ಸದೃಢವಾದ ಭಾರತ ಕಟ್ಟಲು ಯುವ ಜನತೆ ಶ್ರಮಿಸಬೇಕು : ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕರೆ

 

ಚಿತ್ರದುರ್ಗ, (ಸೆ.10) : ಸ್ವಸ್ತ ಸಮಾಜ ನಿರ್ಮಾಣ ಮಾಡುವಲ್ಲಿ ಯುವಜನತೆಯ ಪಾತ್ರ ಮಹತ್ವವಾದುದು. ಹಾಗಾಗಿ ಯುವಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಸದೃಢ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕೆಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕರೆ ನೀಡಿದರು.
ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿರುವವರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಸ್ಟೇಡಿಯಂ ರಸ್ತೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಾವ ಸಮೂಹದಿಂದ ಪ್ರಬಲ ಭಾರತ ನಿರ್ಮಾಣ ಮಾಡಲು ಸಾಧ್ಯವೋ, ಅಂತಹ ಯುವ ಸಮುದಾಯವನ್ನು ಮಾದಕ ವ್ಯಸನಿಗಳನ್ನಾಗಿ ಮಾಡುವ ಹುನ್ನಾರ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ನಡೆಯುತ್ತಿದೆ. ಆ ಮೂಲಕ ಸಮಾಜದ ಸ್ವಾಸ್ತ್ಯ ಕೆಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಯುವ ಜನತೆ ಮಾದಕ ವ್ಯಸನಿಗಳಾದಲ್ಲಿ ಮನಸಿನ ಸ್ವಾಸ್ತ್ಯ ಹಾಳಾಗುತ್ತದೆ. ಪರಿಣಾಮವಾಗಿ ಯುವಕರು ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.
ಇದರಿಂದ ದೇಶವನ್ನು ಅಭದ್ರಗೊಳಿಸುವ ಕೆಲಸವಾಗುತ್ತದೆ. ಹಾಗಾಗಿ ಯುವಜನರು ಈ ಕುರಿತು ಜಾಗೃತರಾಗಿರಬೇಕು ಎಂದು ಎಚ್ಚರಿಸಿದರು.
ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನಕ್ಕೆ ಜನರನ್ನು ತಳ್ಳುವ ಕೆಲಸ ದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಇದು ನಮ್ಮ ರಾಜ್ಯಕ್ಕೂ ಕಾಲಿಟ್ಟಿರುವುದು ಅಪಾಯಕಾರಿ ಬೆಳವಣಿಗೆ. ಈ ಕುರಿತು ಪ್ರತಿಯೊಬ್ಬರೂ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ. ಹಾಗಾಗಿ ಶಾಲಾ, ಕಾಲೇಜುಗಳು, ಸಭೆ ಸಮಾರಂಭಗಳು ನಡೆಯುವ ಸಂದರ್ಭಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟು ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ. ರಾಜ್ಯ ಸರ್ಕಾರವೂ ಸಹ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ ಯಾವುದೇ ತಪ್ಪು ನಡೆದಲ್ಲಿ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಎಂತಹ ಪ್ರಭಾವಿ ವ್ಯಕ್ತಿಗಳೇ ಇದ್ದರೂ ಸರ್ಕಾರ ಯಾವುದೇ ಮುಲಾಜಿಲ್ಲದೇ ಅವರಿಗೆ ಶಿಕ್ಷೆ ನೀಡುವ ಕೆಲಸ ಮಾಡಬೇಕು. ಆ ಮೂಲಕ ಮಾದಕ ಮುಕ್ತ ರಾಜ್ಯ ಮಾಡಬೇಕು. ದೇಶದಲ್ಲೂ ಕಠಿಣ ಕ್ರಮಗಳನ್ನು ಅನುಸರಿಸುವ ಮೂಲಕ ಮಾದಕ ಮುಕ್ತ ಭಾರತ ನಿರ್ಮಾಣವಾಗಬೇಕು. ಆ ಮೂಲಕ ಆರೋಗ್ಯವಂತ ಸಮಾಜ, ಸ್ವಸ್ತ ಸಮಾಜ ನಿರ್ಮಾಣವಾಗಬೇಕು ಎಂದು ಆಶಿಸಿದರು.

ಯುವ ಜನಾಂಗ ನಮ್ಮ ದೇಶದ ಸಂಪತ್ತು. ಹಾಗಾಗಿ ಅವರು ಹದಿಹರೆಯದ ವಯಸ್ಸಿನಲ್ಲಿ ಸದಭಿರುಚಿಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ವಯಸ್ಸಿನ ಕಾಲದಲ್ಲಿ ದುಶ್ಚಟಗಳ ದಾಸರಾಗಬಾರದು. ಉತ್ತಮ ನಡೆನುಡಿಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದುಕೊಂಡು ಸಚ್ಚಾರಿತ್ರರಾಗಬೇಕು. ನಮ್ಮ ದೇಶದಲ್ಲಿ ಅನೇಕ ದಾರ್ಶನಿಕರು ಆಗಿ ಹೋಗಿದ್ದಾರೆ. ಅಂತಹ ಮಹನೀಯರ ಉದಾತ್ತ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸತ್ಪ್ರಜೆಗಳಾಗಬೇಕು ಎಂದು ಕಿವಿಮಾತು ಹೇಳಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಕಾರ್ಯದರ್ಶಿ ಚಂದ್ರಶೇಖರ್, ದೀಪಕ್‍ರಾಜ್, ಅವಿನಾಶ್, ಷಣ್ಮುಖ, ಮನೋಜ್, ದರ್ಶನ್, ಕೃತಿಕಾ, ಕೋಮಲಾ ಸೇರಿದಂತೆ ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours