ಡ್ರಾಗನ್ ಹಣ್ಣು ಬೆಳೆದು ಯಶಸ್ಸು ಕಂಡ ರೈತ
ಡ್ರಾಗನ್ ಹಣ್ಣು: ಚಿತ್ರನಾಯಕನಹಳ್ಳಿ ನಾರಾಯಣರೆಡ್ಡಿಗೆ ಉತ್ತಮ ಆದಾಯ
***********
ಚಿತ್ರದುರ್ಗ(ಕರ್ನಾಟಕ ವಾರ್ತೆ)ಸೆ.29:
ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಮಳೆ ಬೀಳುವ ತಾಲ್ಲೂಕು ಆಗಿದ್ದರೂ ಇಲ್ಲಿನ ರೈತರ ಪ್ರಯೋಗಶೀಲತೆಯಲ್ಲಿ ಕೊರತೆ ಕಾಣದು. ಚಳ್ಳಕೆರೆ ತಾಲ್ಲೂಕಿನ ಚಿತ್ರನಾಯಕನಹಳ್ಳಿ ಗ್ರಾಮದ ಶ್ರೀ ನಾರಾಯಣರೆಡ್ಡಿ ಬಿನ್ ಲೇಟ್ ನಣಜೀವರೆಡ್ಡಿ ರವರು ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಕೊಡುವ ಅಪ್ರಧಾನ ಹಣ್ಣಿನ ಜಾತಿಯ ಡ್ರಾಗನ್ ಹಣ್ಣಿನ ಬೆಳೆ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ.
ಈ ಹಿಂದೆ ಇವರು ಇರುವ 2 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ. ಟೊಮೋಟೋ, ಈರುಳ್ಳಿ ಬೆಳೆಯುತ್ತಿದ್ದರೂ, ಕಡಿಮೆ ನೀರಿರುವ ಕಾರಣ ಲಾಭ ನಿರೀಕ್ಷಿತ ಮಟ್ಟದಲ್ಲಿ ಬಂದಿರುವುದಿಲ್ಲ. ಆದ ಕಾರಣ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಯ ಕುರಿತಾಗಿ ತೋಟಗಾರಿಕೆ ಇಲಾಖೆ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಅಧಿಕಾರಿ ಅವರಿಂದ ಡ್ರಾಗನ್ ಹಣ್ಣಿನ ಬೆಳೆ ಕುರಿತಾಗಿ ಮಾಹಿತಿ ಪಡೆದು ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯ ಸದುಪಯೋಗ ಪಡೆಯಲು ಆಸಕ್ತಿ ತೋರಿ ಡ್ರಾಗನ್ ಹಣ್ಣಿನ ಬೆಳೆಯನ್ನು ಬೆಳೆದಿದ್ದಾರೆ.
ಇದನ್ನು ಓದಿ: ಡಿಸಿಸಿ ಬ್ಯಾಂಕ್ ನಲ್ಲಿ ಭರ್ಜರಿ ಉದ್ಯೋಗಕ್ಕೆ ಅರ್ಜಿ ಆಹ್ವಾನ
2 ಎಕರೆಯಲ್ಲಿ 10*9 ಅಡಿ ಅಂತರದಲ್ಲಿ ಸುಮಾರು 960 Poleಗಳನ್ನು ನೆಟ್ಟು 3840 ಸಸಿಗಳನ್ನು ನಾಟಿ ಮಾಡಿರುತ್ತಾರೆ. ರೂ. 55 ಕ್ಕೆ 01 ರಂತೆ ರೋಜ್ ರೆಡ್ ತಳಿಯ ಸಸಿಯನ್ನು ದೊಡ್ಡಬಳ್ಳಾಪುರದಿಂದ ಖರೀದಿ ಮಾಡಿ ಕೊಟ್ಟಿಗೆ ಗೊಬ್ಬರ ಹಾಕಿ ನಾಟಿ ಮಾಡಿರುತ್ತಾರೆ. ಸಸಿ ನಾಟಿ ಮಾಡಿದ ನಂತರ 1.5 ವರ್ಷಕ್ಕೆ ಇಳುವರಿ ಪ್ರಾರಂಭವಾಗಿರುತ್ತದೆ. ಹೂ ಕಚ್ಚಿದ ಸಮಯದಲ್ಲಿ 3-4 ದಿನಗಳಿಗೊಮ್ಮೆ ನೀರು ಹರಿಸಬೇಕು. ಉಳಿದಂತೆ ವಾರಕೊಮ್ಮೆ ನೀರು ಹರಿಸಿದರೆ ಸಾಕು. ಹೂ ಕಚ್ಚಿದ 1.5 ತಿಂಗಳಿಗೆ ಹಣ್ಣು ಕಟಾವಿಗೆ ಬರುತ್ತದೆ.
ನಾರಾಯಣ ರೆಡ್ಡಿಯವರು ಮೊದಲನೆ ಬೆಳೆ ಹಣ್ಣು ಕಟಾವು ಮಾಡಿ ಬೆಂಗಳೂರು ಮಾರುಕಟ್ಟೆಯಲ್ಲಿ ಬಾಂಬೆ ಕಂಪನಿಯ ಖರೀದಿದಾರರಿಗೆ ಕೆ.ಜಿ.ಗೆ ರೂ.110-120 ರಂತೆ ಮೂರು ಬಾರಿ ಕಟಾವಿನ ಒಟ್ಟು 6 ಟನ್ ಹಣ್ಣನ್ನು ಮಾರಾಟ ಮಾಡಿರುತ್ತಾರೆ. ಒಂದು ಹಣ್ಣಿನ ತೂಕ 400-500 ಗ್ರಾಂ ವರೆಗೂ ಬಂದಿರುತ್ತದೆ. ಮೊದಲನೇ ಬೆಳೆಯಿಂದ ನಾಟಿ ಮಾಡಿದ ಬಂಡವಾಳದ ಹಣವನ್ನು ಪಡೆದಿರುತ್ತಾರೆ.
ಇದನ್ನು ಓದಿ: ನಿಮ್ಮ ಹೃದಯ ಆರೋಗ್ಯ ನಿಮ್ಮ ಕೈಯಲ್ಲಿ ಹೃದಯ ಆರೋಗ್ಯದ ಬಗ್ಗೆ ನಿಮಗೆಷ್ಟು ಗೊತ್ತು.
ಮುಂಬರುವ ದಿನಗಳಲ್ಲಿ ಬರುವ ಬೆಳೆಯಿಂದ ಲಾಭದ ಮೊತ್ತದ ನಿರೀಕ್ಷೆಯಲ್ಲಿದ್ದಾರೆ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪಡೆದ 1.5 ಲಕ್ಷ ಸಹಾಯಧನದಿಂದ ಪ್ರಾರಂಭಿಕ ಬಂಡವಾಳಕ್ಕೆ ಅನುಕೂಲವಾಗಿರುತ್ತದೆ ಹಾಗೂ ಹನಿ ನೀರಾವರಿ ಒಗ್ಗೂಡಿಸುವಿಕೆ ಅಡಿಯಲ್ಲಿ ಹನಿ ನೀರಾವರಿಗೆ ಸಹಾಯಧನ ಪಡೆದಿರುತ್ತಾರೆ.
ಸರ್ಕಾರದ ಯೋಜನೆಗಳ ಸಹಾಯಧನದಿಂದಾಗಿ ಸಾಲದ ಹೊರೆ ಕಡಿಮೆಯಾಗಿ ಪ್ರಾರಂಭಿಕ ಬಂಡವಾಳಕ್ಕೆ ಹೆಚ್ಚಿನ ಅನುಕೂಲವಾಗಿರುವ ಕುರಿತಾಗಿ ಹರ್ಷ ವ್ಯಕ್ತಪಡಿಸಿರುತ್ತಾರೆ. ಜಿಲ್ಲೆಯ ರೈತರಿಗೆ ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9740153343, 8951820256 ಕ್ಕೆ ರೈತರನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ತಿಳಿಸಿದ್ದಾರೆ.
+ There are no comments
Add yours