ಜೀವನ ಶೈಲಿ ಬದಲಾವಣೆಯಿಂದ ಸದೃಢ ಆರೋಗ್ಯ: ಡಿಹೆಚ್‍ಓ ಡಾ.ಆರ್.ರಂಗನಾಥ್

 

ಚಿತ್ರದುರ್ಗ (ಕನಾಟಕ ವಾರ್ತೆ) ಸೆಪ್ಟೆಂಬರ್ 26:
ಹಿರಿಯ ನಾಗರಿಕರು ಬಿಪಿ, ಶುಗರ್, ರಕ್ತ ಹೀನತೆ, ಮಧುಮೇಹ, ಕ್ಯಾನ್ಸರ್ ಇಂತಹ ಕಾಯಿಲೆಗಳಿಗೆ ಬೇಗ ಗುರಿಯಾಗುತ್ತಾರೆ. ಹಾಗಾಗಿ ಇಂತಹ ಕಾಯಿಲೆಗಳು ಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪೌಷ್ಠಿಕ ಆಹಾರದ ಜೊತೆಗೆ ದೈನಂದಿನ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಂಗನಾಥ್ ತಿಳಿಸಿದರು.
ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಹಿರಿಯ ನಾಗರೀಕ ಸಹಾಯವಾಣಿ ಕೇಂದ್ರ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘ ಹಾಗೂ ಹಿರಿಯ ನಾಗರೀಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಜಿಲ್ಲಾಮಟ್ಟದ ಹಿರಿಯ ನಾಗರಿಕರ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.


ಉತ್ತಮ ಆರೋಗ್ಯ ಶೈಲಿಯಿಂದ ಹಿರಿಯ ನಾಗರಿಕರ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆಹಾರದಲ್ಲಿ ಸಮಸ್ಯೆ ಎದುರಾದರೆ ತಕ್ಷಣವೇ ವೈದ್ಯರ ಸಲಹೆ ಪಡೆದುಕೊಂಡು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಹಿರಿಯ ನಾಗರಿಕರಿಗೆ ಸರ್ಕಾರ ನೀಡುತ್ತಿರುವಂತಹ ಉಚಿತ ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಳ್ಳುವುದರ ಮೂಲಕ  ತಮ್ಮ ಆರೋಗ್ಯ ಅಭಿವೃದ್ಧಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಆಯುಷ್ ಇಲಾಖೆಯ ಆಯುಷ್ ತಜ್ಞ ವೈದ್ಯಾಧಿಕಾರಿ ಡಾ.ಶಿವಕುಮಾರ್ ಮಾತನಾಡಿ, ವಯೋ ವೃದ್ದರು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಆಹಾರ, ವಾಯುವಿಹಾರ ಶೈಲಿಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳಬೇಕು. ಔಷಧಿಗಳನ್ನು ಇತಿಮಿತಿಯಲ್ಲಿ ಬಳಕೆ ಮಾಡಿಕೊಂಡು ಯೋಗ, ಧ್ಯಾನ ಮಾಡುವುದರ ಮೂಲಕ ನೆಲ್ಲಿಕಾಯಿ, ಜೇನುತುಪ್ಪ, ಹೆಸರುಕಾಳು, ಜೀರ್ಣ ಆಗುವಂತಹ ಸೊಪ್ಪು ತರಕಾರಿ ಹಣ್ಣುಗಳ ಸೇವನೆಮಾಡಬೇಕು ಎಂದು ಹೇಳಿದರು.
ಹಿರಿಯ ನಾಗರಿಕರು ಯಾವಾಗಲೂ ಲವಲವಿಕೆಯಿಂದ ಇದ್ದರೆ ಮಾತ್ರ ಉತ್ತಮ ಆರೋಗ್ಯದಿಂದ ಕಾಪಾಡಿಕೊಳ್ಳಲು  ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್  ಮಾತನಾಡಿ, ಮನೆಯಲ್ಲಿ ಹಿರಿಯ ನಾಗರಿಕರು ಇದ್ದರೆ ಅವರೇ ಆಸ್ತಿ ಎಂದು ತಿಳಿದು ಅವರ ಪಾಲನೆ ಪೋಷಣೆ ಮಾಡಬೇಕು. ನೈಸರ್ಗಿಕವಾಗಿ ಎಲ್ಲರೂ ವೃದ್ದಾಪ್ಯ ವಯಸ್ಸಿಗೆ ತಲುಪುತ್ತಾರೆ. ಹಿರಿಯ ನಾಗರಿಕರಾದ ನಂತರ ಪೌಷ್ಠಿಕ ಆಹಾರ ಸೇವನೆ ತುಂಬಾ ಮುಖ್ಯವಾಗಿದೆ. ವೃದ್ಧರಿಗೆ ಯಾವುದೇ ಸಮಸ್ಯೆ ಕಂಡರೂ ಬೇಗ ವೈದ್ಯರ ಬಳಿಗೆ ಬಂದು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯವಶ್ಯಕ ಎಂದರು.
ಹಿರಿಯ ನಾಗರಿಕರ ಸಪ್ತಾಹದ ಅಂಗವಾಗಿ ಹಿರಿಯ ನಾಗರಿಕರಿಗಾಗಿ ಕೀಲು-ಮೂಳೆ ತಪಾಸಣೆ, ಕಣ್ಣಿನ ಪರೀಕ್ಷೆ, ಕಿವಿ, ಮೂಗು, ಗಂಟಲು ತಪಾಸಣೆ ಹಾಗೂ ಬಿ.ಪಿ, ಶುಗರ್ ಹಾಗೂ ರಕ್ತ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡಲಾಯಿತು. ಆಯುಷ್ ಇಲಾಖೆಯಿಂದಲೂ ಆಯುಷ್ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿ, ಔಷಧಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ವೈ.ಚಂದ್ರಶೇಖರಯ್ಯ, ಹಿರಿಯ ನಾಗರಿಕರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ ರೆಡ್ಡಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಾಹಿತಿ ಸಲಹೆಗಾರ ಡಿ.ಪ್ರಸನ್ನ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಜೆ.ಹರಿಪ್ರಸಾದ್, ಅರುಣಾ ಹಾಗೂ ಹಿರಿಯ ನಾಗರಿಕರು ಇದ್ದರು.

[t4b-ticker]

You May Also Like

More From Author

+ There are no comments

Add yours