ಸ್ಥಳೀಯ ಅವಶ್ಯಕತೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ: ಡಾ.ವಿ.ರಾಮ್ ಪ್ರಸಾತ್ ಮನೋಹರ್

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್3:
ಜಿಲ್ಲಾ ಪಂಚಾಯಿತಿ ಆಯವ್ಯಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಗೆ ಮಂಜೂರಾತಿ ನೀಡುವ ಮುನ್ನ, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಕಡ್ಡಾಯವಾಗಿ ಚರ್ಚಿಸಬೇಕು. ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸಬೇಕು ಎಂದು ಪ್ರವಾಸೋಧ್ಯಮ ಇಲಾಖೆ ನಿರ್ದೇಶಕರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ ಹೇಳಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ 2022-23ನೇ ಸಾಲಿನ ಜಿಲ್ಲಾ ಪಂಚಾಯಿತಿ ಲಿಂಕ್ ಡಾಕ್ಯುಮೆಂಟ್ ಅನುದಾನ ಕ್ರಿಯಾ ಯೋಜನೆ, ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾರ್ಮಿಕ ಅಯವ್ಯಯ, 2022-23ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ಅನುಮೋದನೆ ಕುರಿತು ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನಪ್ರತಿನಿಧಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸುವುದರಿಂದ ಕಾಮಗಾರಿಗಳ ಅನುಷ್ಠಾನದಲ್ಲಿ ಗೊಂದಲ ಉಂಟಾಗುವುದು ತಪ್ಪುತ್ತದೆ. ಆದ್ಯತೆ ಮೇರೆಗೆ ಜನರಿಗೆ ಅಗತ್ಯ ಇರುವ ಕಾಮಗಾರಿಗಳನ್ನು ಕೈಗೆತ್ತಿ ಕೈಗೊಳ್ಳಬಹುದು. ಕಳೆದ ವರ್ಷ ಅನುಮೋದನೆ ನೀಡಿದ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಮುಂದಿನ ಸಭೆಯಲ್ಲಿ ಎಲ್ಲಾ ಕಾಮಗಾರಿಗಳ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದರು.
ನರೇಗಾ ಗುರಿ ಪೂರ್ಣಗೊಳಿಸಲು ಸೂಚನೆ: ಕಳೆದ ವರ್ಷ 52 ಲಕ್ಷ ಮಾನವ ದಿನಗಳ ಗುರಿಯ ನರೇಗಾದಲ್ಲಿ ಜಿಲ್ಲಾ ಪಂಚಾಯಿತಿ ನೀಡಲಾಗಿತ್ತು. ಇದರಲ್ಲಿ 46 ಲಕ್ಷ ಮಾನವ ದಿನಗಳ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಪ್ರಸಕ್ತ ವರ್ಷ 48 ಲಕ್ಷ ಮಾನವ ದಿನಗಳ ಗುರಿಯನ್ನು ನೀಡಲಾಗಿದೆ ಎಂದು ಜಿ.ಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಸಭೆಗೆ ಮಾಹಿತಿ ನೀಡಿದರು.
ರಾಜ್ಯ ಹಲವು ಜಿಲ್ಲಾ ಪಂಚಾಯಿತಿಗಳು ನರೇಗಾ ಗುರಿಯನ್ನು ಪೂರ್ಣಗೊಳಿಸಿ, ಹೆಚ್ಚಿನ ಮಾನವದಿನಗಳ ಸೃಜನೆ ಮಾಡಿವೆ. ನಮ್ಮ ಜಿಲ್ಲೆಯಲ್ಲಿ ನಿಗಿದಿತ ಗುರಿ ತಲುಪಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅಧಿಕಾರಿಗಳು ಪತ್ತೆಹಚ್ಚಿ ಪ್ರಸಕ್ತ ವರ್ಷದಲ್ಲಿ ಕೇಂದ್ರ ಸರ್ಕಾರ ನೀಡಿದ ಗುರಿಯ ಪೂರ್ಣಗೊಳಿಸಬೇಕು.
ನರೇಗಾ ಕ್ರಿಯಾಯೋಜನೆ ಕಾಲಕ್ಕೆ ತಂಕ್ಕತೆ ರೂಪಿಸಬೇಕು. ಬೇಸಿಗೆಯಲ್ಲಿ ಜಲಾನಯನ ಕಾಮಗಾರಿಗಳಿಗೆ ಒತ್ತು ನೀಡಿದರೆ, ಮಳೆಗಾಲ ಆರಂಭವಾದ ನಂತರ ಸಾಮಾಜಿಕ ಅರಣ್ಯ ಹಾಗೂ ನೆಡುತೋಪುಗಳ ಕಾಮಗಾರಿಗಳನ್ನು ಕೈಗೊಳ್ಳಬೇಕು. ಇದರ ಜೊತೆಗೆ ಜನರಿಗೆ ಅಗತ್ಯ ಹಾಗೂ ಅನುಕೂಲ ಇರುವ ಕಾಮಗಾರಿಗಳಿಗೆ ಅನುಮೋದನೆ ನೀಡಬೇಕು. ಗ್ರಾಮೀಣ ಜನರ ಬದುಕನ್ನು ಸುಸ್ತಿರಗೊಳಿಸುವಲ್ಲಿ, ನರೇಗಾ ಒಂದು ಸಮಗ್ರ ಯೋಜನೆಯಾಗಿದೆ. ಪ್ರಸಕ್ತ ವರ್ಷದಲ್ಲಿ ನರೇಗಾ ಕ್ರಿಯೋಜನೆ ರೂಪಿಸಿದ ಹಾಗೂ ಕಾಮಗಾರಿ ಅನುಷ್ಠಾನ ಮಾಡದ ಗ್ರಾಮ ಪಂಚಾಯಿತಿಗಳ ಪಿಡಿಓಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿ.ರಾಮ್ ಪ್ರಸಾತ್ ಮನೋಹರ ಸೂಚನೆ ನೀಡಿದರು.
