ಸರ್ಕಾರದ ಯೋಜನೆಗಳನ್ನು ಶೋಷಿತರ ಮನೆ ಬಾಗಿಲಿಗೆ ತಲುಪಿಸಿ:ಎ.ನಾರಾಯಣಸ್ವಾಮಿ

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.20:
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ರೈತರು ಹಾಗೂ ಶೋಷಿತರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ಲೀಡ್ ಬ್ಯಾಂಕ್‍ಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಸಲಹಾ ಮತ್ತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಪ್ರಾಯೋಜಿತ ಯೋಜನೆಗಳ ಬಗ್ಗೆ ವಿಳಂಬ ಹಾಗೂ ನಿರ್ಲಕ್ಷ್ಯ ಮಾಡಬಾರದು. ಅನೇಕ ಇಲಾಖೆಗಳ ಸಹಾಯಧನ ಸಹಿತ ಸಾಲ ನೀಡುವ ಸಾಮಾಜಿಕ ಭದ್ರತಾ ಯೋಜನೆಗಳು ಸಾಕಷ್ಟು ಲ್ಯಾಪ್ಸ್ ಆಗುತ್ತಿವೆ. ಸರ್ಕಾರದ ಪ್ರಾಯೋಜಿತ ಯೋಜನೆಗಳನ್ನು ಜಾರಿಗೆ ತರಲು ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಬೇಕು. ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಹಾಗೂ ನಿರ್ಲಕ್ಷ್ಯ ಮಾಡುವ ಬ್ಯಾಂಕ್ ಶಾಖೆಗಳನ್ನು ಮುಚ್ಚಲು ಕ್ರಮ ವಹಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ತ್ವರಿತವಾಗಿ ಅರ್ಜಿ ವಿಲೇವಾರಿ ಮಾಡಿ: ಸರ್ಕಾರದ ವಿವಿಧ ನಿಗಮಗಳಡಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಜೀವನಮಟ್ಟ ಸುಧಾರಣೆಗೆ ಹಲವು ಸ್ವಾವಲಂಬಿ ಯೋಜನೆಗಳಡಿ ಫಲಾನುಭವಿಗಳಿಗೆ ಸಹಾಯಯಧನ, ರೈತರಿಗೆ ಸಾಲಸೌಲಭ್ಯ, ಬೆಳೆವಿಮೆ ಪರಿಹಾರ ಸೇರಿದಂತೆ ಇಂತಹ ಪ್ರಕರಣಗಳಲ್ಲಿ ತ್ವರಿತವಾಗಿ ಅರ್ಜಿ ವಿಲೇವಾರಿಗೊಳಿಸಿ, ನೆರವು ಒದಗಿಸಲು ಸಚಿವರು ಸೂಚನೆ ನೀಡಿದರು.
ಕಳೆದ ಮೂರು ವರ್ಷಗಳಿಂದಲೂ ಅನೇಕ ಅರ್ಜಿಗಳು ಬಾಕಿ ಉಳಿದಿವೆ. ಕಳೆದ ಬಾರಿ ಸಭೆ ನಡೆಸಿ, ಸೂಚನೆ ನೀಡಿದರೂ ಒಂದು ಅರ್ಜಿಯೂ ವಿಲೇವಾರಿ ಆಗಿಲ್ಲ. ಬಡವರಿಗೆ, ಶೋಷಿತರಿಗೆ ಪರಿಹಾರ ನೀಡಲು ವಿಳಂಬ ಧೋರಣೆ ತೋರದೇ ಶೀಘ್ರವಾಗಿ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದರು.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯಲ್ಲಿ 457 ಅರ್ಜಿಗಳಲ್ಲಿ 187 ಅರ್ಜಿಗಳು ವಿಲೇವಾರಿಯಾಗಿದ್ದು, ಇನ್ನೂ 285 ಅರ್ಜಿಗಳು ಬ್ಯಾಂಕ್ ವ್ಯವಸ್ಥಾಪಕರ ಲಾಗಿನ್‍ನಲ್ಲಿ ಬಾಕಿ ಉಳಿದಿವೆ. ಇದರಿಂದ ರೈತರಿಗೆ ಬೆಳೆ ವಿಮೆಯ ಪರಿಹಾರ ಹಣ ಪಾವತಿಯಾಗಿಲ್ಲ. ಬ್ಯಾಂಕ್ ವ್ಯವಸ್ಥಾಪಕರು ಎರಡು-ಮೂರು ದಿನಗಳಲ್ಲಿ ಈ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಸಭೆಗೆ ಮಾಹಿತಿ ನೀಡಿದರು.  ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ಅವರು ಬಾಕಿ ಇರುವ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಿ, ಶೀಘ್ರದಲ್ಲಿ ರೈತರಿಗೆ ಬೆಳೆ ವಿಮೆ ಹಣ ಪಾವತಿಯಾಗುವಂತೆ ಅಗತ್ಯ ಕ್ರಮವಹಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಫಸಲ್ ಬಿಮಾ ಯೋಜನೆ ನೋಂದಣಿ ಪ್ರಾರಂಭಿಸಿ: ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆಗಳಿಗೆ ವಿಮೆ ನೋಂದಣಿ ಪ್ರಾರಂಭಿಸುವಂತೆ ಸಚಿವರು ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು.
ಫಸಲ್ ಬಿಮಾ ಯೋಜನೆಗೆ ಸಂಬಂಧಪಟ್ಟಂತೆ ಈ ವರ್ಷ ಕೇಂದ್ರ ಕಚೇರಿ ವತಿಯಿಂದ ಇದುವರೆಗೂ ಯಾವುದೇ ನೋಟಿಫಿಕೇಷನ್ ಆಗಿಲ್ಲ. ನೋಟಿಫಿಕೇಷನ್ ಆದ ನಂತರ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅಗ್ರಿಕಲ್ಚರಲ್ ಇನ್ಸೂರೆನ್ಸ್ ಕಂಪನಿ ಜಿಲ್ಲೆಗೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಎನ್‍ಆರ್‍ಎಲ್‍ಎಂ ಸಾಧನೆಗೆ ಮೆಚ್ಚುಗೆ: ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‍ಆರ್‍ಎಲ್‍ಎಂ) ವತಿಯಿಂದ ಸುಮಾರು 60 ಕೋಟಿ ರೂಪಾಯಿಗಳನ್ನು ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗೆ ನೀಡಲಾಗಿದೆ. ಎಲ್ಲ ಮಹಿಳೆಯರು ಇದರಲ್ಲಿ ಭಾಗವಹಿಸಿ, ಮಹಿಳೆಯರು ಸ್ವಾಭಿಮಾನದಿಂದ ಆದಾಯ ಉತ್ಪನ್ನ ಮಾಡಿ, ಅವರದೇ ಆದಂತಹ ಬ್ಯಾಂಕಿಂಗ್ ವ್ಯವಸ್ಥೆ ಮಾಡಿಕೊಂಡಿರುವುದು ಆಶಾದಾಯಕ ಸಂಗತಿ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ಯಾಂಕ್ ಶಾಖೆ ತೆರೆಯಲು ಸೂಚನೆ: ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಡಿ ಗ್ರಾಮ ಶೇಷಪ್ಪನಹಳ್ಳಿ ಹಾಗೂ ಯಲ್ಲದಕೆರೆ ವ್ಯಾಪ್ತಿಯ ಸುಮಾರು 36 ಕಿ.ಮೀ ವ್ಯಾಪ್ತಿಯಲ್ಲಿ ಒಂದು ಬ್ಯಾಂಕ್ ಶಾಖೆಯೂ ಇರುವುದಿಲ್ಲ. ಈ ಹಿಂದೆ ಯಲ್ಲದಕೆರೆಯಲ್ಲಿದ್ದ ಬ್ಯಾಂಕ್ ಶಾಖೆಯನ್ನು ಮುಚ್ಚಲಾಗಿದೆ. ಈ ಭಾಗದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್ ಶಾಖೆ ತೆರೆಯುವ ಅಗತ್ಯವಿದೆ. ಶೇಷಪ್ಪನಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲೂ ಗ್ರಾಮಸ್ಥರು ಬ್ಯಾಂಕ್ ಶಾಖೆ ತೆರೆಯುವಂತೆ ಮನವಿ ಮಾಡಲಾಗಿತ್ತು. ಶೇಷಪ್ಪನಹಳ್ಳಿ ಅಥವಾ ಯಲ್ಲದಕರೆಯಲ್ಲಿ ಬ್ಯಾಂಕ್ ಶಾಖೆ ತೆರೆಯುವಂತೆ ಎನ್‍ಆರ್‍ಎಲ್‍ಎಂ ಭೋಜರಾಜ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಅಥವಾ ಡಿಸಿಸಿ ಬ್ಯಾಂಕ್ ನವರು ಬ್ಯಾಂಕ್ ಶಾಖೆ ತೆರೆಯುವಂತೆ ಸೂಚನೆ ನೀಡಿದರು.
ಪಿಎಂಎಸ್‍ಬಿವೈ, ಪಿಎಂಜೆಜೆಬಿವೈ ಯೋಜನೆಗೆ ನೋಂದಣಿಗೆ ಪ್ರೋತ್ಸಾಹಿಸಿ: ವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಮತ್ತು ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಅಡಿಯಲ್ಲಿ ಅರ್ಹರು ನೋಂದಾಯಿಸಿಕೊಳ್ಳಲು ಪ್ರೋತ್ಸಾಯಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಗೆ ಜಿಲ್ಲೆಯಲ್ಲಿ 64 ಸಾವಿರ ನೊಂದಣಿ ಗುರಿ ನಿಗದಿಪಡಿಸಲಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ 2.12 ಲಕ್ಷ ಗುರಿ ನಿಗದಿಪಡಿಸಲಾಗಿದ್ದು, ಜೂನ್ ಅಂತ್ಯದೊಳಗೆ ಗುರಿ ಸಾಧಿಸಲಾಗುವುದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮಾಹಿತಿ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್, ಆರ್‍ಬಿಐನ ಸುಪ್ರಿಯಾ ಬ್ಯಾನರ್ಜಿ, ನಬಾರ್ಡ್‍ನ ಕವಿತಾ ಎಸ್.ಶಶಿಧರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಮಹದೇವಯ್ಯ, ದಾವಣಗೆರೆಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಶ್ರೀನಿವಾಸ್, ಎಸ್‍ಬಿಐನ ರಂಜನ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳೂ ಇದ್ದರು.
[t4b-ticker]

You May Also Like

More From Author

+ There are no comments

Add yours