ಸರ್ಕಾರದ ಯೋಜನೆಗಳ ಯಶಸ್ಸಿಗೆ ಪತ್ರಕರ್ತರು ಭಾಗಿಯಾಗಬೇಕು:ಸಿಇಓ ಎಂ.ಎಸ್.ದಿವಾಕರ

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಮಾ.17:
 ಸರ್ಕಾರದ ಯೋಜನೆಗಳ ಮಾಹಿತಿ ಪಡೆಯುವ ಮೂಲಕ ಸರ್ಕಾರದ ಯೋಜನೆಗಳ ಯಶಸ್ಸಿಗೆ ಕಣ್ಣು ಮತ್ತು ಕಿವಿಯಾಗಿ ಪತ್ರಕರ್ತರು ಭಾಗಿಯಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ನಗರದ ಐಶ್ವರ್ಯ ಫೋರ್ಟ್ ಉತ್ಸವ ಹಾಲ್‍ನಲ್ಲಿ ಶುಕ್ರವಾರ ಭಾರತ ಸರ್ಕಾರದ ವಾರ್ತಾಶಾಖೆ (ಪಿಐಬಿ) ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ “ವಾರ್ತಾಲಾಪ” ಚಿತ್ರದುರ್ಗ ಜಿಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಲು ಕಾರ್ಯಾಗಾರ ಆಯೋಜಿಸಿರುವುದು ಉತ್ತಮ ಕಾರ್ಯ. ಇದೇ ರೀತಿಯಾಗಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಲು ಕಾರ್ಯಗಾರ ಏರ್ಪಡಿಸುವ ಚಿಂತನೆ ಇದೆ ಎಂದು ಹೇಳಿದರು.
ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಜೊತೆಗೆ ಪತ್ರಿಕಾರಂಗವನ್ನೂ ನಾಲ್ಕನೆ ಅಂಗ ಎಂದು ಕರೆಯುತ್ತೇವೆ. ಆಡಳಿತದಲ್ಲಿ ನಡೆಯುವ ಒಳ್ಳೆಯದು ಹಾಗೂ ಕೆಟ್ಟದನ್ನು ತಿಳಿಸುವ ಜೊತೆಗೆ ಎಚ್ಚರಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ.  ಮಾಧ್ಯಮಗಳು ಆಡಳಿತ ಮತ್ತು ಅಭಿವೃದ್ಧಿಯ ಕಣ್ಣು ಮತ್ತು ಕಿವಿ ಯಂತೆ ಕಾರ್ಯ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಅಧಿಕಾರಿಗಳ ಒತ್ತಡದ ಕೆಲಸ ಕಾರ್ಯದಿಂದಾಗಿ ಕೆಲವೊಂದು ವಿಚಾರಗಳು ಗೊತ್ತಾಗುವುದಿಲ್ಲ. ಅಧಿಕಾರಿಯ ಯಶಸ್ಸಿನ ಹಿಂದೆ ಪತ್ರಕರ್ತರು ಇರುತ್ತಾರೆ.  ಪತ್ರಕರ್ತರು ಸಾರ್ವಜನಿಕರಿಗೆ ಹತ್ತಿರದಲ್ಲಿದ್ದು, ಈ ಹಿನ್ನಲೆಯಲ್ಲಿ ಪತ್ರಕರ್ತರಿಗೆ ಸರ್ಕಾರದ ಯೋಜನೆಗಳ ಮಾಹಿತಿ ಅತ್ಯವಶ್ಯಕವಾಗಿರುತ್ತದೆ. ಈ ಉದ್ದೇಶದಿಂದ ಕೇಂದ್ರ ಸರ್ಕಾರ ಕಾರ್ಯಾಗಾರದ ಮೂಲಕ ಸರ್ಕಾರದ ಅನೇಕ ಯೋಜನೆಗಳ ಮಾಹಿತಿಯನ್ನು ಮಾಧ್ಯಮದವರಿಗೆ ನೀಡಲಾಗುತ್ತಿದೆ. ಮಾಧ್ಯಮ ಪ್ರತಿನಿಧಿಗಳು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿಸುವುದರಿಂದ ಸರ್ಕಾರದ ಯೋಜನೆಗಳ ಯಶಸ್ವಿಗೆ ಸಹಕಾರಿಯಾಗಲಿದೆ ಎಂದರು.
