ಜಗದೀಶ್ ಶೆಟ್ಟರ್ ಸೇರಿ ಮೂರು ಜನ ಎಂಎಲ್ಸಿ ಸ್ಥಾನಕ್ಕೆ ಅಂತಿಮ

 

ಬೆಂಗಳೂರು, ಜೂ.20: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಎನ್.ಎಸ್.ಬೋಸರಾಜು ಹಾಗೂ ತಿಪ್ಪಣ್ಣಪ್ಪ ಕಮಕನೂರು ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಜಗದೀಶ್ ಶೆಟ್ಟರ್, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. ಇದೀಗ, ಕಾಂಗ್ರೆಸ್ ಹೈಕಮಾಂಡ್ ಅವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವ ಮೂಲಕ ಅವರ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಬಾಬುರಾವ್ ಚಿಂಚನಸೂರು, ಆರ್.ಶಂಕರ್ ಹಾಗೂ ಲಕ್ಷ್ಮಣ ಸವದಿ, ಇತ್ತೀಚೆಗೆ ನಡೆದ ವಿಧಾನಸಭೆಯ ಚುನಾವಣೆ ವೇಳೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಪೈಕಿ ಬಾಬುರಾವ್ ಚಿಂಚನಸೂರ್ ಹಾಗೂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆರ್.ಶಂಕರ್ ಎನ್‍ಸಿಪಿ ಪಕ್ಷದಿಂದ ಕಣಕ್ಕಿಳಿದು ಸೋಲು ಅನುಭವಿಸಿದ್ದರು.

ಬಾಬೂರಾವ್ ಚಿಂಚನಸೂರ್ ಅವರ ಸದಸ್ಯತ್ವದ ಅವಧಿಯು 2024ರ ಜೂ.17ರ ವರೆಗೆ, ಆರ್.ಶಂಕರ್ ಅವರ ಸದಸ್ಯತ್ವ ಅವಧಿಯು 2026ರ ಜೂ.30 ಹಾಗೂ ಲಕ್ಷ್ಮಣ ಸವದಿ ಅವರ ಸದಸ್ಯತ್ವ ಅವಧಿ 2028ರ ಜೂ.14ರ ವರೆಗೆ ಇತ್ತು. ಲಕ್ಷ್ಮಣ ಸವದಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಜಗದೀಶ್ ಶೆಟ್ಟರ್, ಆರ್.ಶಂಕರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ತಿಪ್ಪಣ್ಣಪ್ಪ ಕಮಕನೂರ್ ಹಾಗೂ ಬಾಬುರಾವ್ ಚಿಂಚನಸೂರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಎನ್.ಎಸ್.ಬೋಸರಾಜು ಅವರನ್ನು ಅಭ್ಯರ್ಥಿಯನ್ನಾಗಿಸಲಾಗಿದೆ.

ವಿಧಾನ ಪರಿಷತ್ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ(ಜೂ.20) ಅಂತಿಮ ದಿನವಾಗಿದ್ದು, ಜೂ.21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ.23ರಂದು ಉಮೇದುವಾರಿಕೆ ಹಿಂಪಡೆಯಲು ಅಂತಿಮ ದಿನವಾಗಿದ್ದು, ಜೂ.30ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಅಂದು ಸಂಜೆ 5 ಗಂಟೆ ಬಳಿಕ ಮತಗಳ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.

ಅವಿರೋಧ ಆಯ್ಕೆ ಸಾಧ್ಯತೆ?: ‘ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳನ್ನು ಹೊಂದಿದ್ದು, ಇಬ್ಬರು ಪಕ್ಷೇತರರ ಬೆಂಬಲದೊಂದಿಗೆ 137 ಸ್ಥಾನಗಳ ಸಂಖ್ಯಾಬಲ ಹೊಂದಿದೆ. ಈಗಾಗಲೆ ಜೆಡಿಎಸ್ ಪಕ್ಷವು ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ. ಒಂದು ವೇಳೆ ಪ್ರಮುಖ ಪ್ರತಿಪಕ್ಷ ಬಿಜೆಪಿಯೂ ಚುನಾವಣಾ ಕಣದಿಂದ ಹಿಂದಕ್ಕೆ ಸರಿದರೆ ಕಾಂಗ್ರೆಸ್ ಪಕ್ಷದ ಮೂವರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವ ಸಾಧ್ಯತೆಯಿದೆ.

ಇನ್ನು ಜಗದೀಶ್ ಶೆಟ್ಟರ್ ಅವರು ಆಯ್ಕೆಗೊಂಡ ಅವಧಿಯಿಂದ 2028ರ ಜೂ.14ರವರೆಗೆ, ತಿಪ್ಪಣ್ಣಪ್ಪ ಕಮಕನೂರು 2026ರ ಜೂ.30ರವರೆಗೆ ಹಾಗೂ ಸಚಿವ ಎನ್.ಎಸ್.ಬೋಸರಾಜು 2024ರ ಜೂ.17ರವರೆಗೆ ಸದಸ್ಯರಾಗಿರುತ್ತಾರೆ.

[t4b-ticker]

You May Also Like

More From Author

+ There are no comments

Add yours