ಸಂತ್ರಸ್ಥ ಕುಟುಂಬಗಳ ಸದಸ್ಯರಿಗೆ ಉದ್ಯೋಗ ಮತ್ತು ಮನೆ ನಿರ್ಮಾಣ: ಸಿಎಂ

 

*3 ಎಕರೆ ಜಾಗ 4 ಕೋಟಿ ರೂಪಾಯಿಯನ್ನು ಕಾವಾಡಿಗರಹಟ್ಟಿ ಅಭಿವೃದ್ದಿಗಾಗಿ ನೀಡಿದ್ದೇವೆ.

ಚಿತ್ರದುರ್ಗ ಅ 6: ಕಲುಷಿತ ನೀರು ಕುಡಿದು ಆರು ಮಂದಿ ಮೃತಪಟ್ಟಿದ್ದ ಕಾವಾಡಿಗರ ಹಟ್ಟಿಯ ಅಭಿವೃದ್ದಿಗೆ 3 ಎಕರೆ ಜಾಗ 4 ಕೋಟಿ ರೂಪಾಯಿ ನೀಡಿದ್ದೇವೆ ಎಂದು ಮುಖ್ಯಮಂತ್ರಿ (Chief minister ) ಸಿದ್ದರಾಮಯ್ಯ ಅವರು ತಿಳಿಸಿದರು.

ಕಲುಷಿತ ನೀರು ಕುಡಿದು ಆರು ಮಂದಿ ಮೃತಪಟ್ಟಿದ್ದ ಕಾವಾಡಿಗರಹಟ್ಟಿಯಲ್ಲಿ ಸಂತ್ರಸ್ಥ ಕುಟುಂಬಗಳ ಬಂಧುಗಳನ್ನು ಮಾತಾಡಿಸಿದ ಬಳಿಕ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಈ ಭರವಸೆ ನೀಡಿದರು.

ಸಂತ್ರಸ್ಥ ಕುಟುಂಬಗಳ ಜವಾಬ್ದಾರಿ ಸರ್ಕಾರ ವಹಿಸಿಕೊಳ್ಳಲಿದೆ. ಈ ಕುಟುಂಬಗಳ ಸದಸ್ಯರಿಗೆ ಉದ್ಯೋಗವನ್ನೂ ಕೊಡುತ್ತೇವೆ. ಮನೆಯನ್ನೂ ಕಟ್ಟಿಸಿಕೊಡುತ್ತೇವೆ ಎಂದರು.

 

ಶುದ್ದ ಕುಡಿಯುವ ನೀರು ಕೊಡುವುದು ನಮ್ಮ ಕರ್ತವ್ಯ. ಘಟನೆ ಘಟಿಸಿದ ತಕ್ಷಣ ಸ್ಥಳೀಯ ಶಾಸಕರು, ಜಿಲ್ಲಾ ಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದೆ. ತಕ್ಷಣಕ್ಕೆ 10 ಲಕ್ಷ ಪರಿಹಾರ ನೀಡಿದೆವು ಎಂದು ವಿವರಿಸಿದರು.

ಮೊದಲೇ ಶುದ್ದ ನೀರಿನ ವ್ಯವಸ್ಥೆ ಇದ್ದಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ. ಘಟನೆ ಬಳಿಕ ಶುದ್ದ ಕುಡಿಯುವ ನೀರಿಗೆ ತೊಂದರೆ ಆಗದಂತೆ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದೆ ಇಂತಹ ಅನಾಹುತ ನಡೆದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತ ಎಂದು ಎಚ್ಚರಿಸಿದರು.

123 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ ಆಗಿದೆ. ಬರ ಪೀಡಿತ ಜಿಲ್ಲೆಗಳ ಸಂಖ್ಯೆ ಹೆಚ್ಚುತ್ತಿದೆ. 42 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. 30 ಸಾವಿರ ಕೋಟಿಯಷ್ಟು ನಷ್ಟ ಆಗಿದೆ. ನಾವು NDRF ಅಡಿಯಲ್ಲಿ ಕೇಂದ್ರಕ್ಕೆ ಪರಿಹಾರ ಕೇಳಿದ್ದೇವೆ. ಸದ್ಯ ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಬಂದಿದ್ದು ನಾಳೆ ಚಿತ್ರದುರ್ಗಕ್ಕೂ ಬರಲಿದೆ ಎಂದು ವಿವರಿಸಿದರು.

ಇಂದು ಇಡೀ ದೇಶದಲ್ಲಿ ಬರಗಾಲದ ಸ್ಥಿತಿ ಇದೆ. ರಾಜ್ಯದಲ್ಲೂ ಬರ ಇದ್ದು ಕುಡಿಯುವ ನೀರು, ರಾಸುಗಳಿಗೆ ಮೇವು- ನೀರು ತೊಂದರೆ ಆಗದಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಉದ್ಯೋಗ ಸೃಷ್ಟಿ ಮಾಡಬೇಕು. ಕೆಲಸಕ್ಕಾಗಿ ವಲಸೆ ಹೋಗುವ ಸ್ಥಿತಿ ಬರದಂತೆ ನೋಡಿಕೊಳ್ಳಲು ಎಚ್ಚರಿಸಿದ್ದೇನೆ ಎಂದರು.

ನಮ್ಮ ಸರ್ಕಾರ ಬಡವರ, ಮಧ್ಯಮ ವರ್ಗದವರ ಸಂಕಷ್ಟ ಬಗೆಹರಿಸುವ ಸಲುವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.

ಕಲುಷಿತ ನೀರು ಕುಡಿದು ಆರು ಮಂದಿ ಮೃತಪಟ್ಟ ಕಾವಾಡಿಗರ ಹಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತ್ರಸ್ಥ ಕುಟುಂಬಗಳ ಸದಸ್ಯರಾದ ಸಾಕವ್ವ, ವಿಜಯಮ್ಮ, ರಾಜಪ್ಪ, ವಸಂತ, ಜಿ.ಬಿ.ರಾಜಾಶೇಖರ ಮತ್ತು ಹಟ್ಟಿಯ ಇತರೆ ನಿವಾಸಿಗಳನ್ನು ಮಾತಾಡಿಸಿ ಸಮಸ್ಯೆ ಆಲಿಸಿದರು.

ಈ ಸಂದರ್ಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಡಿ.ಸುಧಾಕರ್, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ, ಜಿ.ಪಂ.ಸಿಇಓ ಎಸ್.ಜಿ.ಸೋಮಶೇಖರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಮೀನಾ, ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಉಪವಿಭಾಗಧಿಕಾರಿ ಆರ್.ಕಾರ್ತಿಕ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್, ತಹಶೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯುಕ್ತೆ ರೇಣುಕಾ, ಮಾಜಿ ಮಂತ್ರಿ ಹೆಚ್.ಆಂಜನೇಯ, ಮಾಜಿ ಸಂಸದ ಎಂ.ಚಂದ್ರಪ್ಪ, ಸೇರಿದಂತೆ, ಹಿರಿಯ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours