ಬಾಲಭವನ ನಿರ್ವಹಣೆಗೆ ಅಸಡ್ಡೆ ಅವ್ಯವಸ್ಥೆ ಕುರಿತು ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ತೀವ್ರ ಅಸಮಾಧಾನ

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜ.24:
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿತ್ರದುರ್ಗ ನಗರದಲ್ಲಿ ನಿರ್ಮಾಣ ಮಾಡಲಾಗಿರುವ ಜಿಲ್ಲಾ ಬಾಲ ಭವನದ ಇಂದಿನ ಸ್ಥಿತಿ ಅತ್ಯಂತ ಭೀಕರ ಅನಿಸುತ್ತಿದೆ. ಬಾಲ ಭವನ ನಿರ್ವಹಣೆಗೆ ಅಧಿಕಾರಿಗಳು ಅಸಡ್ಡೆ ತೋರುತ್ತಿರುವುದೇ ಈ ಸ್ಥಿತಿಗೆ ಕಾರಣ ಎಂದು ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ತೀವ್ರ ಅಸಮಾಧನ ವ್ಯಕ್ತಪಡಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ, ತಾಲ್ಲೂಕು ಬಾಲಭವನಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಅವರು ಮಾತನಾಡಿದರು.
3.10 ಎಕರೆ ವಿಸ್ತೀರ್ಣದಲ್ಲಿ ಸರ್ಕಾರ ಜಿಲ್ಲಾ ಬಾಲ ಭವನ ನಿರ್ಮಿಸಿದೆ. ಇಲ್ಲಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಕಟ್ಟಡ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ನಿಮಾತೃ ಸಂಸ್ಥೆ ಯಾವುದೇ ರೀತಿಯ ನಿರ್ವಹಣೆ ಮಾಡುತ್ತಿಲ್ಲ. ಶೌಚಾಲಯಗಳು ದುಸ್ಥಿತಿಯಲ್ಲಿವೆ. ಪುಟ್ಟ ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ನಿರ್ಮಾಣ ಮಾಡಿರುವ ಬಾಲಭವನ ಅವ್ಯವಸ್ಥೆಯ ಆಗರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಬಾಲಭವನ ನಿರ್ವಹಣೆ ಅಧಿಕಾರಿಗಳು ಅಸಡ್ಡೆ ತೋರದಂತೆ ಎಚ್ಚರಿಕೆ ನೀಡಿದರು.
ಬಾಲ ಭವನಗಳ ಉನ್ನತೀಕರಣಕ್ಕೆ ಚಿಂತನೆ: ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಬಾಲಭವನ ಉನ್ನತೀಕರಿಸಲು ಚಿಂತನೆ ಮಾಡಲಾಗಿದೆ. ಆರೋಗ್ಯ, ಶಿಕ್ಷಣ, ಮನೋರಂಜನೆ, ತಾರ್ಕಿಕ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳಸಿ, ಪೂರ್ಣ ವ್ಯಕ್ತಿತ್ವ ರೂಪಿಸುವ ಉದ್ದೇಶದಿಂದ ಬಾಲಭವನಗಳನ್ನು ನಿರ್ಮಾಣ ಮಾಡಲಾಗಿದೆ. ಇವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಸಮಾಜದಲ್ಲಿ ಹಿಂದುಳಿದ ಮಕ್ಕಳಿಗೆ ಮನೋರಂಜನೆ ಹಾಗೂ ಮನೋವಿಕಾಸಕ್ಕೆ ದೊರೆಯುವ ಅವಕಾಶಗಳು ಕಡಿಮೆ. ಇಂತಹ ಮಕ್ಕಳಿಗಾಗಿಯೇ ಬಾಲ ಭವನಗಳು ರೂಪುಗೊಂಡಿವೆ. ಜಿಲ್ಲಾ ಬಾಲಭವನಗಳನ್ನು ರೆಸಾರ್ಟ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಗ್ರಾಮೀಣ ಭಾಗದ ಮಕ್ಕಳಿಗೆ ಈ ತಾಣಗಳಿಗೆ ಭೇಟಿ ನೀಡುವುದು ಪ್ರವಾಸದ ಅನುಭವ ಒದಗಿಸಬೇಕು ಎಂದರು.
ಜನವರಿ 25 ರಿಂದ 27ರ ವರೆಗೆ ಬೆಂಗಳೂರಿನಲ್ಲಿ ಯುವ ಪರಿಸರ ವಾದಿಗಳ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣ ಆಯೋಜಿಸಲಾಗಿದೆ. ಜಿಲ್ಲೆಯಿಂದ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಅತ್ಯುತ್ತಮವಾಗಿ ಪರಿಸರ ವಿಚಾರಗಳನ್ನು ಮಂಡಿಸುವ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಕಳಿಸುವಂತೆ  ಪೂರ್ಣಿಮಾ ಪ್ರಕಾಶ್ ಸೂಚಿಸಿದರು.
ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಮಕ್ಕಳ ಯೋಜನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ಜಿ.ಪಂ.ಸಿಇಓ ದಿವಾಕರ್.ಎಂ.ಎಸ್ ಸಭೆಯಲ್ಲಿ ತಿಳಿಸಿದರು.
ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಯೋಜನೆಗಳನ್ನು ರೂಪಿಸಿ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನವನ್ನು ಬಳಕೆ ಮಾಡಿಕೊಳ್ಳದೇ ಸರ್ಕಾರಕ್ಕೆ ಹಿಂದಿರುಗಿಸುವುದು ಯೋಜನೆಯ ಪಾವಿತ್ರ್ಯತೆ ಹಾಳು ಮಾಡಿದಂತೆ. ಮಾರ್ಚ್ ಅಂತ್ಯಕ್ಕೆ ಅಧಿಕಾರಿಗಳ ಒತ್ತಡದಿಂದ ಕಾರ್ಯಕ್ರಮಗಳನ್ನು ಮಾಡಿ ಬಿಲ್ಲು ಸಲ್ಲಿಸುವ ಕೆಲಸವಾಗಬಾರದು. ಅನುದಾನ ಬಿಡುಗಡೆಯಾಗಿ ವಾರಾಂತ್ಯ ತರಗತಿಗಳನ್ನು ಆಯೋಜಿಸದ ಸಿಡಿಪಿಓಗಳಿಗೆ ನೋಟಿಸ್ ನೀಡುವಂತೆ ಸಿಇಓ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.
ಸಭೆಗೆ ಮುನ್ನ ಜಿಲ್ಲಾ ಬಾಲಭವನಕ್ಕೆ ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ನಿರೂಪಣಾಧಿಕಾರಿ ಕೆಂಪಹನುಮಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಸಾಮಾಜಿಕ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಬಾಬು, ತಾಲ್ಲೂಕುಗಳ ಸಿಡಿಪಿಓಗಳು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
[t4b-ticker]

You May Also Like

More From Author

+ There are no comments

Add yours