಹಾಸಿಕ ಚಿತ್ರದುರ್ಗ ಕೋಟೆಯಲ್ಲಿ ಮಳೆ ನೀರು ಕೊಯ್ಲು ಘಟಕಗಳು, ತೋಟಗಾರಿಕೆ ಬೆಳೆಗಳ ಮಿಶ್ರ ಕೃಷಿ ಪದ್ದತಿ ಅಳವಡಿಕೆ ಮಾದರಿ ಸೇರಿದಂತೆ ರೈತರಿಗೆ ಪೂರಕವಾದ, ಉಪಯುಕ್ತವಾದ ಮಾಹಿತಿ ಇದೆ. ಜಿಲ್ಲೆಯ ರೈತರು, ಸಾರ್ವಜನಿಕರು ಫಲ-ಪುಷ್ಪ ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಚಿತ್ರದುರ್ಗ ತಾಲ್ಲೂಕಿನಲ್ಲಿ ಹೆಚ್ಚಾಗಿ ಪುಷ್ಪ ಬೆಳೆ ಬೆಳೆಯುತ್ತಾರೆ. ಹಿರಿಯೂರು ತಾಲ್ಲೂಕಿನಲ್ಲಿ ಫಲ ಬೆಳೆಯುತ್ತಾರೆ. ಫಲ-ಪುಷ್ಪ ಜಿಲ್ಲೆಯ ಎಲ್ಲಾ ತಾಲ್ಲೂಕಿನ ರೈತರಿಗೂ ಪರಿಚಯಿಸುವ ಕೆಲಸವಾಗಬೇಕು ಎಂದು ತಿಳಿಸಿದ ಅವರು, ಜಿಲ್ಲೆಯ ಎಲ್ಲ ಆಸಕ್ತ ರೈತರು ಫಲ-ಪುಷ್ಪ ಪ್ರದರ್ಶನ ವೀಕ್ಷಣೆಗೆ ವ್ಯವಸ್ಥೆ ಮಾಡಿ, ಜಿಲ್ಲೆಯ ರೈತರು ಫಲ-ಪುಷ್ಪ ಬೆಳೆಯಲು ಪ್ರೋತ್ಸಾಹ ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಜಿಲ್ಲೆಯ ರೈತರಿಗೆ, ಸಾರ್ವಜನಿಕರಿಗೆ ಉತ್ತಮ ಸಂದೇಶ ನೀಡುವ ಫಲ-ಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ ಎಂದು ತಿಳಿಸಿದ ಅವರು, ಜಿಲ್ಲೆಯ  ರೈತರಿಗೆ ಅವಶ್ಯಕವಿರುವ ಕೋಲ್ಡ್ ಸ್ಟೋರೇಜ್ ಘಟಕ ಹಾಗೂ ಜಿಲ್ಲೆಗೆ ಗ್ಲಾಸ್‍ಹೌಸ್ ಮಂಜೂರು ಮಾಡಿ, ಮುಂದಿನ ಬಾರಿಯ ಫಲ-ಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಗ್ಲಾಸ್‍ಹೌಸ್‍ನಲ್ಲಿಯೇ ಆಯೋಜನೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಮನವಿ ಮಾಡಿದರು.
ಪುಷ್ಪ ರಚಿಕರಿಗೆ ಮುದ ನೀಡಿದ ಫಲ-ಪುಷ್ಪ: ಚಿತ್ರದುರ್ಗ ನಗರದ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಜನರ ಕಣ್ಮನ ಸೆಳೆಯುತ್ತಿದೆ.
 ಜಿಲ್ಲೆಯ ಕೃಷಿಗೆ ಅವಶ್ಯಕವಾಗಿರುವ ಮಳೆ ನೀರು ಕೊಯ್ಲು, ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರಿಗೆ ತೋಟಗಾರಿಕೆ ಬೆಳೆಗಳ ವೈಜ್ಞಾನಿಕ ಮಾಹಿತಿ, ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ನೀರು ಬಳಕೆಯೊಂದಿಗೆ ವಿವಿಧ ತೋಟಗಾರಿಕೆ ಬೆಳೆಗಳ ಮಿಶ್ರ ಕೃಷಿ ಪದ್ದತಿಯನ್ನು ಅಳವಡಿಕೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಫಲ-ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಉತ್ಪನ್ನಗಳ ಮಾರಟ 

ಫಲ-ಪುಷ್ಪ ಪ್ರದರ್ಶನದ ಅಂಗವಾಗಿ ಸರ್ಕಾರದ ವಿವಿಧ ಯೋಜನೆಗಳು, ಕಾರ್ಯಕ್ರಮಗಳ, ವಿವಿಧ ಇಲಾಖೆಗಳು ಕಲ್ಪಿಸುವ ಸೌಲಭ್ಯಗಳು ವಿವರಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಮಳಿಗೆಗಳನ್ನು ತೆರೆಯಲಾಗಿದೆ. ಜೊತೆಗೆ ಸ್ತ್ರೀಶಕ್ತಿ ಸಂಘಗಳ ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ.
ವಿವಿಧ ಹೂಗಳಿಂದ ಅಲಂಕರಿಸುವ ಭಾರತ ಸಂವಿಧಾನದ ಕಲಾಕೃತಿ, ಇತ್ತೀಚಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಅವರು ಚಂದ್ರಯಾನ-3 ಯಶ್ವಸಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ್ದು, ಪ್ರಪಂಚದ ಮೊದಲನೇ ದೇಶವಾಗಿರುತ್ತದೆ. ಇದು ದೇಶದ ಹೆಮ್ಮೆಯ ವಿಷಯವಾಗಿದ್ದು, ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಗ್ಯಾನ್ ಪ್ರತಿಕೃತಿ, ಐತಿಹಾಸಿಕ ಚಿತ್ರದುರ್ಗ ಕೋಟೆಯ ಗೋಪಾಲಸ್ವಾಮಿ ಹೊಂಡ, ಅಕ್ಕತಂಗಿ ಹೊಂಡ, ಸಿಹಿನೀರು ಹೊಂಡ ಹಾಗೂ ಸಂತೆ ಹೊಂಡಗಳು ಒಂದಕ್ಕೊಂದು ಸಂಪರ್ಕಿಸಿರುವ ಮಳೆ ನೀರು ಕೊಯ್ಲು ಘಟಕದ ಮಾದರಿಗಳ ಪ್ರದರ್ಶನ, ವಾಣಿವಿಲಾಸ (ಮಾರಿಕಣಿವೆ) ಅಣೆಕಟ್ಟು ಕಟ್ಟಿ ಜಿಲ್ಲೆಯ ಜನರ ದಾಹ ತಣಿಸಿದ, ರೈಲು ಮಾರ್ಗ, ರಸ್ತೆ ಮಾರ್ಗ ಕಲ್ಪಿಸಿದ ಮಹಾಚೇತನ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಕೃತಿ, ವಿಶ್ರ ತೋಟಗಾರಿಕೆ ಕೃಷಿ ಮಾದರಿ, 12ನೇ ಶತಮಾನದಲ್ಲಿಯೇ ಸಮಸಮಾಜದ ಚಿಂತನೆಯಲ್ಲಿ ಅನುಭವ ಮಂಟಪ ಸ್ಥಾಪಿಸಿ ಸರ್ವಸಮಾನತೆಯ ಕನಸನ್ನು ಸರ್ವಕಾಲಿಕ ನನಸನ್ನಾಗಿಸಿದ ಧೀಮಂತ ಶಕ್ತಿ ಬಸವಣ್ಣನವರ ಕಲಾಕೃತಿ, ಇದರ ಜೊತೆಗೆ ಶ್ರೀ ಶಿವಕುಮಾರ ಸ್ವಾಮಿಜಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಶ್ರೀ ಪುಟ್ಟರಾಜ ಗವಾಯಿಗಳ ಪ್ರತಿಕೃತಿಗಳು, ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ ವಿವಿಧ ಪುಷ್ಪ ಸಸಿಗಳು, ತಳಿಗಳು ಫಲ-ಪುಷ್ಪ ಪ್ರದರ್ಶನದಲ್ಲಿ ಗಮನಸೆಳೆಯುತ್ತಿವೆ.
ಯೋಜನಾಧಿಕಾರಿ ಸತೀಶ್ ರೆಡ್ಡಿ, ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ತಹಶೀಲ್ದಾರ್ ಡಾ.ನಾಗವೇಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಪದನಿಮಿತ್ತ ಕಾರ್ಯದರ್ಶಿ ಬಿ.ದೇವರಾಜು, ಜಿಲ್ಲಾ ತೋಟಗಾರಿಕೆ ಸಂಘದ ಖಜಾಂಚಿ ನಾಗರಾಜ ಬೇದ್ರೆ, ಸಹಕಾರ್ಯದರ್ಶಿ ಗಿರೀಶ್ ಇದ್ದರು.
[t4b-ticker]

You May Also Like

More From Author

+ There are no comments

Add yours