ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ನೀಡಲು ಬ್ಯಾಂಕ್‍ಗಳು ನಿರ್ಲಕ್ಷ್ಯ ತೋರುವಂತಿಲ್ಲ-ಡಿಸಿ ದಿವ್ಯಪ್ರಭು ಸೂಚನೆ

 

ಚಿತ್ರದುರ್ಗ ಡಿ. 07 (ಕರ್ನಾಟಕ ವಾರ್ತೆ) :
ನಗರ ಪ್ರದೇಶದಲ್ಲಿ ತರಕಾರಿ, ಹಣ್ಣು, ಉಡುಪು ಸೇರಿದಂತೆ ವಿವಿಧ ಬಗೆಯ ಸರಕು ಸಾಮಗ್ರಿಗಳನ್ನು ಕೈಗೆಟಕುವ ದರದಲ್ಲಿ ನಗರ ನಿವಾಸಿಗಳ ಮನೆ ಬಾಗಿಲಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುವÀ ಬೀದಿ ಬದಿ ವ್ಯಾಪಾರಸ್ಥರ ಆರ್ಥಿಕ ಚಟುವಟಿಕೆಗಳಿಗಾಗಿ ಕೇಂದ್ರ ಸರ್ಕಾರ ‘ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ’  (PM SVANidhi)  ಸಾಲ ಯೋಜನೆ ಜಾರಿಗೊಳಿಸಿದ್ದು, ಬಡ ವ್ಯಾಪಾರಿಗಳಿಗೆ ಯೋಜನೆಯಡಿ ಸಾಲ ಸೌಲಭ್ಯ ನೀಡುವಲ್ಲಿ ಬ್ಯಾಂಕ್‍ಗಳು ಅಸಡ್ಡೆತನ ತೋರುವಂತಿಲ್ಲ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಹೇಳಿದರು.
ಚಳ್ಳಕೆರೆಯ ರಮಾಬಾಯಿ ಕಲ್ಯಾಣ ಮಂಟಪದಲ್ಲಿ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗಾಗಿ ಏರ್ಪಡಿಸಲಾಗಿದ್ದ ಸಾಲ ಮೇಳದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬೀದಿ ಬದಿ ವ್ಯಾಪಾರಸ್ಥರು ನಗರ ಪ್ರದೇಶದ ಅನೌಪಚಾರಿಕ ಆರ್ಥಿಕ ಹಾಗೂ ಸರಕು ಸಾಗಾಣಿಕೆಗಳನ್ನು ಕೈಗೆಟಕುವ ದರದಲ್ಲಿ ನಗರ ನಿವಾಸಿಗಳ ಮನೆ ಬಾಗಿಲಿಗೆ ತಲುಪಿಸಲು ಪ್ರಮುಖ ಪಾತ್ರವನ್ನು ವಹಿಸುತ್ತಾರೆ.  ಇಂತಹ ವ್ಯಾಪಾರಿಗಳಿಗೆ ಆರ್ಥಿಕ ನೆರವು ಒದಗಿಸಿ ಸ್ವಾವಲಂಬಿಗಳನ್ನಾಗಿಸಲು  ಕೇಂದ್ರ ಸರ್ಕಾರ ಪಿಎಂ ಸ್ವನಿಧಿ ಯೋಜನೆ ಜಾರಿಗೊಳಿಸಿದೆ.  ನಗರ, ಸ್ಥಳೀಯ ಸಂಸ್ಥೆಗಳು ಬೀದಿ ಬದಿ ವ್ಯಾಪಾರಸ್ಥರನ್ನು ಸಮೀಕ್ಷೆ ಕೈಗೊಂಡು, ಗುರುತಿಸಿ, ಅವರಿಗೆ ಗುರುತಿನ ಪತ್ರವನ್ನು ವಿತರಿಸಿದೆ.  ಬೀದಿ ಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ. ಸಾಲ ನೀಡುವಂತಹ ಪಿಎಂ ಸ್ವನಿಧಿ ಯೋಜನೆ ಜಾರಿಯಲ್ಲಿ, ಬ್ಯಾಂಕ್‍ಗಳ ಸಹಕಾರ ಅತ್ಯಗತ್ಯವಾಗಿದ್ದು, ಸಾಲ ಮಂಜೂರಾತಿಗಾಗಿ ಶಿಫಾರಸುಗೊಂಡ ಫಲಾನುಭವಿಗಳಿಗೆ ಸಾಲ ವಿತರಣೆಯಲ್ಲಿ ಬ್ಯಾಂಕ್‍ಗಳು ನಿರ್ಲಕ್ಷ್ಯ ತೋರುವುದು ಸರಿಯಲ್ಲ.  ಫಲಾನುಭವಿಗಳಿಗೆ ನಿಗದಿತ ಅವಧಿಯಲ್ಲಿ ಸಾಲ ಸೌಲಭ್ಯ ದೊರಕಿಸುವ ಸಲುವಾಗಿ ಜಿಲ್ಲೆಯಾದ್ಯಂತ ಸಾಲ ಮೇಳ ಆಯೋಜಿಸಲಾಗುತ್ತಿದೆ.   ಯೋಜನೆಯಡಿ ಜಿಲ್ಲೆಗೆ 3328 ಫಲಾನುಭವಿಗಳ ಗುರಿ ನಿಗಧಿಪಡಿಸಲಾಗಿದ್ದು, 5843 ಫಲಾನುಭವಿಗಳನ್ನು ಗುರುತಿಸಿ ಅರ್ಜಿ ಸಲ್ಲಿಸಲು ಎಲ್ಲಾ ನಗರಸ್ಥಳೀಯ ಸಂಸ್ಥೆಗಳು ಯಶಸ್ವಿಯಾಗಿವೆ. ಇದುವರೆಗೂ ಸಾಲ ಮಂಜೂರಾತಿಯಾದ 3909 ಜನರ ಪೈಕಿ 3253 ಜನರಿಗೆ ಬ್ಯಾಂಕ್‍ನಿಂದ ಸಾಲ ಬಿಡುಗಡೆಯಾಗಿದೆ. ಇನ್ನೂ 656 ಫಲಾನುಭವಿಗಳಿಗೆ ಸಾಲ ಮಂಜೂರಾತಿ ಆಗಿದ್ದರೂ ಬ್ಯಾಂಕ್‍ಗಳು ಸಾಲ ಬಿಡುಗಡೆ ಮಾಡದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.  ಬ್ಯಾಂಕ್‍ಗಳ ಈ ರೀತಿಯ ಧೋರಣೆಯನ್ನು ಸಹಿಸುವುದಿಲ್ಲ. ಸಂಬಂಧಪಟ್ಟ ಬ್ಯಾಂಕ್‍ಗಳು ಕೂಡಲೆ ಆಯಾ ಫಲಾನುಭವಿಗಳಿಗೆ ಸಾಲ ವಿತರಣೆ ಮಾಡಬೇಕು.  ಅಲ್ಲದೆ ಸಣ್ಣಪುಟ್ಟ ಕಾರಣಗಳನ್ನೊಡ್ಡಿ, 689 ಅರ್ಜಿಗಳನ್ನು ತಿರಸ್ಕರಿಸಿದ್ದು, ಇಂತಹ ಫಲಾನುಭವಿಗಳನ್ನು ಸಂಪರ್ಕಿಸಿ, ಈ ಅರ್ಜಿಗಳನ್ನೂ ಸಹ ಮರು ಪರಿಶೀಲಿಸಿ, ಸಾಲ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು, ಈ ಕುರಿತು ನಗರ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಆಯಾ ಬ್ಯಾಂಕರ್‍ಗಳೊಂದಿಗೆ ಚರ್ಚಿಸಿ, ಎಲ್ಲ ಫಲಾನುಭವಿಗಳಿಗೂ ಸಾಲ ವಿತರಣೆ ಮಾಡಲು ಸಾಲ ವಿತರಣಾ ಮೇಳ ಆಯೋಜಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಡೇನಲ್ಮ್ ಅಭಿಯಾನ ವ್ಯವಸ್ಥಾಪಕಿ ಸೌಮ್ಯ ಮಾಹಿತಿ ನೀಡಿ, ಈ ಯೋಜನೆಯು ಕೇಂದ್ರ ಪುರಸ್ಕತ ಯೋಜನೆಯಾಗಿದ್ದು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯದಿಂದ ಯೋಜನೆಗೆ ಅನುದಾನ ಬಿಡುಗಡೆಯಾಗುತ್ತದೆ. ತರಕಾರಿ, ಹಣ್ಣು-ಹಂಪಲು, ತಿಂಡಿ-ತಿನಸು, ಆಹಾರ, ಚಹಾ, ಬ್ರೆಡ್, ಮೊಟ್ಟೆ, ಜವಳಿ, ಉಡುಪು, ಪಾದರಕ್ಷೆ, ಕುಶಲಕರ್ಮಿ ಉತ್ಪನ್ನಗಳು, ಪುಸ್ತಕಗಳು ಇತ್ಯಾದಿ ಪೂರೈಸುವ ಬೀದಿ ವ್ಯಾಪಾರಸ್ಥರು, ಅಲ್ಲದೆ ಕ್ಷೌರಿಕರು, ಚಮ್ಮಾರರು, ಲಾಂಡ್ರಿ ಸೇವೆ ನೀಡುವವರು ಕೂಡ ಯೋಜನೆಯಡಿ ಸಾಲ ಸೌಲಭ್ಯ ಪಡೆಯಬಹುದಾಗಿದೆ. ನಗರದ ಬೀದಿ ವ್ಯಾಪಾರಸ್ಥರು 10 ಸಾವಿರ ರೂ. ಗಳವರೆಗೆ ವರ್ಕಿಂಗ್ ಕ್ಯಾಪಿಟಲ್ ಸಾಲವನ್ನು ಒಂದು ವರ್ಷದ ಅವಧಿಯವರೆಗೆ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ಮಾಸಿಕವಾಗಿ ಕಂತುಗಳಲ್ಲಿ ಸಾಲವನ್ನು ಮರುಪಾವತಿಸಬೇಕಾಗುತ್ತದೆ. ಈ ಸಾಲ ಸೌಲಭ್ಯಕ್ಕೆ ಯಾವುದೇ ಮೇಲಾಧಾರ ಭದ್ರತೆ ನೀಡುವ ಅಗತ್ಯವಿಲ್ಲ.  ಮೊದಲ ಅವಧಿಯ 10 ಸಾವಿರ ರೂ. ಸಾಲ ಮರುಪಾವತಿಸಿದವರಿಗೆ ಎರಡನೆ ಅವಧಿಗೆ 20 ಸಾವಿರ ಹಾಗೂ ಮೂರನೆ ಅವಧಿಗೆ 50 ಸಾವಿರ ರೂ. ಸಾಲ ಪಡೆಯಲು ಅವಕಾಶವಿದೆ. ಸಾಲ ಪಡೆದ ಬೀದಿ ವ್ಯಾಪಾರಸ್ಥರು ಶೇ.7 ರಷ್ಟು ಬಡ್ಡಿ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ ಎಂದರು.

ಚಳ್ಳಕೆರೆ ನಗರಸಭೆ ಪೌರಾಯುಕ್ತ ಚಂದ್ರಪ್ಪ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಅರ್ಹ ಎಲ್ಲ ಫಲಾನುಭವಿಗಳಿಗೆ ಸಾಲ ಸೌಲಭ್ಯ ಬಿಡುಗಡೆ ಆಗುವವರೆಗೂ ಸಾಲ ಮೇಳಗಳನ್ನು ಆಯೋಜಿಸಿ, ಸಾಲ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.  ತಹಸಿಲ್ದಾರ್ ರಘುಮೂರ್ತಿ ಮಾತನಾಡಿ, ಬ್ಯಾಂಕ್‍ಗಳು, ಬೀದಿ ಬದಿ ವ್ಯಾಪಾರಸ್ಥರುಗಳನ್ನು ಅನಗತ್ಯವಾಗಿ ಅಲೆದಾಡಿಸದೆ, ಅವರ ಮನವಿಗೆ ಸ್ಪಂದಿಸಿ ಏಕ ಕಾಲದಲ್ಲಿ ಸಾಲ ವಿತರಣೆ ಮಾಡಲು ಮುಂದಾಗಬೇಕು ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಚಂದ್ರಯ್ಯ ಹಿರೇಮಠ, ಸಿ.ಆರ್.ಪಿ.ಗಳಾದ ಚೈತನ್ಯ, ಸುಮ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಸಮಿತಿಯ ಸದಸ್ಯರುಗಳಾದ ಶಿವರುದ್ರಪ್ಪ, ವೀರಭದ್ರಪ್ಪ ಹಾಗೂ ಅಹಮದ್ ಪಟೇಲ್ ಮುಂತಾದವರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours