ಭಯೋತ್ಪಾದನೆ ಚಟುವಟಿಕೆಗೆ ಸಂಪೂರ್ಣ ಕಡಿವಾಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ನ.22:

ಭಯೋತ್ಪಾದನೆ ಚಟುವಟಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದ ಪೊಲೀಸರು 18 ಜನ ಸ್ಲೀಪರ್ ಸೆಲ್‌ಗಳ ಹೆಡೆಮುರಿ ಕಟ್ಟಿ ತಿಹಾರ್ ಜೈಲಿಗೆ ಕಳುಹಿಸಿದ್ದಾರೆ. ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ನಿಯಂತ್ರಣದಲ್ಲಿಡುವ ಕೆಲಸ ಮಾಡಲಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಿರಿಯೂರು ತಾಲ್ಲೂಕಿನ ವಿ.ವಿ. ಸಾಗರ ಜಲಾಶಯದಲ್ಲಿ ಮಂಗಳವಾರ ಬಾಗಿನ ಅರ್ಪಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಹೊರ ರಾಜ್ಯದ ಸಂಪರ್ಕ ಇಟ್ಟುಕೊಂಡು ಕೆಲವರು ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆ ಮಾಡುತ್ತಿದ್ದಾರೆ. ದೇಶದ ಸುರಕ್ಷತೆ ದೃಷ್ಟಿಯಿಂದ ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮಂಗಳೂರು ಕುಕ್ಕರ್ ಸ್ಪೋಟ ಪ್ರಕರಣದಲ್ಲಿ ಸೆರೆ ಸಿಕ್ಕ ಉಗ್ರನ ವಿವರಗಳನ್ನು 24 ಗಂಟೆಗಳಲ್ಲಿ ಪೊಲೀಸರು ಭೇದಿಸಿದ್ದಾರೆ. ಇದರ ಹಿಂದೆ ಯಾವ ಅಂತರರಾಷ್ಟ್ರೀಯ, ರಾಷ್ಟ್ರೀಯ ಸಂಘಟನೆಗಳ ಬೆಂಬಲ ಇದೆ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದರು.

ಸ್ವಾತಂತ್ರ ಬಂದು 75 ವರ್ಷಗಳ ಬಳಿಕ ಮೊದಲಬಾರಿಗೆ ವಿ.ವಿ.ಸಾಗರಕ್ಕೆ ಬಾಗಿನ ಅರ್ಪಣೆ ಮಾಡುವ ಸೌಭಾಗ್ಯ ಒದಗಿ ಬಂದಿದೆ‌. ಮೈಸೂರು ಒಡೆಯರ ಕಾಲದಲ್ಲಿ ನಿರ್ಮಿಸಿದ ಜಲಾಶಯ ಅತ್ಯಂತ ಭವ್ಯವಾಗಿದೆ. 89 ವರ್ಷಗಳ ಹಿಂದೆ ಜಲಾಶಯ ತುಂಬಿತ್ತು‌. ಜಲಾಶಯ ಮಧ್ಯ ಕರ್ನಾಟಕದ ನೀರಿನ ಜಾಲದ ಮುಖ್ಯ ಆಕರವಾಗಿದೆ. ಜಲಾಶಯ ತುಂಬಿಸುವ ಮೂಲಕ ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಕುಡಿಯಲು ಹಾಗೂ ನೀರಾವರಿಗೆ ನೀರು ಒದಗಿಸಲು ಸಾಧ್ಯವಿದೆ. ವಿ.ವಿ.ಸಾಗರ ಜಲಾಶಯಕ್ಕೆ ಭದ್ರಾ ನದಿಯ ನೀರನ್ನು ತುಂಬಿಸಿ ನೀರಿನ ಜಾಲವನ್ನು ಬಲಪಡಿಸಲಾಗುವುದು. ಜಲಾಶಯದ ಕೆಳಭಾಗದಲ್ಲಿ ಹನಿ ನೀರಾವರಿ ಜಾರಿಗೊಳಿಸಲಾಗಿದೆ. ಮಧ್ಯ ಕರ್ನಾಟಕ ಬರಡು ನಾಡು ಎಂಬ ನಾಮ ಅಳಿಸಿ, ಸಂಪತ್ ಭರಿತ ನಾಡನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಸಾರ್ವಜನಿಕ ಹೂಡಿಕೆ ಮಂಡಳಿಯು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿಸಲು ಅನುಮತಿ ನೀಡಿದೆ. ಕೇಂದ್ರ ಸಂಪುಟದ ಅನುಮೋದನೆ ಅಧಿಕೃತವಾಗಿ ಇದು ರಾಷ್ಟ್ರ ಯೋಜನೆಯಾಗಲಿದ್ದುಸುಮಾರು 16 ಸಾವಿರ ಕೋಟಿ ರೂ. ಅನುದಾನ ಲಭಿಸಲಿದೆ ಎಂದು ಮಾಹಿತಿ ನೀಡಿದರು.

ಮೈಸೂರು ಮಹಾರಾಜರ ದೂರದೃಷ್ಟಿಯ ಫಲವಾಗಿ, ಮಲೆನಾಡಿನ ಸಣ್ಣ, ಸಣ್ಣ ಹೊಳೆಗಳ ನೀರು ಸಂಗ್ರಹ ಮಾಡಲು ಜಲಾಶಯ ನಿರ್ಮಿಸಲಾಯಿತು. ಸಂಕಷ್ಟ ಸಂದರ್ಭದಲ್ಲಿ ರಾಜ ಮನೆತನದ ಒಡೆವೆಗಳನ್ನು ಮಾರಿ ಜಲಾಶಯ ನಿರ್ಮಾಣ ಮಾಡಲಾಗಿದೆ ಎಂದು ಸ್ಮರಿಸಿದ ಮುಖ್ಯಮಂತ್ರಿಗಳು ರಾಜ್ಯದ ಜನತೆ ಪರವಾಗಿ ಮೈಸೂರು ರಾಜರಿಗೆ ಅಭಿನಂದನೆ ಸಲ್ಲಿಸಿದರು.

*ವಾಣಿ ವಿಲಾಸ ಸಾಗರ ಜಲಾಶಯ ಪಕ್ಷಿನೋಟ*

ವಾಣಿವಿಲಾಸ ಸಾಗರ ಜಲಾಶಯವನ್ನು ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, 1898ರಲ್ಲಿ ಪ್ರಾರಂಭಿಸಿ 1907 ರಲ್ಲಿ ಪೂರ್ಣಗೊಳಿಸಲಾಗಿದೆ.
ಜಲಾಶಯ ಹಾಗೂ 129 ಕಿ.ಮೀ ಉದ್ದದ ಕಾಲುವೆ ಜಾಗವನ್ನು ಕೇವಲ ರೂ.45 ಲಕ್ಷ ವೆಚ್ಚದಲ್ಲಿ ಇಲಾಖಾ ವತಿಯಿಂದ ನಿರ್ಮಿಸಲಾಗಿದೆ.

ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ರಾಜ ಪ್ರತಿನಿಧಿ ಅವರ ಆಡಳಿತ ಕಾಲದಲ್ಲಿ ಜಲಾಶಯ ನಿರ್ಮಾಣಗೊಂಡಿದೆ. ಜಲಾಶಯವನ್ನು ಸಂಪೂರ್ಣವಾಗಿ ಪಿಡಬ್ಲೂಡಿ, ಜಲಸಂಪನ್ಮೂಲ ಇಲಾಖಾ ವತಿಯಿಂದಲೇ ನಿರ್ಮಿಸಲಾಗಿದೆ. ಜಲಾಶಯದ ಉದ್ದ 1330.00 ಅಡಿಗಳು ( 405.40 ಮೀಟರ್) ಇದ್ದು, 30.422 ಟಿ.ಎಂ.ಸಿ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಜಲಾಶಯವನ್ನು ಕೇವಲ ಕಲ್ಲು ಮತ್ತು ಸುಣ್ಣದ ಗಾರೆಯನ್ನು ಬಳಸಿ ನಿರ್ಮಾಣ ಮಾಡಲಾಗಿರುತ್ತದೆ‌. ಜಲಾಶಯದ ನೀರಿನ ಗರಿಷ್ಟ ಶೇಖರಣಾ ಮಟ್ಟ 130 ಅಡಿ, ಗರಿಷ್ಟ ನೀರಿನ ಮಟ್ಟ 136 ಅಡಿ ಇದ್ದು, 5374 ಚ.ಕಿ.ಮೀ ಜಲಾಯನ ಪ್ರದೇಶ ಹೊಂದಿದೆ. ಒಟ್ಟು 21645 ಎಕರೆ ( 8763 ಹೆಕ್ಟೇರ್) ಪ್ರದೇಶದಲ್ಲಿ ಜಲಾಶಯದ ನೀರು ಹರಡಿರುತ್ತದೆ. ಜಲಾಶಯದ ಉತ್ತರ ಭಾಗದಲ್ಲಿ 2.40 ಕಿ.ಮೀ ದೂರದಲ್ಲಿ 143 ಮೀಟರ್ ( 468 ಅಡಿ ) ಉದ್ದದ ಕೋಡಿಯು ಇದ್ದು, 130 ಅಡಿಗಿಂತ ಹೆಚ್ಚಾದ ನೀರು ಕೋಡಿಯ ಮೇಲೆ ಹರಿದು ವೇದಾವತಿ ನದಿ ಪಾತ್ರ ಸೇರುತ್ತದೆ. ಇಲ್ಲಿಂದ ಮುಂದೆ 11 ಕಿ.ಮೀ ದೂರದಲ್ಲಿ ಕಾತ್ರೀಕೇನಹಳ್ಳಿ ಬಳಿ ಅಣೆಕಟ್ಟುನ್ನು ನಿರ್ಮಿಸಲಾಗಿದ್ದು, ಎಡ ಮತ್ತು ಬಲದಂಡೆ ಕಾಲುವೆಗಳು ಪ್ರಾರಂಭವಾಗುತ್ತವೆ. ವಿ.ವಿ ಸಾಗರ ಜಲಾಶಯವು ಒಟ್ಟು 12,135 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದ್ದು, ಒಟ್ಟಾರೆ 42 ಹಳ್ಳಿಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒಗಿಸಿರುತ್ತದೆ‌.

ಈ ಹಿಂದೆ 1933 ರಲ್ಲಿ ಜಲಾಶಯವು ಕೋಡಿಬಿದಿದ್ದು, ನೀರಿನಮಟ್ಟ 135.75 ಅಡಿಗಳಷ್ಟು ದಾಖಲಾಗಿರುತ್ತದೆ. ಸುಮಾರು 89 ವರ್ಷಗಳ ನಂತರ ನೀರಿನ ಮಟ್ಟ 135 ಅಡಿಗಳಷ್ಟು ದಾಖಲಾಗಿದೆ.

[t4b-ticker]

You May Also Like

More From Author

+ There are no comments

Add yours