89 ವರ್ಷಗಳ ಬಳಿಕ ತುಂಬಿದ ಜಲಾಶಯಕ್ಕೆ ಬಾಗಿನ ಬಿಡುವ ಸೌಭಾಗ್ಯ ನನಗೆ ಸಿಕ್ಕಿದೆ: ಸಿಎಂ ಬೊಮ್ಮಾಯಿ ಹರ್ಷ

 

ಚಿತ್ರದುರ್ಗ ನ: 22: 89 ವರ್ಷಗಳ ಬಳಿಕ ಹಿರಿಯೂರು ತಲೂಕಿನ ವಾಣಿ ವಿಲಾಸ ಸಾಗರದ ಕೋಡಿ ಬಿದ್ದಿದ್ದು, ವಾಣಿ ವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸೌಭಾಗ್ಯ ನನಗೆ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಮಾಧ್ಯಮದ ಜೊತೆ  ಮಾತನಾಡಿದ ಅವರು, 89 ವರ್ಷಗಳ ಬಳಿಕ ಬಾಗಿನ ಬಿಡುವ ಸೌಭಾಗ್ಯ ನನಗೆ ಸಿಕ್ಕಿದೆ.

ಇದೊಂದು ಐತಿಹಾಸಿಕ ಕ್ಷಣ ಎಂದರು.

ಇದು ಮೈಸೂರು ಮಹಾರಾಜರ ಕಾಲದಲ್ಲಿ ಕಟ್ಟಿರುವ ಜಲಾಶಯವಾಗಿದೆ. 89 ವರ್ಷಗಳ ಬಳಿಕ ಜಲಾಶಯದ ಕೋಡಿ ಬಿದ್ದಿದೆ. ಇದರಿಂದ ರೈತರ ನೀರಾವರಿಗೆ ತುಂಬಾ ಸಹಾಯ ಆಗಲಿದ್ದು, ಇದು ಮಧ್ಯ ಕರ್ನಾಟಕದ ಜಲಪಾತ್ರೆ ಅಂತಲೇ ಹೆಸರುವಾಸಿಯಾಗಿದೆ. ಜಲಾಶಯವನ್ನು ತುಂಬಿಸುವ ಮೂಲಕ ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯವನ್ನು ನೀಡಿದ್ದೇವೆ. ಅಂದಿನ ಮೈಸೂರು ಮಹಾರಾಜರ ದೂರದೃಷ್ಟಿಯಿಂದ ಈ ಜಲಾಶಯ ನಿರ್ಮಾಣವಾಗಿದೆ. ಆರ್ಥಿಕ ಸಂಕಷ್ಟ ಇದ್ದರೂ ಕೂಡ ಮಹಾರಾಜರು ತಮ್ಮ ಮನೆತನದ ಒಡವೆಗಳನ್ನು ಮಾರಿ ಜಲಾಶಯವನ್ನು ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ರಾಜ್ಯದ ಜನತೆಯ ಪರವಾಗಿ ಒಡೆಯರ್ ಮನೆತನಕ್ಕೆ ಧನ್ಯವಾದ ಅರ್ಪಿಸುವೆನು ಎಂದರು.

ವಿವಿ ಸಾಗರ ಜಲಾಶಯಕ್ಕೆ ಬಾಗೀನ ಅರ್ಪಣೆ

ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ 89 ವರ್ಷಗಳ ಬಳಿಕ ಕೋಡಿ ಬಿದ್ದು ಇತಿಹಾಸ ನಿರ್ಮಿಸಿದೆ. ಆದ್ದರಿಂದ ಮಂಗಳವಾರ (ನವೆಂಬರ್‌ 22) ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಾಗಿನ ಅರ್ಪಿಸಿದ್ದಾರೆ. ಸುಮಾರು 89 ವರ್ಷಗಳ ಬಳಿಕ ಎರಡನೇ ಬಾರಿಗೆ ವಾಣಿ ವಿಲಾಸ ಸಾಗರದ ಕೋಡಿ ಬಿದ್ದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಬಾಗಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಹಿಂದೆ ಒಮ್ಮೆ ಜಲಾಶಯದ ಕೋಡಿ ಬಿದ್ದಿತ್ತು. ಆದರೆ ಬಾಗಿನ ಅರ್ಪಿಸಿರುವ ಬಗ್ಗೆ ಮಾಹಿತಿ ಲಭ್ಯವಿಲ್ಲ. ಎರಡನೇ ಬಾರಿಗೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಲಿದೆ. ಇದುವರೆಗೂ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದವರು ಯಾರು ಬಾಗಿನ ಅರ್ಪಿಸಿಲ್ಲ. ಈ ಅವಕಾಶ ಬಸವರಾಜ ಬೊಮ್ಮಾಯಿ ಅವರಿಗೆ ಸಿಕ್ಕಿದೆ.