26 ಮಿ.ಮೀ ಮಳೆ ಕೊರತೆ  : ಜಿಲ್ಲೆಯಲ್ಲಿ ಮೇ ಮಾಹೆಯಲ್ಲಿ 108 ಮಿ.ಮೀ ವಾಡಿಕೆ ಮಳೆ ಪ್ರಮಾಣವಿದೆ. ಈ ಬಾರಿ 80 ಮಿ.ಮೀ ಮಳೆಯಾಗಿದೆ. ಸುಮಾರು 26 ಮಿ.ಮೀ ಮಳೆಯ ಕೊರತೆಯಿದೆ. ಚಿತ್ರದುರ್ಗ ತಾಲೂಕಿನಲ್ಲಿ 54 ಮಿ.ಮೀ. ಹೊಳಲ್ಕೆರೆಯಲ್ಲಿ 53 ಮಿ.ಮೀ. ಹಿರಿಯೂರಿನಲ್ಲಿ 44 ಮಿ.ಮೀ ಮಳೆಯ ಕೊರತೆಯಾಗಿದೆ. ಉಳಿದಂತೆ ಮೊಳಕಾಲ್ಮೂರು ತಾಲೂಕಿನಲ್ಲಿ ಸರಾಸರಿಗಿಂತ 2.ಮಿ.ಮೀ ಮಳೆ ಹೆಚ್ಚಾಗಿದೆ. ರೈತರು ಬಿತ್ತನೆ ಭೂಮಿ ಹದಗೊಳಸಿದ್ದಾರೆ. 26 ಮಟ್ರಿಕ್ ಟನ್ ಬೀಜ ವಿತರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಅಗತ್ಯ ರಸಗೊಬ್ಬರದ ದಾಸ್ತಾನು ಸಂಗ್ರಹಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಪಿ.ರಮೇಶ್‍ಕುಮಾರ್ ಸಭೆಗೆ ಮಾಹಿತಿ ನೀಡಿದರು.
2023-24ನೇ ಸಾಲಿಗೆ ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಿಂದ ರೂ.1214.44 ಕೋಟಿ ಆಯ್ಯವ್ಯಯ ರೂಪಿಸಲಾಗಿದೆ. ಇದರಲ್ಲಿ ರೂ.440.11 ಕೋಟಿ ಜಿಲ್ಲಾ ಪಂಚಾಯಿತಿ ಹಾಗೂ ರೂ.774.32 ಕೋಟಿ ತಾಲೂಕು ಪಂಚಾಯತಿಗಳಿಗೆ ಹಂಚಿಕೆ ಮಾಡಲಾಗಿದೆ.  ಜಿಲ್ಲಾ ಪಂಚಾಯಿತಿಯ ರೂ.440.11 ಕೋಟಿಯಲ್ಲಿ 143.68 ಕೋಟಿ ವೇತನ, ರೂ.296.63 ಕೋಟಿ ವೇತನ ರಹಿತ ಹಾಗೂ ಕಟ್ಟಡಗಳ ದುರಸ್ಥಿಗಾಗಿ ಹಂಚಿಕೆ ಮಾಡಲಾಗಿದೆ. ಸಭೆಯಲ್ಲಿ ವೇತನ ಸೇರಿ ಅಗತ್ಯ ಅನುದಾನ ಬಿಡುಗಡೆ ಅನುಮೋದನೆ ನೀಡಲಾಯಿತು. ವೇತನ ರಹಿತ ಅಭಿವೃದ್ಧಿ ಕಾಮಗಾರಿಗಳಿಗೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಕ್ರಿಯಾಯೋಜನೆ ಅಂತಿಮಗೊಳಿಸಿದ ನಂತರ ಅನುಮೋದನೆ ನೀಡಲು ತೀರ್ಮಾನಿಸಲಾಯಿತು.
ಧನಾತ್ಮಕ ಮನೋಭಾವದಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಧನಾತ್ಮಕ ಮನೋಭಾವದಿಂದ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಬಡವರಿಗೆ ಈ ಯೋಜನಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪ್ರವಾಸೋಧ್ಯಮ ಇಲಾಖೆ ನಿರ್ದೇಶಕ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತಿ ಆಡಳಿತಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ ಹೇಳಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ನ್ಯಾಯ ನೀಡುವ ದೃಷ್ಟಿಯಿಂದ ಹಾಗೂ ಬಡವರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಯುವ ನಿಧಿ ಹಾಗೂ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣದ ಯೋಜನೆ ಜಾರಿಗೊಳಿಸಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ಯೋಜನೆಗಳನ್ನು ಅನುಷ್ಠಾನ ಮಾಡುವ ಇಲಾಖೆಗಳ ಅಧಿಕಾರಿಗಳು ಯೊಜನೆಗಳ ಬಗ್ಗೆ ಎಲ್ಲಾ ರೀತಿಯ ಮಾಹಿತಿ ತಿಳಿದುಕೊಳ್ಳಬೇಕು. ಯೋಜನೆ ಲಾಭ ಪಡೆಯುವ ಸಾರ್ವಜನಿಕರ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು ಎಂದರು.
ಸಭೆಯಲ್ಲಿ ಜಿ.ಪಂ.ಸಿಇಓ ದಿವಾಕರ.ಎಂ.ಎಸ್, ಜಿ.ಪಂ.ಮುಖ್ಯಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಮುಖ್ಯ ಲೆಕ್ಕಾಧಿಕಾರಿ ಡಿ.ಆರ್.ಮಧು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
[t4b-ticker]

You May Also Like

More From Author

+ There are no comments

Add yours