ಬಡವರ ಆರ್ಥಿಕ ಸಬಲೀಕರಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು:ಡಿ.ಸುಧಾಕರ್

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಮಾ.02:
ರಾಜ್ಯ ಸರ್ಕಾರದಿಂದ ಬಡವರಿಗೆ, ಶೋಷಿತ ವರ್ಗದವರ ಆರ್ಥಿಕ ಸಬಲೀಕರಣಕ್ಕಾಗಿ, ಆರ್ಥಿಕ ಚೈತನ್ಯ ನೀಡುವ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ “ಸರ್ವರಿಗೂ ಸೂರು” ಯೋಜನೆಯಡಿ ಚಳ್ಳಕೆರೆ ನಗರದ ಅಂಬೇಡ್ಕರ್ ನಗರದಲ್ಲಿ ನಿರ್ಮಾಣವಾದ 700 ಮನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಚ್ರ್ಯುಯಲ್ ಮುಖಾಂತರ ಲೋಕಾರ್ಪಣೆ ಹಾಗೂ ಮನೆ ಹಂಚಿಕೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಸರ್ವರಿಗೂ ಸೂರು” ಯೋಜನೆಯಡಿ  ವಸತಿ ರಹಿತರು ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದು, ವಸತಿ ರಹಿತರು ಯಾರೂ ಸಹ ನಿರಾಸೆ ಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮನೆಗಳ ಮಂಜೂರಾತಿಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಚಳ್ಳಕೆರೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ 2017ರ ಡಿಸೆಂಬರ್ 27ರಂದು ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಳೆದ ಸರ್ಕಾರದ ಅವಧಿಯಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಮನೆಗಳ ನಿರ್ಮಾಣ ಕಾಮಗಾರಿ ಕುಂಠಿತವಾಯಿತು ಎಂದು ತಿಳಿಸಿದ ಅವರು, ಚಳ್ಳಕೆರೆ ನಗರದಲ್ಲಿ 1,127 ಮನೆಗಳು ಮಂಜೂರಾಗಿದ್ದು, ಇದರಲ್ಲಿ 700 ಮನೆಗಳು ಪೂರ್ಣಗೊಂಡಿವೆ. ಇನ್ನೂ 300ಕ್ಕೂ ಹೆಚ್ಚು ಮನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ಆದಷ್ಟು ಶೀಘ್ರದಲ್ಲಿ ಮನೆಗಳ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ರಾಜ್ಯ ಸರ್ಕಾರ ಬಹುಮುಖ್ಯವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗುವುದು ಎಂದು ಹೇಳಿದರು.
ಸರ್ವರಿಗೂ ಸೂರು ಯೋಜನೆ: ಪ್ರಧಾನ ಮಂತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರು ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನಲ್ಲಿ 1518, ಚಳ್ಳಕೆರೆ-1127, ಹಿರಿಯೂರು-1465, ಹೊಳಲ್ಕೆರೆ-533, ಹೊಸದುರ್ಗ-700 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 500 ಮನೆಗಳು ಸೇರಿದಂತೆ ಆರು ನಗರ, ಪಟ್ಟಣದ ವ್ಯಾಪ್ತಿಯಲ್ಲಿ ಒಟ್ಟು ರೂ.370.97 ಕೋಟಿ ಯೋಜನಾ ವೆಚ್ಚದಲ್ಲಿ 5,843 ಮನೆಗಳು ಮಂಜೂರಾಗಿದ್ದು, ಈ ಪೈಕಿ 3,879 ಮನೆಗಳನ್ನು ಪ್ರಾರಂಭಿಸಿದ್ದು, 2,191 ಮನೆಗಳು ಪೂರ್ಣಗೊಂಡಿದ್ದು, 1,688 ಮನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಉಳಿದ 1964 ಮನೆಗಳನ್ನು ಪ್ರಾರಂಭಿಸಬೇಕಾಗಿರುತ್ತದೆ.
ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿ ಸಮಿತಿ ಸದಸ್ಯ ರಾಘವೇಂದ್ರ, ನಗರಸಭೆ ಸದಸ್ಯರಾದ ಸುಮಕ್ಕ ಅಂಜಿನಪ್ಪ, ಜೈತುಂಬಿ, ಮುಖಂಡರಾದ ವೀರಭದ್ರಪ್ಪ, ಪ್ರಭುದೇವ್, ಮುಜೀಬ್, ಬಡಗಿ ಪಾಪಣ್ಣ, ದಳವಾಯಿ ಮೂರ್ತಿ, ಸಿ.ಟಿ.ಶ್ರೀನಿವಾಸ್, ಅನ್ವರ್, ಲಕ್ಷ್ಮಣ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ದಾವಣಗೆರೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣಾರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.
[t4b-ticker]

You May Also Like

More From Author

+ There are no comments

Add yours