ನೀರಿನ ಸಂಗ್ರಹದಲ್ಲಿ ದಾಖಲೆ ನಿರ್ಮಾಣ

ಪ್ರಸ್ತುತ ಜಲಾಶಯದಲ್ಲಿ ನೀರಿನ ಗರಿಷ್ಠ 130 ಅಡಿ ಸಂಗ್ರಹವಾಗಿದ್ದು, 1933ರಲ್ಲಿ 130.25 ಅಡಿ ನೀರು ಸಂಗ್ರಹವಾಗಿ ಕೋಡಿ ಬಿದ್ದಿತ್ತು. ಇದೀಗ 2022ರಲ್ಲಿ ಭರ್ತಿಯಾಗಿ ಎರಡನೇ ಬಾರಿಗೆ ಕೋಡಿ ಬಿದ್ದು ದಾಖಲೆ ನಿರ್ಮಿಸಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈ ವರ್ಷ ಜಲಾಶಯಕ್ಕೆ ಸುಮಾರು 15 ಅಡಿಗಳಷ್ಟು ಮಳೆ ನೀರು ಸಂಗ್ರಹವಾಗಿದೆ. 1932ರಲ್ಲಿ 125.50 ಅಡಿ, 1933ರಲ್ಲಿ 135.25 ಅಡಿ, 1934ರಲ್ಲಿ 130.24 ಅಡಿ ನೀರು ಸಂಗ್ರಹವಾಗಿ ಇತಿಹಾಸ ನಿರ್ಮಿಸಿತ್ತು. ನಂತರ 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958ರಲ್ಲಿ 124.25 ಅಡಿ ನೀರು ಸಂಗ್ರಹವಾಗಿತ್ತು. ಬಳಿಕ 2000ನೇ ಇಸವಿಯಲ್ಲಿ 122.50 ಅಡಿ, 2021ರಲ್ಲಿ 125.50 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿ ದಾಖಲೆ ನಿರ್ಮಾಣ ಆಗಿತ್ತು. ಇದೀಗ 1958ರ ದಾಖಲೆಯನ್ನು ಹಿಂದಿಕ್ಕಿ ಡ್ಯಾಂ ನೀರಿನ ಮಟ್ಟ 125.50 ಅಡಿ ದಾಟಿ ಹೊಸ ದಾಖಲೆಯನ್ನು ನಿರ್ಮಿಸಿದೆ.

 

ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್‌ಗಿರಿ ಕಂದಕಗಳಲ್ಲಿ ಹುಟ್ಟುವ ವೇದಾ ಎಂಬ ನದಿ ಕಡೂರಿನ ಬಳಿ ಅವತಿ ಎಂಬ ನದಿಯನ್ನು ಸೇರಿ ಅವು ಮುಂದೆ ‘ವೇದಾವತಿ’ ನದಿಯಾಗಿ ಹರಿಯುತ್ತದೆ. ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಬಳಿ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವೇ ಮಾರಿಕಣಿವೆ ಜಲಾಶಯವಾಗಿದೆ. ಇನ್ನು ವಾಣಿವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ ಪೀಸ್ ಎಂದು ಗುರುತಿಸಲಾಗಿದೆ.

ಈ ಅಣೆಕಟ್ಟನ್ನು 1897ರಲ್ಲಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ ‘ತಾರಾ ಚಾಂದ್ ದಲಾಲ್’ ಎಂಬ ಇಂಜಿನಿಯರ್ ನೇತೃತ್ವದ ತಂಡವು ನಿರ್ಮಿಸಿತ್ತು. ಆಗಿನ ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಮುಂದಾಳತ್ವದಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿತ್ತು. 1907ರಲ್ಲಿ ಸಂಪೂರ್ಣವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿದರು. ಅಲ್ಲದೇ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಾಣಿ ವಿಲಾಸ ಸಾಗರದ ನೀಲಿನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ.

ಜಲಾಶಯ ಭರ್ತಿ, ರೈತರ ಮುಖದಲ್ಲಿ ಮಂದಹಾಸ

ಹೊಸದುರ್ಗ, ಹಿರಿಯೂರು ಚಿತ್ರದುರ್ಗ ಭಾಗದಲ್ಲಿ 800 ರಿಂದ 1,000 ಅಡಿ ಬೋರ್‌ ವೆಲ್ ಕೊರೆಸಿದರೂ ಸಹ ನೀರು ಸಿಗುತ್ತಿರಲಿಲ್ಲ. ಆದರೆ ವಾಣಿವಿಲಾಸ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತಿದ್ದಂತೆ ಸುತ್ತ ಮುತ್ತಲಿನ ಜಮೀನು ಪ್ರದೇಶಗಳಲ್ಲಿ, ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಬರುತ್ತಿದೆ. ಹೊಸದುರ್ಗ, ಹಿರಿಯೂರು ತಾಲೂಕಿನ ಕೆಲ ಭಾಗಗಳಲ್ಲಿ ಕೇವಲ 50 ರಿಂದ 200 ಅಡಿಗೆ ನೀರು ಸಿಗುತ್ತಿದೆ.

[t4b-ticker]

You May Also Like

More From Author

+ There are no comments

Add yours