ಹಳ್ಳಿಕಡೆ ಮಕ್ಕಳ ತಜ್ಞರ ನಡೆ” ವಿನೂತನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಚಾಲನೆ.

 

ಕೋವಿಡ್ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆಗೆ ಜಾಗರೂಕತೆ ವಹಿಸಿ
ಚಿತ್ರದುರ್ಗ,ಜೂನ್23:
ಜಿಲ್ಲೆಯಲ್ಲಿ ಕೊರೋನಾ ಸಂಭಾವ್ಯ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆ ವಿಚಾರದಲ್ಲಿ ಬಹಳ ಎಚ್ಚರಿಕೆ ಹಾಗೂ ಜಾಗರೂಕತೆವಹಿಸುವ ಅವಶ್ಯಕತೆ ಇದೆ ಎಂದು ಸಮಾಜ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹೇಳಿದರು.
ನಗರದ ಬುದ್ಧನಗರದ ನಗರ ಆರೋಗ್ಯ ಕೇಂದ್ರದಲ್ಲಿ ಬುಧವಾರ ಜಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ  ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ಹಳ್ಳಿಯ ಕಡೆ ಮಕ್ಕಳ ತಜ್ಞರ ನಡೆ” ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ತಜ್ಞರ ಅಭಿಪ್ರಾಯದಂತೆ ಈಗಾಗಲೇ ಅನೇಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹಿರಿಯ ತಜ್ಞರಾದ ಡಾ.ದೇವಿಶೆಟ್ಟಿ ಅವರು ಈ ಕುರಿತು ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದು ತಿಳಿಸಿದರು.
ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮಕ್ಕಳಲ್ಲಿರುವ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಪೌಷ್ಠಿಕ ಆಹಾರವನ್ನು ವಿತರಣೆ ಮಾಡಲಾಗುತ್ತಿದೆ. ಜೊತೆಗೆ ಮಕ್ಕಳ ರಕ್ಷಣೆ ಹಾಗೂ ಆರೋಗ್ಯ ತಪಾಸಣೆಗಾಗಿ ಜಿಲ್ಲೆಯ ಮಕ್ಕಳ ತಜ್ಞರು ಹಳ್ಳಿ ಕಡೆ ಎಂಬ ವಿನೂತನ ಕಾರ್ಯಕ್ರಮದ ಹಮ್ಮಿಕೊಳ್ಳುವುದರ ಮೂಲಕ ಹಳ್ಳಿಗಳಿಗೆ ತೆರಳಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದರು.
ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ವೈದ್ಯರು, ಶುಶ್ರೂಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಪ್ರಂಟ್‍ಲೈನ್ ವಾರಿಯರ್ಸ್‍ಗಳು ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್ ಮೂರನೇ ಸಂಭಾವ್ಯ ಅಲೆಯನ್ನು ಹಳ್ಳಿಯ ಕಡೆ ಮಕ್ಕಳ ತಜ್ಞರ ನಡೆ ವಿನೂತನ ಕಾರ್ಯಕ್ರಮದಿಂದ ತಡೆಯಲು ಸಾಧ್ಯವಿದೆ. ಹಾಗಾಗಿ ಕೋವಿಡ್ ಸಾಂಕ್ರಾಮಿಕ ರೋಗ ತಡೆಗೆ ಪ್ರತಿಯೊಬ್ಬರು ಅಗತ್ಯ ಸಹಕಾರವನ್ನು ನೀಡಬೇಕು. ಕೋವಿಡ್ ತಡೆಗೆ ಎಲ್ಲರೂ ಕೋವಿಡ್ ಲಸಿಕೆಯನ್ನು ಪಡೆಯಬೇಕು ಎಂದು ಮನವಿ ಮಾಡಿದರು.
ಗ್ರಾಮಗಳಲ್ಲಿ ಕೋವಿಡ್-19  ಕುರಿತು ಅರಿವು ಮೂಡಿಸಲೆಂದು ಹಾಗೂ ಮೂರನೇ ಅಲೆ ಎದುರಾಗದಂತೆ ಮುಂಜಾಗ್ರತಾ ಕ್ರಮವಾಗಿ “ಹಳ್ಳಿಯ ಕಡೆ ಮಕ್ಕಳ ತಜ್ಞರ ನಡೆ” ವಿನೂತನ ಕಾರ್ಯಕ್ರಮ ಆರಂಭಿಸಲಾಗಿದ್ದು, ಕೋವಿಡ್-19ರ ಮೂರನೇ ಅಲೆಯು ಹೆಚ್ಚಾಗಿ ಮ್ಕಕಳಿಗೆ ಭಾದಿಸುತ್ತದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ತಜ್ಞರ ಸಮಿತಿಯ ವರದಿಯಲ್ಲಿ ತಿಳಿಸಿದ್ದಾರೆ. ಆದ್ದರಿಂದ ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ಗುರುತಿಸುವುದು ಮತ್ತು ಮಕ್ಕಳು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಒದಗಿಸಲು ವಿಶೇಷವಾಗಿ ವೈದ್ಯಕೀಯ ತಂಡಗಳನ್ನು ರಚಿಸಲಾಗಿದೆ.
ಜಿಲ್ಲೆಯಲ್ಲಿ 06 ತಿಂಗಳಿಂದ 06 ವರ್ಷದ 126198 ಮಕ್ಕಳಿದ್ದಾರೆ. 06 ವರ್ಷದಿಂದ 16 ವರ್ಷದ 253964 ಮಕ್ಕಳಿದ್ದಾರೆ. ಒಟ್ಟು 06 ತಿಂಗಳಿಂದ 16 ವರ್ಷದ 380162 ಮಕ್ಕಳಿದ್ದಾರೆ. ಜಿಲ್ಲೆಯ ಎಲ್ಲ ತಾಲ್ಲೂಕು ಆರೋಗ್ಯಾಧಿಕಾರಿಗಳು ಪ್ರತಿ ತಾಲ್ಲೂಕಿನಲ್ಲಿ ಒಬ್ಬರು ಮಕ್ಕಳು ತಜ್ಞರು, ಒಬ್ಬರು ಶುಶ್ರೂಷಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ತಾಲ್ಲೂಕಿನಲ್ಲಿ ಎರಡು ತಂಡಗಳನ್ನು ರಚಿಸಲಾಗಿದೆ. ಇವರು ಹಳ್ಳಿಗಳಲ್ಲಿನ ಆಶಾ ಕಾರ್ಯಕರ್ತೆಯರು ಮತ್ತು ಮಹಿಳಾ ಆರೋಗ್ಯ ತಪಾಸಣಾಧಿಕಾರಿಯವರ ಸಹಕಾರದೊಂದಿಗೆ ಪ್ರತಿ  ದಿನ ಐದು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಿದ್ದಾರೆ.
45 ಮಕ್ಕಳು ತಜ್ಞರು: ಜಿಲ್ಲೆಯಲ್ಲಿ 13 ಸರ್ಕಾರಿ ಮಕ್ಕಳ ವೈದ್ಯ ತಜ್ಞರು, 7 ವೈದ್ಯಕೀಯ ಆಸ್ಪತ್ರೆ ಮಕ್ಕಳ ತಜ್ಞರು ಹಾಗೂ 25 ಖಾಸಗಿ ಆಸ್ಪತ್ರೆಯ ಮಕ್ಕಳ ತಜ್ಞರು ಸೇರಿದಂತೆ ಒಟ್ಟು 45 ಮಂದಿ ಮಕ್ಕಳು ತಜ್ಞರು ಇದ್ದಾರೆ.
600 ಹಾಸಿಗೆಗಳು ಹಂಚಿಕೆ: ಕೋವಿಡ್-19 ಮೂರನೇ ಅಲೆ ತಡೆಗಾಗಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಮಕ್ಕಳಿಗಾಗಿ ಜಿಲ್ಲೆಯಾದ್ಯಂತ 600 ಹಾಸಿಗೆಗಳನ್ನು ಹಂಚಿಕೆ ಮಾಡಲಾಗಿದೆ. 6 ವರ್ಷದ ಮಕ್ಕಳಿಗಾಗಿ ಜಿಲ್ಲೆಯ ಆರು ತಾಲ್ಲೂಕುಗಳಿಂದ ತಾಲ್ಲೂಕಿಗೆ 30 ರಂತೆ 180 ಬೆಡ್, 6 ವರ್ಷದ ಅಂಗವಿಕಲ ಮಕ್ಕಳಿಗೆ ತಾಲ್ಲೂಕಿಗೆ 10 ಬೆಡ್‍ಗಳಂತೆ ಒಟ್ಟು 60 ಬೆಡ್, 7 ರಿಂದ 18 ವರ್ಷದ ಮಕ್ಕಳಿಗೆ ಬಾಲಕರಿಗೆ 150, ಬಾಲಕಿಯರಿಗೆ 150 ಬೆಡ್ ಹಾಗೂ ಅಂಗವಿಕಲ ಮಕ್ಕಳಿಗಾಗಿ ಬಾಲಕರಿಗೆ 30 ಬಾಲಕಿಯರಿಗೆ 30 ಬೆಡ್ ಸೇರಿದಂತೆ ಒಟ್ಟು 600 ಬೆಡ್‍ಗಳನ್ನು ಹಂಚಿಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಖನಿಜ ನಿಗದ ಅಧ್ಯಕ್ಷ ಲಿಂಗಮೂರ್ತಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಸದಸ್ಯೆ ಶ್ರೀದೇವಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ, ಆರ್‍ಸಿಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours