ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ 50 ಹಾಸಿಗೆಯ ಕೋವಿಡ್ ಹಾರೈಕೆ ಕೇಂದ್ರಕ್ಕೆ ಸಿದ್ದತೆ: ಸಚಿವೆ ಶಶಿಕಲಾ ಜೊಲ್ಲೆ.

 

ಚಿತ್ರದುರ್ಗ ಜೂ. ೨೨

ಕೋವಿಡ್-೧೯ರ ಸಂಭಾವ್ಯ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆ ಮತ್ತು ಆರೈಕೆಗೆ ಸಂಬಂಧಿಸಿದಂತೆ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯದ ಪ್ರತೀ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಮಕ್ಕಳಿಗಾಗಿಯೇ ೫೦ ಹಾಸಿಗೆಗಳುಳ್ಳ ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಶಶಿಕಲಾ ಜೊಲ್ಲೆ ಅವರು ತಿಳಿಸಿದ್ದಾರೆ.

ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಕೋವಿಡ್-೧೯ ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಕೋವಿಡ್-೧೯ನಿಂದ ಮಹಿಳೆಯರು, ಮಕ್ಕಳು, ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಹೀಗೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟವನ್ನು ಎದುರಿಸಿದ್ದಾರೆ. ಆ ದಿಸೆಯಲ್ಲಿ ಮೂರನೇ ಅಲೆಯು ಮಕ್ಕಳಿಗೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ತಜ್ಞರ ವರದಿ ಹೇಳುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ನುಡಿದರು.

ಜಿಲ್ಲಾ ಕೋವಿಡ್ ಹಾಗೂ ತಾಲೂಕು ಕೋವಿಡ್ ಆಸ್ಪತ್ರೆಗೆ ದಾಖಲಾದ ಮಕ್ಕಳಿಗೆ ಅಗತ್ಯ ಔಷಧೋಪಚಾರ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳು ಯಾರು ಇಲ್ಲ ಆದರೆ ಓರ್ವ ಪೋಷಕರನ್ನು ಕಳೆದುಕೊಂಡವರು ೩೦ ಮಕ್ಕಳಿದ್ದಾರೆ ಇವರಿಗೆ ಸರ್ಕಾರದಿಂದ ಮುಖ್ಯಮಂತ್ರಿಯವರ ಬಾಲ ಸೇವಾ ಯೋಜನೆಯಡಿ ಪ್ರತೀ ತಿಂಗಳಿಗೆ ರೂ೩೫೦೦ ಆರ್ಥಿಕ ನೆರವು, ಉಚಿತ ಶಿಕ್ಷಣ, ೧೦ನೇ ತರಗತಿ ಪೂರೈಸಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಉಚಿತ ಲ್ಯಾಪ್‌ಟಾಪ್, ೧೨ ವರ್ಷ ಪೂರೈಸಿದ ಹೆಣ್ಣುಮಕ್ಕಳಿಗೆ ೧ಲಕ್ಷ ರೂ ಒದಗಿಸಲಾಗುತ್ತಿದೆ ಎಂದು ಸಚಿವರು ಇದಲ್ಲದೆ ಬೇರೆ ಕಾರಣದಿಂದ ಇಬ್ಬರು ಪಾಲರನ್ನು ಕಳೆದು ಕೊಂಡ ೧೬ ಮಕ್ಕಳಿದ್ದಾರೆ ಎಂದು ಹೇಳಿದರು.

ಬಡತನದಲ್ಲಿರುವ ಮಕ್ಕಳಿಗೆ ಯಾವುದೇ ರೀತಿಯ ಶೈಕ್ಷಣಿಕ ತೊಂದರೆಯಾಗದಂತೆ ಕ್ರಮವಹಿಸಲಾಗುತ್ತದೆ. ಆ ದಿಸೆಯಲ್ಲಿ ದಾನಿಗಳು ಮುಂದೆ ಬಂದಲ್ಲಿ ದತ್ತು ಪಡೆಯುವುದು ಹೀಗೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ೨೧೧ ತೀವ್ರ ಅಪೌಷ್ಠಿಕ ಮಕ್ಕಳಿದ್ದು, ಇವರಿಗೆ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದೆ. ಹಾಗೆಯೇ ಜಿಲ್ಲೆಯಲ್ಲಿ ೨೦೬ ವಲಸಿಗ ಮಕ್ಕಳಿದ್ದು, ಈ ಮಕ್ಕಳ ಕುಟುಂಬಕ್ಕೆ ಆಹಾರ ಕಿಟ್ ವಿತರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್-೧೯ ಎರಡನೇ ಅಲೆಯಿಂದ ೧೮ ವರ್ಷದೊಳಗಿನ ೩೮೦೩ ಮಕ್ಕಳಿಗೆ ಪಾಸಿಟಿವ್ ದೃಢಪಟ್ಟಿತ್ತು. ಈ ಎಲ್ಲಾ ಮಕ್ಕಳು ಗುಣಮುಖರಾಗಿದ್ದಾರೆ ಜಿಲ್ಲೆಯಲ್ಲಿ ೨೩೩೩ ಅಂಗನವಾಡಿ ಕೇಂದ್ರಗಳಿದ್ದು, ಕೋವಿಡ್-೧೯ ಸಂಬಂಧಿಸಿದಂತೆ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಿಲ್ಲೆಯಲ್ಲಿನ ತೀವ್ರ ಅಪೌಷ್ಠಿಕತೆಯ ಮಕ್ಕಳಿಗೆ ಔಷಧ ಮತ್ತು ವಿಟಮಿನ್ ಯುಕ್ತ ಮಾತ್ರೆಗಳನ್ನು ವಿತರಿಸಲಾಗಿದೆ. ಬಾಲ್ಯ ವಿವಾಹ ತಡೆಯುವಲ್ಲಿ ಅಗತ್ಯ ಕ್ರಮವಹಿಸಲಾಗಿದೆ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಕಳೆದ ಒಂದು ವರ್ಷದ ಅವಧಿಯಲ್ಲಿ ೧೮೬ ಮಕ್ಕಳು, ವಿಶೇಷ ಪಾಲನಾ ಯೋಜನೆಯಡಿ, ೫೪ ಮಕ್ಕಳು ಪ್ರಾಯೋಜಕತ್ವ ಯೋಜನೆಯಡಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಶಾಸಕರಾದ ತಿಪ್ಪಾರೆಡ್ಡಿ, ರಘುಮೂರ್ತಿ, ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಎಸ್ ಮನ್ನಿಕೇರಿ, ಜಿಲ್ಲಾರಕ್ಷಣಾಧಿಕಾರಿ ಜಿ.ರಾಧಿಕಾ. ಜಿ.ಪಂ.ಸಿಇಓ ಶ್ರೀಮತಿ ನಂದಿನಿದೇವಿ ತಹಶಿಲ್ದಾರ್ ವೆಂಕಟೇಶಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ರಾಜಾನಾಯ್ಕ್, ವಿಕಲಚೇತನ ಕಲ್ಯಾಣಾಧಿಕಾರಿ ಶ್ರೀಮತಿ ವೈಶಾಲಿ, ಡಿ.ಎಚ್.ಓ. ಡಾ.ಪಾಲಾಕ್ಷ, ಜಿಲ್ಲಾ ಸರ್ಜನ್ ಡಾ.ಬಸವರಾಜ್, ಆರ್.ಸಿ.ಎಚ್. ಅಧಿಕಾರಿ ಕುಮಾರಸ್ವಾಮಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಗಿರೀಶ್ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours