ಸರ್ಕಾರಿ ಬಾಲ ಮಂದಿರಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ  ಮಕ್ಕಳ ಪ್ರತಿಭೆ ಗುರುತಿಸಿ, ತರಬೇತಿ ನೀಡಲು ಸೂಚನೆ

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಡಿ.31:
ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಸಮೀಪದಲ್ಲಿರುವ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಬಾಲ ಮಂದಿರಕ್ಕೆ ಶನಿವಾರ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.  ಬಾಲಮಂದಿರದಲ್ಲಿನ ಮಕ್ಕಳ ಪ್ರತಿಭೆ ಗುರುತಿಸಿ, ಅದಕ್ಕೆ ಅನುಗುಣವಾಗಿ ಉತ್ತಮ ತರಬೇತಿ ನೀಡಲು ಸೂಚನೆ ನೀಡಿದರು.
ಸರ್ಕಾರಿ ಬಾಲಮಂದಿರದಲ್ಲಿ ಮಕ್ಕಳಿಗೆ ದಿನನಿತ್ಯ ನೀಡುವ ಊಟ, ಉಪಹಾರಗಳು, ಮೆನು ಚಾರ್ಟ್, ದಾಸ್ತಾನು ಕೊಠಡಿ, ಆಹಾರ ಸಾಮಾಗ್ರಿಗಳು, ಶಿಕ್ಷಣ ವ್ಯವಸ್ಥೆ ಸೇರಿದಂತೆ ಸರ್ಕಾರ ನೀಡುವ ಸೌಲಭ್ಯಗಳ ಕುರಿತು ಪರಿಶೀಲನೆ ಮಾಡಿ, ಅಧಿಕಾರಿಗಳಿಂದ ಹಾಗೂ ಮಕ್ಕಳಿಂದ ಮಾಹಿತಿ ಪಡೆದರು.
ಬಾಲಮಂದಿರದಲ್ಲಿರುವ ಮಕ್ಕಳಿಗೆ ರಕ್ಷಣೆಗೆ ಸಂಬಂಧಪಟ್ಟಂತೆ ಸಿಸಿ ಟಿವಿ ಕ್ಯಾಮೆರಾ ಸೌಲಭ್ಯ, ಟಿವಿ, ಪ್ರಾಜೆಕ್ಟರ್ ಸೌಲಭ್ಯ ಸೇರಿದಂತೆ ಶಿಕ್ಷಣಕ್ಕಾಗಿ ಕೈಗೊಂಡಿರುವ ಕ್ರಮಗಳು, ಗ್ರಂಥಾಲಯ ಸೌಲಭ್ಯ, ಸ್ವಚ್ಛತೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.  ಅಲ್ಲದೆ ಕೆಲ ಮಕ್ಕಳ ಚಿತ್ರಕಲೆ, ಸಂಗೀತದ ಪ್ರತಿಭೆಯನ್ನು ಕಂಡು ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಲಮಂದಿರದ ಆಶ್ರಯದಲ್ಲಿರುವ ಮಕ್ಕಳಿಗೆ ಆಹಾರ ಪೂರೈಕೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಕ್ರಮವಹಿಸಬೇಕು. ಬಾಲ ಮಂದಿರದ ಮಕ್ಕಳ ಪ್ರತಿಭೆ ಗುರುತಿಸಿ, ಅವರ ಆಸಕ್ತಿ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಚಿತ್ರಕಲೆ, ಸಂಗೀತ ಶಿಕ್ಷಣ ನೀಡಲು ಕ್ರಮವಹಿಸಲು ಸೂಚನೆ ನೀಡಿದರು. ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚಿನ ಪುಸ್ತಕಗಳ ಪೂರೈಕೆ, ಬಾಲಕಿಯರಿಗೆ ಸಂಗೀತ ಉಪಕರಣಗಳು, ಹೊಲಿಗೆ ಯಂತ್ರ ಪೂರೈಕೆ ಸೇರಿದಂತೆ ವಿವಿಧ ಸೌಲಭ್ಯಗಳ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಶೈಕ್ಷಣಿಕ ಪ್ರವಾಸಕ್ಕೆ ಅವಕಾಶ ಕಲ್ಪಿಸಲು ಮನವಿ: ಶೈಕ್ಷಣಿಕ ಪ್ರವಾಸ ತೆರಳಲು ಅವಕಾಶ ಕಲ್ಪಿಸಬೇಕು ಎಂದು ಸರ್ಕಾರಿ ಬಾಲಕರ ಬಾಲ ಮಂದಿರದ ಮಕ್ಕಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಬಾಲ ಮಂದಿರದ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ 50 ಮಕ್ಕಳು ಹಾಗೂ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ 43 ಮಕ್ಕಳು ಆಶ್ರಯ ಪಡೆದಿದ್ದು, ಸರ್ಕಾರದಿಂದ ಊಟ, ವಸತಿ ಸೌಲಭ್ಯ ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲೋಕೇಶ್ವರಪ್ಪ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಭಾಕರ್, ಸರ್ಕಾರಿ ಬಾಲಕರ ಬಾಲ ಮಂದಿರ ಅಧೀಕ್ಷಕಿ ಸುನಿತಾ, ಸರ್ಕಾರಿ ಬಾಲಕಿಯರ ಬಾಲ ಮಂದಿರ ಅಧೀಕ್ಷಕಿ ಜ್ಯೋತಿ ಇದ್ದರು.

[t4b-ticker]

You May Also Like

More From Author

+ There are no comments

Add yours