ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲ:ಜೆ.ಯಾದವ್ ರೆಡ್ಡಿ

 

ಚಿತ್ರದುರ್ಗ: ಆರೋಗ್ಯಕ್ಕೆ ಹಾನಿಕಾರವಾಗಿರುವ ಸಿಗರೇಟ್, ಮದ್ಯ, ಗುಟ್ಕಾಗೆ ಬೆಂಬಲ ಬೆಲೆಯಿದೆ. ಇಡೀ ಮನುಕುಲಕ್ಕೆ ಅನ್ನ ನೀಡುವ ರೈತ ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆಗುತ್ತಿಲ್ಲ ಎಂದು ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಜನಾಂದೋಲನ ಮಹಾಮೈತ್ರಿ ಕರ್ನಾಟಕ, ಸಿಟಿಜನ್ ಫಾರ್ ಡೆಮಾಕ್ರಸಿ ಜನತಂತ್ರ ಪ್ರಯೋಗ ಶಾಲೆ, ಸಂಯುಕ್ತ ಹೋರಾಟ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ಆಜಾದಿಸೆ ಸ್ವರಾಜ್ ರಾಷ್ಟ್ರಮಟ್ಟದ ಅಭಿಯಾನದ ಅಂಗವಾಗಿ ಕೂಡಲಸಂಗಮದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ವರೆಗೆ ಹೊರಟಿರುವ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ಸೋಮವಾರ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದರು.
ಕೇಂದ್ರದಲ್ಲಿ ಬಿಜೆಪಿ.ಸರ್ಕಾರ ಅಧಿಕಾರಕ್ಕೆ ಬಂದು ಏಳು ವರ್ಷಗಳಾದಾಗಿನಿಂದಲೂ ಯಾರು ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ. ಗೊಬ್ಬರಕ್ಕೆ ಸಬ್ಸಿಡಿ ತೆಗೆದಿದೆ. 95 ಲಕ್ಷ ಕೋಟಿ ರೂ.ಗಳ ಸಾಲ ಮಾಡಿರುವ ಕೇಂದ್ರ ಸರ್ಕಾರ ದೇಶವನ್ನು ದಿವಾಳಿಯೆಬ್ಬಿಸಲು ಹೊರಟಿದೆ. ಅನ್ಯಾಯವನ್ನು ಪ್ರಶ್ನಿಸುವವರನ್ನು ಬಂಧಿಸಿ ಜೈಲಿಗಟ್ಟುತ್ತಿದೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗಿದೆ. ಜನವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಮಾಜಿಕ ಸಾಮರಸ್ಯವನ್ನು ಕದಡುತ್ತಿರುವುದು ದೊಡ್ಡ ದುರಂತ ಎಂದು ಹೇಳಿದರು.
ಎ.ಐ.ಟಿ.ಯು.ಸಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಯಾತ್ರೆಯನ್ನುದ್ದೇಶಿಸಿ ಮಾತನಾಡುತ್ತ ಮುಂದಿನ ಪೀಳಿಗೆಗೆ ಒಳಿತಾಗಲಿ ಎನ್ನುವ ಉದ್ದೇಶವಿಟ್ಟುಕೊಂಡು ಕೂಡಲಸಂಗಮದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ವರೆಗೆ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ಹೊರಟಿದೆ. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸುಳ್ಳು ಹೇಳಿ ಹೇಳಿ ಸತ್ಯವನ್ನಾಗಿಸಲು ಹೊರಟಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಡುವುದರ ಜೊತೆಗೆ ದಿನಕ್ಕೆ ಒಂಬತ್ತು ಗಂಟೆಗಳ ಕಾಲ ವಿದ್ಯುತ್ ನೀಡುವುದಾಗಿ ಭರವಸೆ ನೀಡಿ ವಚನ ಭ್ರಷ್ಟವಾಗಿದೆ. ರೈತರಿಗೆ ಸಾಗುವಳಿ ಹಕ್ಕುಪತ್ರ ಕೊಡಲು ಆಗುತ್ತಿಲ್ಲ. ಇಂತಹ ನೀಚ ಸರ್ಕಾರವನ್ನು ಏನೆಂದು ಕರೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡರುಗಳಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಟಿ.ನುಲೇನೂರು ಶಂಕರಪ್ಪ, ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಕೆ.ಪಿ.ಭೂತಯ್ಯ, ಧನಂಜಯ ಹಂಪಯ್ಯನಮಾಳಿಗೆ. ನಾಗರಾಜ್ ಮುದ್ದಾಪುರ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಿ.ಓ.ಶಿವಕುಮಾರ್, ತಿಪ್ಪೇಸ್ವಾಮಿ, ಎಂ.ಲಕ್ಷ್ಮಿಕಾಂತ್, ಜೆ.ಕೆ.ಕುಮಾರಸ್ವಾಮಿ, ರವಿಕುಮಾರ್, ಕನಕ ಶಿವಮೂರ್ತಿ, ಭಾನು, ಕುಮುದ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯ ನಂತರ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

[t4b-ticker]

You May Also Like

More From Author

+ There are no comments

Add yours