ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ ಸಮರ್ಪಕಗೊಳಿಸಿ- ದಿವ್ಯಪ್ರಭು ಜಿ.ಆರ್.ಜೆ.

 

ಚಿತ್ರದುರ್ಗ ಜ. 03 (ಕರ್ನಾಟಕ ವಾರ್ತೆ) : ಚಿತ್ರದುರ್ಗ ಜಿಲ್ಲೆಯಲ್ಲಿನ ಎಲ್ಲ ಮತಗಟ್ಟೆಗಳಲ್ಲಿ ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥಿತವಾಗಿಸಲು ಸಂಬಂಧಪಟ್ಟ ತಹಸಿಲ್ದಾರರು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಸೂಚನೆ ನೀಡಿದ್ದಾರೆ.

ಮತಗಟ್ಟೆಗಳಲ್ಲಿನ ಸೌಕರ್ಯಗಳನ್ನು ಪರಿಶೀಲಿಸುವ ಕಾರ್ಯಕ್ರಮದಡಿ, ಜಿಲ್ಲಾಧಿಕಾರಿಗಳು ಮಂಗಳವಾರದಂದು ಚಳ್ಳಕೆರೆ ತಾಲ್ಲೂಕು ಬಾಲೇನಹಳ್ಳಿ ಮತ್ತು ಕುರುಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳೊಂದಿಗೆ ಮಾತನಾಡಿ, ಶಾಲೆಯ ಶಿಕ್ಷಣ, ಆಹಾರ ಪೂರೈಕೆ ಮತ್ತಿತರ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.  ಬಾಲೇನಹಳ್ಳಿ ಶಾಲೆಯಲ್ಲಿ ಮತಗಟ್ಟೆಯಿದ್ದು, ಶಾಲೆಯಲ್ಲಿ ವಿದ್ಯುತ್ ಸಂಪರ್ಕವಿದ್ದರೂ, ವಿದ್ಯುತ್‍ದೀಪ ಹಾಕಿಕೊಳ್ಳದೆ ಕತ್ತಲಲ್ಲಿಯೇ ಮಕ್ಕಳಿಗೆ ಪಾಠ ಮಾಡುವುದನ್ನು ಗಮನಿಸಿದರು. ಫ್ಯಾನ್ ಮುಂತಾದ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಕೂಡಲೆ ವಿದ್ಯುತ್‍ದೀಪ ಹಾಗೂ ಫ್ಯಾನ್ ವ್ಯವಸ್ಥೆಯನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಕುರುಡಿಹಳ್ಳಿಯಲ್ಲಿನ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಶಾಲೆಗೆ ರ್ಯಾಂಪ್, ಕುಡಿಯುವ ನೀರಿನ ವ್ಯವಸ್ಥೆ ಲಭ್ಯವಿದೆ.  ಆದರೆ ವಿದ್ಯುತ್ ಸಂಪರ್ಕ, ವಿದ್ಯುತ್‍ದೀಪ ಮುಂತಾದ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಅಗತ್ಯ ಮೂಲಭೂತ ಸೌಕರ್ಯ ಮಾಡಿಕೊಳ್ಳಬೇಕು, ಈ ಶಾಲೆಯ ಗೋಡೆಗಳಲ್ಲಿ ಅಲ್ಲಲ್ಲಿ ಬಿರುಕು ಕಂಡುಬಂದಿದ್ದು, ಅದನ್ನು ಕೂಡ ಸರಿಪಡಿಸುವಂತೆ ಸೂಚನೆ ನೀಡಿದರು.  ಈ ಶಾಲೆಗೆ ಈಗಾಗಲೆ ಒಂದು ಶೌಚಾಲಯವಿದ್ದು, ಇನ್ನೊಂದು ಹೆಚ್ಚುವರಿ ಶೌಚಾಲಯ ಅಗತ್ಯವಿದೆ ಎಂಬ ಬೇಡಿಕೆ ಬಂದ ಹಿನ್ನೆಲೆಯಲ್ಲಿ, ಹೆಚ್ಚುವರಿ ಶೌಚಾಲಯ ನಿರ್ಮಾಣಕ್ಕೆ ಕೂಡಲೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿಯೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಈಗಾಗಲೆ ಹೆಚ್ಚುವರಿ ಶೌಚಾಲಯ ನಿರ್ಮಾಣಕ್ಕೆ ನರೇಗಾ ಕನ್ವರ್ಜೆನ್ಸ್ ನಡಿ ಕ್ರಮ ಕೈಗೊಳ್ಳಲಾಗಿದೆ ಎಂದರು.  ಆದಷ್ಟು ಶೀಘ್ರ ಶೌಚಾಲಯ ಸೇರಿದಂತೆ ಎಲ್ಲ ಅಗತ್ಯ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸದ್ಯದಲ್ಲಿಯೇ ವಿಧಾನಸಭೆ ಚುನಾವಣೆ ಬರಲಿದ್ದು, ಜಿಲ್ಲೆಯಲ್ಲಿನ ಎಲ್ಲ ಮತಗಟ್ಟೆಗಳನ್ನು ಆಯಾ ಬಿಎಲ್‍ಒ ಗಳು ಹಾಗೂ ತಹಸಿಲ್ದಾರರು ಪರಿಶೀಲಿಸಿ, ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕುರಿತು ವರದಿ ಸಿದ್ಧಪಡಿಸಿಕೊಂಡು, ತ್ವರಿತವಾಗಿ ಎಲ್ಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.  ತಹಸಿಲ್ದಾರ್ ರಘುಮೂರ್ತಿ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಎಲ್‍ಒ ಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours