ವಚನಗಳ ಮೂಲಕ ಸಮಾಜ ತಿದ್ದುವ ಕಾಯಕ ಮಾಡಿದ ಮಹನೀಯರು ಅಂಬಿಗರ ಚೌಡಯ್ಯ

 

ಚಿತ್ರದುರ್ಗ ಜ. 21 (ಕರ್ನಾಟಕ ವಾರ್ತೆ) :
ನೇರ, ನಿಷ್ಠುರ ನುಡಿಗಳ ತಮ್ಮ ವಚನಗಳ ಮೂಲಕ ಸಮಾಜ ತಿದ್ದುವ ಕಾಯಕ ಮಾಡಿದ ಮಹನೀಯರಲ್ಲಿ ಅಂಬಿಗರ ಚೌಡಯ್ಯನವರು ಮುಂಚೂಣಿಗರು ಎಂದು ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಅವರು ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಗಂಗಾಮತಸ್ಥ ಮತ್ತು ಬೆಸ್ತರ ಸಂಘದ ಸಹಯೋಗದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹನ್ನೆರಡನೆ ಶತಮಾನ, ಶರಣರ ಕ್ರಾಂತಿಯ ಶತಮಾನವಾಗಿದ್ದು, ಕಲ್ಯಾಣ ಕ್ರಾಂತಿಯಲ್ಲಿ ಅನೇಕ ಶರಣರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.  ಇದಕ್ಕೆ ಪೂರಕವಾಗಿ ತಮ್ಮ ಕಾಣಿಕೆ ಸಲ್ಲಿಸಿದವರಲ್ಲಿ ಅಂಬಿಗರ ಚೌಡಯ್ಯನವರೂ ಕೂಡ ಒಬ್ಬರು.  ನೇರ, ನಿಷ್ಠುರವಾಗಿ ತಮ್ಮ ವಚನಗಳು, ಬೋಧನೆ ಮೂಲಕ ಸಮಾಜದ ಅಂಕುಡೊಂಕುಗಳ ಮೇಲೆ ಬೆಳಕು ಚೆಲ್ಲಿ, ಅದನ್ನು ತಿದ್ದುವ ಕಾರ್ಯ ಮಾಡಿದವರು ಚೌಡಯ್ಯನವರು.  ಸಮಾಜದಲ್ಲಿ ಮನೆ ಮಾಡಿರುವ ಜಾತಿಯತೆ, ಅಸಮಾನತೆ ಬಗ್ಗೆಯೂ ತಮ್ಮ ವಚನಗಳಲ್ಲಿ ಕಟ್ಟಿಕೊಟ್ಟವರು ಅಂಬಿಗರ ಚೌಡಯ್ಯನವರು.  ಮನುಷ್ಯನಿಗೆ ಸ್ವಾರ್ಥಪರ ಆಸೆ, ಚಿಂತನೆಯೇ ಹೊರತು, ಶಿವನೆಡೆಗೆ ಭಕ್ತಿ ತೋರುವವರು ಕಡಿಮೆ ಎಂಬುದಾಗಿ ವಚನದಲ್ಲಿ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.  ಇಂತಹ ಮಹನೀಯರ ತತ್ವಾದರ್ಶಗಳನ್ನು ಜೀವದಲ್ಲಿ ಅಳವಡಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡೋಣ ಎಂದು ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಅವರು ಹೇಳಿದರು.
ಬಾಲಕರ ಸ.ಪ.ಪೂ. ಕಾಲೇಜು ಉಪನ್ಯಾಸಕ ಡಾ. ಬಿ.ಎಂ. ಗುರುನಾಥ್ ಅವರು ಅಂಬಿಗರ ಚೌಡಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿ, ಸಮಾಜದ ಬಗ್ಗೆ ಉತ್ತಮವಾಗಿ ಅರ್ಥೈಸಿಕೊಂಡಿದ್ದ ಚೌಡಯ್ಯನವರು, ನಾವು ಪ್ರಸ್ತುತ ಸಂದರ್ಭದಲ್ಲಿ ಹೇಗೆ ವರ್ತಿಸಬೇಕೆಂದು ವಚನಗಳಲ್ಲಿ ತಿಳಿಸಿದ್ದಾರೆ.  ಅಸಮಾನತೆಯನ್ನು ಹೋಗಲಾಡಿಸಲು ಧಾರ್ಮಿಕ ಕ್ಷೇತ್ರದಲ್ಲಿ ಸೈದ್ಧಾಂತಿಕ ಕೆಲಸ ಮಾಡಿದ್ದಾರೆ.  ಬಸವಣ್ಣನವರ ನೇತೃತ್ವದಲ್ಲಿ ಅನೇಕ ಆಂದೋಲನಗಳನ್ನು ಮಾಡಿದ್ದಾರೆ.  ಗುರುವಿನ ಬಗ್ಗೆ, ಗುರುವಿನ ಸ್ಥಾನದ ಬಗ್ಗೆ ಹಾಗೂ ಸಂಸಾರದ ಬಗ್ಗೆ ಸವಿಸ್ತಾರವಾಗಿ ವಚನಗಳಲ್ಲಿ ತಿಳಿಸಿಕೊಟ್ಟಿದ್ದಾರೆ ಎಂದರು.
ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಗಂಗಾಮತಸ್ಥ ಹಾಗೂ ಬೆಸ್ತರ ಸಂಘದ ಅಧ್ಯಕ್ಷ ಹೆಚ್.ಡಿ. ರಂಗಯ್ಯ, ಗೌರವಾಧ್ಯಕ್ಷ ತ್ಯಾಗರಾಜರು, ಕಾರ್ಯದರ್ಶಿ ಪಿ. ಶ್ರೀನಿವಾಸ್, ಉಪಾಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಸಮಾಜದ ಮುಖಂಡರಾದ ರಾಮಸ್ವಾಮಿ, ರಂಗಣ್ಣ, ಜಯಣ್ಣ, ನಾಗರಾಜ್, ಸಿದ್ದಣ್ಣನವರ್, ಕುಮಾರಣ್ಣ, ಹನುಮಂತಪ್ಪ, ಮಹೇಶ್, ಶಶಿಕಿರಣ್, ರಾಜು, ದೊರೆಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಹೇಮಂತ್ ಮತ್ತು ಮೈಲಾರಿ ತಂಡದವರು ಗೀತ ಗಾಯನ ಪ್ರಸ್ತುತಪಡಿಸಿದರು.

[t4b-ticker]

You May Also Like

More From Author

+ There are no comments

Add yours