ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹಾಗೂ ಯೋಜನಾ ಅಭಿಯಂತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

 

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹಾಗೂ ಯೋಜನಾ ಅಭಿಯಂತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು
ಆರ್.ಓ.ಘಟಕಗಳ ನಿರ್ಮಾಣದಲ್ಲಿ 1.11 ಕೋಟಿ ರೂ. ಡಿಎಂಎಫ್ ಹಣ ದುರ್ಬಳಕೆ ಆರೋಪ
ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.25:
ಶುದ್ಧ ನೀರು ಘಟಕಗಳ ನಿರ್ಮಾಣದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯ ಹಣ ದುರ್ಬಳಕೆ ಆರೋಪದ ಮೇರೆಗೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೆ.ಜಿ.ಮೂಡಲಗಿರಿಯಪ್ಪ, ಯೋಜನಾ ಅಭಿಯಂತರ ಸತೀಶ್ ಕಲ್ಲಹಟ್ಟಿ ಹಾಗೂ ಇತರರ ಮೇಲೆ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹಾಗೂ ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪ ಹಾಗೂ ಯೋಜನಾ ಅಭಿಯಂತರ ಸತೀಶ್ ಕಲ್ಲಟ್ಟಿ ಅವರನ್ನು ಸೇವೆಯಿಂದ ವಿಮುಕ್ತಿಗೊಳಿಸಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಆದೇಶ ಹೊರಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣ ಹಾಗೂ ನಾಯಕನಹಟ್ಟಿ ಪಟ್ಟಣ ವ್ಯಾಪ್ತಿಯಲ್ಲಿ ಜಿಲ್ಲಾ ಖನಿಜಾ ಪ್ರತಿಷ್ಠಾನ ಟ್ರಸ್ಟ್‍ನಿಂದ ನಿರ್ಮಿತಿ ಕೇಂದ್ರದಿಂದ ಅನುಷ್ಠಾನಗೊಳ್ಳುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಅಧಿಕಾರಿಗಳ ತಂಡ ಖುದ್ದಾಗಿ ಸ್ಥಳ ಪರಿಶೀಲಿಸಿ, ಪ್ರತಿ ಘಟಕವಾರು ತಪಾಸಣಾ ವರದಿ ಸಲ್ಲಿಸಿದೆ.
2023ರ ಜೂನ್ 17ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಉಪವಿಭಾಗಾಧಿಕಾರಿಗಳು ಮೊಳಕಾಲ್ಮುರು ಪಟ್ಟಣ, ನಾಯಕನಹಟ್ಟಿ ಪಟ್ಟಣ ಮತ್ತು ಉಚ್ಚಂಗಿ ದುರ್ಗ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಜಿಲ್ಲಾ ಖನಿಜಾ ಪ್ರತಿಷ್ಠಾನ ಅನುದಾನದಡಿ ನಿರ್ಮಿಸಲಾಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿಗಳ ಜಂಟಿ ಸ್ಥಳ ಪರಿಶೀಲನಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ನಿರ್ಮಿತಿ ಕೇಂದ್ರಗಳಿಂದ ಕಾಮಗಾರಿಗಳನ್ನು ಕೈಗೊಳ್ಳಬೇಕಾದ ಸಂದರ್ಭದಲ್ಲಿ ಅಂದಾಜುಗಳಿಗೆ ತಾಂತ್ರಿಕ ಮಂಜೂರಾತಿಯನ್ನು ಕೆಎಆರ್‍ಎನ್‍ಐಕೆ, ಕೆಪಿಡಬ್ಬೂಡಿ, ಪಿಆರ್‍ಇಡಿ ಅವರಿಂದ ಪಡೆಯಲು ಸೂಚಿಸಲಾಗಿರುತ್ತದೆ. ಆದರೆ ಪರಿಶೀಲಿಸಿದ ಎಲ್ಲಾ ಕಾಮಗಾರಿಗಳ ಅಂದಾಜುಗಳ ತಾಂತ್ರಿಕ ಮಂಜೂರಾತಿಯನ್ನು ಯೋಜನಾ ನಿರ್ದೇಶಕರು ತಮ್ಮ ವ್ಯಾಪ್ತಿ ಮೀರಿ ನೀಡಿರುವುದು ಕಂಡು ಬಂದಿದೆ.
ಪಫ್ ಪ್ಯಾನೆಲ್ ಶೀಟ್ ಅಳವಡಿಸಲು ತೆಗೆದುಕೊಂಡಿರುವ (ರೂ.2,90,000.00) ದರಗಳು ನಾನ್ ಎಸ್‍ಆರ್ ದರವಾಗಿದ್ದು, ಡಾಟಾ ದರಗಳನ್ನು ಕೆಎಆರ್‍ಎನ್‍ಐಕೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವುದಿಲ್ಲ.
ಅಲ್ಯೂಮಿನಿಯಂ ಬಾಗಿಲು ಮತ್ತು ಕಿಟಕಿಗಳಿಗೆ ಎಸ್.ಆರ್.ದರಗಳು ಲಭ್ಯವಿದ್ದು, ನಿಯಮ ಉಲ್ಲಂಘಿಸಿ ಅವುಗಳನ್ನು ಒಂದೇ ಐಟಂ ಆಗಿ ಪ್ಯಾನೆಲ್ ಶೀಟ್‍ನೊಂದಿಗೆ ಅನಾವಶ್ಯಕವಾಗಿ ಸೇರಿಸಿ lumpsum ದರಗಳನ್ನು ತೆಗೆದುಕೊಳ್ಳಲಾಗಿರುತ್ತದೆ. ಆರ್‍ಡಬ್ಲ್ಯೂಎಸ್ ಇಲಾಖೆಯ ಎಸ್‍ಆರ್ ಅನ್ವಯ ಈ ಎಲ್ಲಾ ಐಟಂಗಳು ಸೇರಿದ ಬೆಲೆ ರೂ.2,01,865.00 ಮಾತ್ರ ಆಗುತ್ತದೆ. ಅಂದರೆ ರೂ.88,135.00 ಗಳನ್ನು ಹೆಚ್ಚುವರಿಯಾಗಿ ಅಂದಾಜು ಪಟ್ಟಿಯಲ್ಲಿ ಸೇರಿಸಲಾಗಿದೆ ಮತ್ತು ಆರ್.ಓ. ಘಟಕದ ಎಸ್‍ಆರ್ ದರ ರೂ.5,43,000.00ಗಳಿದ್ದು, ಈ ದರದಲ್ಲಿಯೇ 5000 ಲೀ ಸಾಮಥ್ರ್ಯದ ಟ್ಯಾಂಕ್ ಅಳವಡಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಆದರೆ ಅಂದಾಜು ಪಟ್ಟಿಯಲ್ಲಿ ಹೆಚ್ಚುವರಿಯಾಗಿ ಕಚ್ಚಾ ನೀರಿನ 2000 ಲೀ ಸಾಮಥ್ರ್ಯದ ಟ್ಯಾಂಕ್ ಅಳವಡಿಸಲು ರೂ.13,656.00ಗಳನ್ನು ಸೇರಿಸಿ ಅಂದಾಜು ಪಟ್ಟಿಯನ್ನು ಹಿಗ್ಗಿಸಲಾಗಿರುತ್ತದೆ. ಅಂದರೆ ಪ್ರತಿ ಅಂದಾಜು ಪಟ್ಟಿಯಲ್ಲಿ ಒಟ್ಟು ರೂ.1,01,791.00ಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿರುತ್ತದೆ. ಅಂದರೆ ಒಟ್ಟು 17 ಆರ್.ಓ. ಘಟಕಗಳಿಂದ ಸರ್ಕಾರಕ್ಕೆ ಪ್ರತಿ ಘಟಕಕ್ಕೆ ರೂ.1,01,791.0 ಗಳಂತೆ ಒಟ್ಟು ರೂ. 17,30,447.00ಗಳ ಆರ್ಥಿಕ ನಷ್ಟವಾಗಿರುತ್ತದೆ.
17 ಆರ್.ಓ.ಯಂತ್ರಗಳ ಸರಬರಾಜಿಗೆ Delite Infrastructure & Projects  ರವರಿಗೆ ಹಣಪಾವತಿಸಲಾಗಿದ್ದು, ಅವರು ಕೇವಲ 3 ಕಡೆ ಮಾತ್ರ ಭಾಗಶಃ ಸಾಮಗ್ರಿ ಸರಬರಾಜು ಮಾಡಿರುತ್ತಾರೆ. ಈ ಸಂಸ್ಥೆಯವರು ಆರ್.ಓ. ಘಟಕಗಳ ತಯಾರಕರು, ಅಧಿಕೃತ ಡೀಲರ್ ಆಗಿರುವುದಿಲ್ಲ. ಜಿಲ್ಲಾ ಖನಿಜಾ ಪ್ರತಿಷ್ಠಾನ ಟ್ರಸ್ಟ್‍ನ 2021ರ ಡಿಸೆಂಬರ್ 23ರ ನಡಾವಳಿಯಂತೆ ಎನ್.ಮಹದೇವಪುರ ಗ್ರಾಮವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿ ಮಂಜೂರು ಆಗಿರುವುದನ್ನು ಅನುಷ್ಠಾನಗೊಳಿಸಬೇಕಾಗಿದ್ದು, ಈ ಗ್ರಾಮದಲ್ಲಿ ಆರ್.ಓ.ಘಟಕ ನಿರ್ಮಾಣದ ಕಾಮಗಾರಿ ನಡೆದಿರುವುದಿಲ್ಲ. ಆರ್.ಓ.ಘಟಕ ನಿರ್ಮಾಣ ಆಗದೇ ಇದ್ದರೂ ಘಟಕ ನಿರ್ಮಾಣ ಲೆಕ್ಕದಲ್ಲಿ ರೂ.8.86 ಲಕ್ಷಗಳನ್ನು ಪಾವತಿಸಲಾಗಿರುತ್ತದೆ. ಆರ್.ಓ.ಘಟಕಗಳನ್ನು ಪಟ್ಟಣ ಪಂಚಾಯಿತಿಯಿಂದ ಹಸ್ತಾಂತರಗೊಂಡ ಅಧಿಕೃತ ಪಟ್ಟಣ ಪಂಚಾಯಿತಿ, ಸರ್ಕಾರದ ಮಾಲೀಕತ್ವದ ಜಾಗದಲ್ಲಿ ನಿರ್ಮಿಸಲಾಗಿರುವುದಿಲ್ಲ. ಸಣ್ಣ-ಸಣ್ಣ ರಸ್ತೆಗಳಲ್ಲಿ ಮತ್ತು ಸೂಕ್ತವಲ್ಲದೇ ಇರುವ ಸ್ಥಳಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ.
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವಾರ್ಡ್ ನಂ-15 ಬೋಸೆದೇವರಹಟ್ಟಿಯಲ್ಲಿ ಶುದ್ಧ ಕುಡಿಯುವ ಘಟಕದ ನಿರ್ಮಾಣವನ್ನು ಖಾಸಗಿಯವರ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವಾರ್ಡ್ ನಂ-5 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವನ್ನು (ಪ್ರಿಯ ದರ್ಶಿನಿ ಶಾಲೆ ಪಕ್ಕ) ರಸ್ತೆ ಒತ್ತುವರಿ ಮಾಡಿ ನಿರ್ಮಿಸಲಾಗುತ್ತಿದೆ.
ಜಿಲ್ಲಾ ಖನಿಜಾ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಪ್ರಥಮ ಕಂತಿನ ಅನುದಾನವಾಗಿ 17 ಆರ್.ಓ.ಘಟಕಗಳಿಗೆ ಪ್ರತಿ ಘಟಕಕ್ಕೆ ರೂ.6 ಲಕ್ಷದಂತೆ ಒಟ್ಟು ರೂ.102 ಲಕ್ಷಗಳನ್ನು 2021ರ ಡಿಸೆಂಬರ್ 23ರಂದು ನಿರ್ಮಿತಿ ಕೇಂದ್ರಕ್ಕೆ ಬಿಡುಗಡೆ ಮಾಡಲಾಗಿರುತ್ತದೆ. ನಿರ್ಮಿತಿ ಕೇಂದ್ರದವರು 9 ಘಟಕಗಳಿಗೆ ಉಪಯೋಗಿತ ಪ್ರಮಾಣ ಪತ್ರವನ್ನು ಹಾಗೂ ಕಾಮಗಾರಿಯ ಛಾಯಾಚಿತ್ರಗಳನ್ನು ನೀಡಿ 2ನೇ ಕಂತಿನಲ್ಲಿ ಪ್ರತಿ ಘಟಕಕ್ಕೆ ರೂ.4.80 ಲಕ್ಷಗಳಂತೆ ಒಟ್ಟು ರೂ.43.20 ಲಕ್ಷಗಳಂತೆ ಒಟ್ಟು ರೂ.145.20 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.
ಅಂದಾಜು ಪಟ್ಟಿಯಲ್ಲಿ ಹೆಚ್ಚುವರಿಯಾಗಿ ಸೇರಿಸಿಕೊಂಡು ಸಂಬಂಧಿಸಿದ ಇಲಾಖೆಯಿಂದ ನಿರ್ಮಿತಿ ಕೇಂದ್ರಕ್ಕೆ ಬಿಡುಗಡೆ ಮಾಡಿಸಿಕೊಂಡ ರೂ.17,30,447.00ಗಳು ಆರ್ಥಿಕ ನಷ್ಟವಾಗಿರುತ್ತದೆ.  ನಿರ್ಮಿತಿ ಕೇಂದ್ರದಿಂದ ಈಗಾಗಲೇ ವೆಚ್ಚ ಮಾಡಲಾದ ರೂ.146.94 ಲಕ್ಷಗಳ ಪೈಕಿ ಸ್ಥಳದಲ್ಲಿ ಅನುಷ್ಠಾನಗೊಂಡಿರುವ ಕಾಮಗಾರಿಗಳಿಗೆ ವಾಸ್ತವವಾಗಿ ತಗುಲಿದ ವೆಚ್ಚ ರೂ.53.12 ಲಕ್ಷಗಳನ್ನು ಹೊರತುಪಡಿಸಿದರೆ ಸರ್ಕಾರಕ್ಕೆ ರೂ.93,82,000.00 ಹಣ ದುರುಪಯೋಗವಾಗಿರುತ್ತದೆ. ಒಟ್ಟು ದುರುಪಯೋಗವಾದ ಹಣದ ಮೊತ್ತ ರೂ.1,11,12,947.00 ಆಗಿರುತ್ತದೆ.
ರೂ.93.82 ಲಕ್ಷಗಳ ಕಾಮಗಾರಿಗಳು ನಡೆಯದಿದ್ದರೂ ಅಳತೆ ಪುಸ್ತಕದಲ್ಲಿ ಸುಳ್ಳು ದಾಖಲೆ ಮಾಡಿ ಹಣ ಪಾವತಿ ಮಾಡಿ ನಿರ್ಮಿತಿ ಕೇಂದ್ರದ ಕೆ.ಜಿ.ಮೂಡಲಗಿರಿಯಪ್ಪ, ಯೋಜನಾ ನಿರ್ದೇಶಕರು ಹಾಗೂ ಸತೀಶ್ ಕಲ್ಲಟ್ಟಿ, ಯೋಜನಾ ಅಭಿಯಂತರರು ಮೊಳಕಾಲ್ಮುರು ಪಟ್ಟಣ ವ್ಯಾಪ್ತಿ ಮತ್ತು ಉಚ್ಚಂಗಿ ದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ತಿಪ್ಪೇಸ್ವಾಮಿ, ಯೋಜನಾ ಅಭಿಯಂತರರು, ನಾಯಕನಹಟ್ಟಿ ಪಟ್ಟಣ ವ್ಯಾಪ್ತಿ ಅವರು ಖನಿಜ ಪ್ರತಿಷ್ಠಾನ ಟ್ರಸ್ಟ್‍ನ ರೂ.93.82 ಲಕ್ಷಗಳ ಮೊತ್ತವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ.
ಈಗಾಗಲೇ ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 7 ಆರ್.ಓ. ಘಟಕಗಳು ಇರುತ್ತವೆ. ಈಗ ಪ್ರಸ್ತಾಪಿಸಿರುವ ಆರ್.ಓ. ಘಟಕಗಳಿಗೆ ಅವಶ್ಯವಿರುವ 24*7 ಸ್ವಂತ ನೀರಿನ ಲಭ್ಯತೆ ಇಲ್ಲದೇ ಇದ್ದು, ಅನಿಯಮಿತವಾದ ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ನೀರಿನ ಮೇಲೆ ಅವಲಂಬಿತವಾಗುವ ಉದ್ದೇಶ ಹೊಂದಿರುವುದರಿಂದ ಅನುಷ್ಠಾನಗೊಳಿಸಬೇಕಾದ 17 ಆರ್.ಓ.ಘಟಕಗಳಿಗೆ ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟ್ ವತಿಯಿಂದ ನಿರ್ಮಿತಿ ಕೇಂದ್ರ ಚಿತ್ರದುರ್ಗ ಅವರಿಗೆ ಬಿಡುಗಡೆಯಾದ ರೂ.145.20 ಲಕ್ಷಗಳು ಆದರೆ ನಿರ್ಮಿತಿ ಕೇಂದ್ರದಿಂದ ಈಗಾಗಲೇ ವೆಚ್ಚವಾಗಿರುವ ರೂ.146.94 (ರೂ.1.74 ಲಕ್ಷಗಳು ಹೆಚ್ಚುವರಿ) ನಿಷ್ಪಲ ವೆಚ್ಚವಾಗಿರುವುದು ಕಂಡುಬಂದಿರುತ್ತದೆ.
ಈ ಎಲ್ಲಾ ವರದಿಗಳನ್ನು ಆಧರಿಸಿ, ಮೂಡಲಗಿರಿಯಪ್ಪ ಹಾಗೂ ಸತೀಶ್ ಕಲ್ಲಟ್ಟಿ ಅವರ ವಿರುದ್ಧ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಫ್‍ಐಆರ್ ದಾಖಲಿಸಲಾಗಿದೆ. ಅಲ್ಲದೆ ಆರೋಪಿತರನ್ನು ಸೇವೆಯಿಂದ ವಿಮುಕ್ತಿಗೊಳಿಸಲಾಗಿದೆ.

========

[t4b-ticker]

You May Also Like

More From Author

+ There are no comments

Add yours