ಹಿರಿಯ ನಾಗರಿಕರು ಮಕ್ಕಳಿದ್ದಂತೆ, ಪಾಲನೆ ಪೋಷಣೆ ಮಾಡಲು ಸಲಹೆ:ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ ಗಿರೀಶ್

 

ಚಿತ್ರದುರ್ಗ ಕರ್ನಾಟಕ ವಾರ್ತೆ ಸೆಪ್ಟಂಬರ್ 29:
ಹಿರಿಯ ನಾಗರಿಕರ ರಕ್ಷಣೆಗೆ ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿವೆ. ಹಿರಿಯ ನಾಗರಿಕರು ಮಕ್ಕಳಿದ್ದಂತೆ. ಅವರ ಪಾಲನೆ-ಪೋಷಣೆ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ ಗಿರೀಶ್ ಹೇಳಿದರು.
ಚಿತ್ರದುರ್ಗ ನಗರದ ಕುರುವಿನಕಟ್ಟೆ ಸರ್ಕಲ್ ಹತ್ತಿರದ ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಆಶ್ರಮದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘ, ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಆಶ್ರಮ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಹಿರಿಯ ನಾಗರಿಕರ ಸಪ್ತಾಹ ಕಾರ್ಯಕ್ರಮದಲ್ಲಿ ಹಿರಿಯ ನಾಗರೀಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರೀಕರ ರಕ್ಷಣೆಗೆ ಕಾನೂನು ಸೇವಾ ಪ್ರಾಧಿಕಾರದ ನೆರವು ಸದಾ ಇರುತ್ತದೆ, ಹಿರಿಯ ನಾಗರಿಕರು ತಮ್ಮ ಮಗ, ಸೊಸೆ, ಮೊಮ್ಮಕ್ಕಳು, ವಯಸ್ಸಾದ ಸಂದರ್ಭದಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಉದ್ದೇಶದಿಂದ ಅವರಿಗೆ ತಮ್ಮ ಸ್ವಯಾರ್ಜಿತ ಆಸ್ತಿಯನ್ನ ಬರೆದು ಕೊಟ್ಟಿರುತ್ತಾರೆ. ಆದರೆ ಮಕ್ಕಳು ಮೊಮ್ಮಕ್ಕಳು ವಯಸ್ಸಾದ ನಂತರ ತಂದೆ-ತಾಯಿಯನ್ನು ಮನೆಯಿಂದ ಹೊರ ಹಾಕುತ್ತಾರೆ ಅಂತಹ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರದ ನೆರವಿನಿಂದ ಮನೆ, ಆಸ್ತಿ, ಜಮೀನುಗಳನ್ನು ಮತ್ತೆ ವಾಪಸ್ ಪಡೆಯುವಂತಹ ಅಧಿಕಾರವನ್ನು ಹಿರಿಯ ನಾಗರಿಕರು ಹೊಂದಿದ್ದಾರೆ ಎಂದರು.
ಹಿರಿಯ ನಾಗರಿಕರಿಗೆ ಯಾವುದೇ ರೀತಿಯಾದಂತಹ ಅನ್ಯಾಯ ಆಗಿದ್ದರೂ ಸಹ ಭಯಪಡದೆ ಕಾನೂನು ಸೇವಾ ಪ್ರಾಧಿಕಾರದ ಹತ್ತಿರ ತಿಳಿಸಿದರೆ ನ್ಯಾಯ ಕೊಡಿಸುವಂತಹ ಕೆಲಸವನ್ನ ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ತಂದೆ-ತಾಯಿಯರ ಮತ್ತು ಹಿರಿಯ ನಾಗರೀಕರ ಪಾಲನೆ ಪೋಷಣೆ ಮತ್ತು ಕಲ್ಯಾಣ ಅಧಿನಿಯಮ 2007ರ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. 2007ರ ಕಾಯ್ದೆಯ ಪ್ರಕಾರ ಹಿರಿಯ ನಾಗರೀಕರ ಪಾಲನೆ, ಪೋಷಣೆ, ರಕ್ಷಣೆ, ವೈದ್ಯಕೀಯ ನೆರವು ಇತ್ಯಾದಿ ಅಂಶಗಳನ್ನು ಒಳಗೊಂಡಂತೆ ಕಾನೂನು ರೂಪಿಸಿ ಹಿರಿಯ ನಾಗರೀಕರಿಗೆ ಬೆನ್ನೆಲುಬಾಗಿ ನಿಂತಿದೆ. ಹಿರಿಯ ನಾಗರಿಕರಿಗೆ ಸಂಬಂಧಿಸಿದಂತಹ ಪ್ರಕರಣಗಳು ಎಸಿ ಕೋರ್ಟ್‍ನಲ್ಲಿ ಪ್ರಕರಣಗಳು ದಾಖಲಾಗಿ ಮೂರು ತಿಂಗಳ ಒಳಗಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುತ್ತದೆ ಎಂದು ತಿಳಿಸಿದರು.
ಹಿರಿಯ ನಾಗರಿಕರಿಗೆ ಕಿವಿ ಮಷೀನ್, ವಾಕರ್ ಇತ್ಯಾದಿ ಸಲಕರಣೆಗಳನ್ನು ನೀಡಲಾಗುತ್ತಿದೆ ಮತ್ತು ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ 14567 ಪ್ರಾರಂಭ ಮಾಡಲಾಗಿದೆ. ಹಿರಿಯ ನಾಗರಿಕರು ಈ ಉಚಿತ ಸಹಾಯವಾಣಿಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನ ತಿಳಿಸಿದರೆ ತಮ್ಮ ಮನೆ ಬಾಗಿಲಿಗೆ ಬಂದು ಸಮಸ್ಯೆ ಬಗೆಹರಿಸುವಂತಹ ಕೆಲಸ ಮಾಡಲಾಗುತ್ತದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವು ಯಾದವ್ ಮಾತನಾಡಿ, ಮಕ್ಕಳು ಹುಟ್ಟುವಾಗ ಹೇಗೆ ಅಂಬೆಗಾಲು ಇಡುತ್ತಾರೆ ಅದೇ ರೀತಿಯಲ್ಲಿ ಹಿರಿಯ ನಾಗರಿಕರು ಸಹ ಅಂಬೆಗಾಲು ಇಡುವಂತಹ ಮುಗ್ಧ ಮನಸ್ಸುಗಳು. ಹಿರಿಯ ನಾಗರಿಕರ ಪರವಾಗಿ ಸಾಕಷ್ಟು ಕಾನೂನುಗಳು ಇವೆ ಭಯಪಡುವ ಅಗತ್ಯ ಇಲ್ಲ. ವಯಸ್ಸಾದ ತಂದೆ ತಾಯಿಗಳ  ಪಾಲನೆ ಪೋಷಣೆ ಮಾಡುವುದು ಮಕ್ಕಳ ಆದ್ಯ ಕರ್ತವ್ಯ. ಹಿರಿಯ ನಾಗರಿಕರೂ ಸಹ ತಮ್ಮ ಮಕ್ಕಳು ಸೊಸೆ ಮೊಮ್ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು. ಇಳಿ ವಯಸ್ಸಿನಲ್ಲಿ ಪೌಷ್ಟಿಕ ಆಹಾರ ಸೇವನೆ ಮಾಡುವುದರ ಮೂಲಕ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ, ಹಿರಿಯ ನಾಗರಿಕರ ಜಿಲ್ಲಾ ಸಂಘದ ಅಧ್ಯಕ್ಷ ರಂಗಪ್ಪ ರೆಡ್ಡಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಜಿಲ್ಲಾ ಯೋಜನಾ ಸಂಯೋಜಕಿ ಪಿ.ಶಾಂತಮ್ಮ ಹಾಗೂ ಇಲಾಖೆಯ ಸಿಬ್ಬಂದಿ ಹಾಗೂ ಹಿರಿಯ ನಾಗರಿಕರು ಇದ್ದರು.

[t4b-ticker]

You May Also Like

More From Author

+ There are no comments

Add yours