ಸರ್ಕಾರ ನೌಕರರಿಗೆ 17 ರಷ್ಟು ಮಧ್ಯಂತರ ಪರಿಹಾರ

 

ಬೆಂಗಳೂರು, ಮಾ. ೧-ಸರ್ಕಾರಿ ನೌಕರರಿಗೆ ಮೂಲ ವೇತನದ ಶೇ. ೧೭ ರಷ್ಟು ಮಧ್ಯಂತರ ಪರಿಹಾರವಾಗಿ ನೀಡಲು ಸರ್ಕಾರ ಸಮ್ಮತಿಸಿದ ಹಿನ್ನೆಲೆಯಲ್ಲಿ ನೌಕರರು ಅನಿರ್ದಿಷ್ಟಾವಧಿ ಅವಧಿಯ ಮುಷ್ಕರವನ್ನು ಹಿಂಪಡೆದಿದ್ದಾರೆ.ಸರ್ಕಾರಿ ನೌಕರರು ಹಾಗೂ ಸರ್ಕಾರದ ನಡುವೆ ಹಗ್ಗ-ಜಗ್ಗಾಟದ ನಡುವೆ ಸರ್ಕಾರ ನೌಕರರ ಬೇಡಿಕೆಗೆ ಅಸ್ತು ಎಂದು ಏಪ್ರಿಲ್ ೨೦೨೩ರಿಂದಲೇ ಅನ್ವಯವಾಗುವಂತೆ ನೌಕರರಿಗೆ ಶೇ. ೧೭ ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿಗೆ ನೀಡಿ ಎನ್‌ಪಿಎಸ್ ರದ್ದತಿಯ ಬೇಡಿಕೆ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ರಚನೆ ಮಾಡುವ ತೀರ್ಮಾನ ಕೈಗೊಂಡಿದೆ.
ಸರ್ಕಾರಿ ನೌಕರರ ಶೇ. ೧೭ರಷ್ಟು ವೇತನ ಹೆಚ್ಚಳ ಸಂಬಂಧs ಅಧಿಕೃತ ಆದೇಶವೂ ಹೊರ ಬಿದ್ದಿದೆ.
ಸರ್ಕಾರ ಶೇ. ೧೭ ರಷ್ಟು ಮಧ್ಯಂತರ ಪರಿಹಾರ ಘೋಷಣೆ ಮಾಡಿದ ಬೆನ್ನಲ್ಲೆ ಸರ್ಕಾರಿ ನೌಕರರು ಸಂಘದ ಅಧ್ಯಕ್ಷ ಷಡಾಕ್ಷರಿ ನೇತೃತ್ವದಲ್ಲಿ ಸಭೆ ನಡೆಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆಯುವ ತೀರ್ಮಾನ ಕೈಗೊಂಡರು.ಸರ್ಕಾರಿ ನೌಕರರ ಬೇಡಿಕೆ ಸಂಬಂಧ ನಿನ್ನೆಯಿಂದಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ನಿನ್ನೆ ರಾತ್ರಿ ನಡೆದ ಮಾತುಕತೆಗಳು ಫಲಪ್ರದವಾಗಲಿಲ್ಲ. ಇಂದು ಬೆಳಿಗ್ಗೆ ಸಹ ಮಾತುಕತೆಗಳನ್ನು ಮುಂದುವರೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಿಮವಾಗಿ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೌಕರರಿಗೆ ಮಧ್ಯಂತರ ಪರಿಹಾರವಾಗಿ ಏಪ್ರಿಲ್‌ನಿಂದಲೇ ಅನ್ವಯವಾಗುವಂತೆ ಶೇ. ೧೭ ರಷ್ಟು ವೇತನ ಹೆಚ್ಚಳ ತೀರ್ಮಾನ ಕೈಗೊಂಡರು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರೇ ಸುದ್ದಿಗಾರರೊಂದಿಗೆ ಮಾತನಾಡುತ್ತ ರಾಜ್ಯ ಸರ್ಕಾರಿ ನೌಕರರಿಗೆ ಮೂಲ ವೇತನದ ಶೇ. ೧೭ ರಷ್ಟು ಮಧ್ಯಂತರ ಪರಿಹಾರ ಮಂಜೂರು ಮಾಡುವ ತೀರ್ಮಾನವನ್ನು ಪ್ರಕಟಿಸಿದರು.ಬೆಂಗಳೂರಿನ ಮುಖ್ಯಮಂತ್ರಿಗಳ ರೇಸ್‌ಕೋರ್ಸ್ ರಸ್ತೆಯ ನಿವಾಸದಲ್ಲಿ ಆರ್ಥಿಕ ಇಲಾಖೆಯ ಅಧಿಕಾರಿಗಳ ಸಭೆಯ ನಂತರ ಸರ್ಕಾರಿ ನೌಕರರಿಗೆ ಶೇ. ೧೭ ರಷ್ಟು ವೇತನ ಏರಿಕೆ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ಸರ್ಕಾರ ನೌಕರರ ಬೇಡಿಕೆಗೆ ಸ್ಪಂದಿಸಿ ಶೇ. ೧೭ ರಷ್ಟು ವೇತನ ಹೆಚ್ಚಳಕ್ಕೆ ತೀರ್ಮಾನ ಕೈಗೊಂಡಿದೆ. ಇಂದೇ ಆದೇಶವನ್ನು ಹೊರಡಿಸುತ್ತೇವೆ. ನೌಕರರು ಮುಷ್ಕರವನ್ನು ಕೈ ಬಿಡಬೇಕು ಎಂದು ಅವರು ಮನವಿ ಮಾಡಿದರು.
ಎನ್‌ಪಿಎಸ್ ಕುರಿತು ಇತರೆ ರಾಜ್ಯಗಳಲ್ಲಿ ಯಾವ ರೀತಿ ಇದೆ, ಅದರ ಆರ್ಥಿಕ ಪರಿಣಾಮ ಇವುಗಳ ಅಧ್ಯಯನ ಕೈಗೊಂಡು ೨ ತಿಂಗಳಲ್ಲಿ ವರದಿ ನೀಡಲು ಆರ್ಥಿಕ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದರು.
ಮುಷ್ಕರ ವಾಪಸ್, ಷಡಾಕ್ಷರಿ
ಸಕಾರದ ತೀರ್ಮಾನದ ಬೆನ್ನಲ್ಲೇ ನೌಕರರ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ ಎಂದು ಸರ್ಕಾರಿ ನೌಕರರ ಸಂಘಧ ಅಧ್ಯಕ್ಷ ಷಡಾಕ್ಷರಿ ಪ್ರಕಟಿಸಿದರು. ನೌಕರರು ಶೇ. ೪೦ ರಷ್ಟು ಮಧ್ಯಂತರ ಪರಿಹಾರದ ಬೇಡಿಕೆ ಇಟ್ಟಿದ್ದರು. ಸರ್ಕಾರ ಶೇ. ೧೭ ರಷ್ಟು ಮಧ್ಯಂತರ ಪರಿಹಾರ ಘೋಷಿಸಿದೆ. ೭ನೇ ವೇತನ ಆಯೋಗದ ವರದಿ ಪಡೆದ ನಂತರ ಪೂರ್ಣಪ್ರಮಾಣದಲ್ಲಿ ವೇತನ ಏರಿಕೆ ಮಾಡುವ ಭರವಸೆ ಸಿಕ್ಕಿದೆ. ಹಾಗಾಗಿ. ಮುಷ್ಕರವನ್ನು ವಾಪಸ್ ಪಡೆದಿದ್ದೇವೆ. ಎಲ್ಲ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

[t4b-ticker]

You May Also Like

More From Author

+ There are no comments

Add yours