ಭಾರತ ಸರ್ಕಾರದ ವಾರ್ತಾ ಶಾಖೆ ಬೆಂಗಳೂರು ಕಚೇರಿಯ ಉಪನಿರ್ದೇಶಕ ಎಸ್. ಪ್ರಕಾಶ್ ಮಾತನಾಡಿ, ಪ್ರೆಸ್ ಬ್ಯೂರೋ ಆಫ್ ಇನ್‍ಫಾರಮೇಷನ್ (ಪಿ.ಐ.ಬಿ) ಕೇಂದ್ರ ಸರ್ಕಾರ ಹಾಗೂ ಮಾಧ್ಯಮದವರ ನಡುವೆ ಸಂಪರ್ಕ ಸೇತುವೆಯಾಗಿ ಕರ್ತವ್ಯ ನಿರ್ವಹಿಸುತ್ತಿದೆ.  ಸರ್ಕಾರದ ನೀತಿ ಹಾಗೂ ಯೋಜನೆಗಳ ಕುರಿತು ಮಾಧ್ಯಮ ಸಂಸ್ಥೆಗಳಿಗೆ ಮಾಹಿತಿ ನೀಡಿ ಜನರಿಗೆ ತಲುಪಿಸುತ್ತದೆ. ಇದರ ಜೊತೆಗೆ ಮಾಧ್ಯಮದಲ್ಲಿ ವ್ಯಕ್ತವಾಗುವ ಸಾರ್ವಜನಿಕರ ಅಭಿಪ್ರಾಯಗಳನ್ನು  ಸಂಗ್ರಹಿಸಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ಸರ್ಕಾರಕ್ಕೆ ವರದಿಯನ್ನು ಕಳುಹಿಸಿಕೊಡುವ ಕೆಲಸವನ್ನೂ ನಿರ್ವಹಿಸುತ್ತದೆ. ವಾರ್ತಾಲಾಪ ಪಿ.ಐ.ಬಿ ನ ಮುಖ್ಯ ಕಾರ್ಯಕ್ರಮವಾಗಿದೆ. ಇದರ ಮೂಲಕ ಪ್ರಸ್ತುತ ಸರ್ಕಾರದ ಹಲವು ಯೋಜನೆಗಳ ಬಗ್ಗೆ ಪ್ರಚಲಿತ ಮಾಹಿತಿಗಳನ್ನು ಮಾಧ್ಯಮ ಸಂಸ್ಥೆಗಳಿಗೆ ನೀಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಕಾರ್ಯಗಾರಕ್ಕೆ ಆಗಮಿಸಿ ಯೋಜನೆಗಳ ಕುರಿತು ಪೂರ್ಣ ಮಾಹಿತಿಯನ್ನು ಮಾಧ್ಯಮಗಳಿಗೆ ವಿವರಗಳನ್ನು ನೀಡುವರು. ಇದರ ಸದುಯೋಗವನ್ನು ಮಾಧ್ಯಮ ಮಿತ್ರರು ಪಡೆದುಕೊಳ್ಳುವಂತೆ ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾತನಾಡಿ, ಸರ್ಕಾರದ ಯೋಜನೆಗಳ ಕುರಿತಾದ ಮಾಹಿತಿ ಜನರಿಗೆ ತಲುಪಲು ಮಾಧ್ಯಮಗಳ ಪಾತ್ರ ಅತ್ಯಗತ್ಯ. ದೃಶ್ಯ ಮತ್ತು ಮುದ್ರಣ ಮಾಧ್ಯಮದ ಜೊತೆಗೆ ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡರೆ ಯೋಜನೆಗಳ ಮಾಹಿತಿಯನ್ನು ತುಂಬಾ ಸುಲಭವಾಗಿ ಹಾಗೂ ತ್ವರಿತಗತಿಯಲ್ಲಿ ಜನರಿಗೆ ಮಾಹಿತಿ ತಲುಪಿಸಲು ಸಾಧ್ಯವಿದೆ.   ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ಪತ್ರಿಕಾ ಮತ್ತು ದೃಶ್ಯ ಮಾಧ್ಯಮ ಮಾಡಬೇಕು. ಇದು ಅವರ ಸಾಮಾಜಿಕ ಹೊಣೆಗಾರಿಕೆಯೂ ಹೌದು.  ಆದರೆ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಆದ್ಯತೆ ವಿಷಯಗಳೇ ಬೇರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮಾಧ್ಯಮಗಳು ಸಾಮಾಜಿಕ ಹೊಣೆಗಾರಿಕೆ, ಸಾಮಾಜಿಕ ಸಾಮರಸ್ಯ, ಕೋಮು ಸಾಮರಸ್ಯ ಮೂಡುವಂತಹ ಕೆಲಸದ ಜೊತೆಗೆ ಸಾಮಾಜಿಕ ಹೊಣೆಗಾರಿಕೆ ಅರಿತು ಉತ್ತಮ ವಿಚಾರಗಳನ್ನು ಜನರಿಗೆ ತಿಳಿಸಿದರೆ ಉತ್ತಮ ಸಮಾಜ ನಿರ್ಮಿಸಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಾಗಾರದ ಅಂಗವಾಗಿ  ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸರ್ಕಾರ ಹಲವು ಯೋಜನೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.  ಲೀಡ್ ಬ್ಯಾಂಕ್ ವ್ಯವಸ್ಥಾಪಕ ಚಂದ್ರಯ್ಯ ಬಿ.ಹಿರೇಮಠ್ ಅವರು ಪ್ರಧಾನ ಮಂತ್ರಿ ಜನ್‍ಧನ್ ಯೋಜನೆ, ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮಹಾಂತಪ್ಪ ಜಿ.ಕನ್ನೂರು ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನ ಕುರಿತು ಮಾಹಿತಿ ನೀಡಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪಾತಪ್ಪ ಅವರು ಗ್ರಾಮೀಣ ರಸ್ತೆಗಳು ಕುರಿತು ವಿವರ ನೀಡಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆ ಕುರಿತು ವಸತಿ ಯೋಜನೆ ನೋಡಲ್ ಅಧಿಕಾರಿ ಲೋಕೇಶ್ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಬೆಂಗಳೂರಿನ ಪಿಐಬಿ ಮಾಧ್ಯಮ ಮತ್ತು ಸಂವಹನ ಅಧಿಕಾರಿ ಪಿ.ಜಿ.ಪಾಟೀಲ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ ಗೌಡಗೆರೆ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಸಿಬ್ಬಂದಿ ಸೇರಿದಂತೆ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours