ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ಭೂಮಿ ಪೂಜೆ ನೇರವೇರಿಸಿದ ಕಂದಾಯ ಸಚಿವ ಆರ್.ಅಶೋಕ.

 

ರೂ.10 ಕೋಟಿ ವೆಚ್ಚ, ಶಿವನೇಕಟ್ಟೆ ಸರ್ವೇನಂಬರ್‍ನಲ್ಲಿ 8 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ, ಭೂಮಿಪೂಜೆ ನೆರವೇರಿಸಿದ ಕಂದಾಯ ಸಚಿವ ಆರ್.ಅಶೋಕ
ಹೊಸದುರ್ಗ: ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ
ಚಿತ್ರದುರ್ಗ,ಸೆಪ್ಟೆಂಬರ್02:
ಹೊಸದುರ್ಗ ತಾಲ್ಲೂಕು ಮಿನಿ ವಿಧಾನಸೌಧ ನಿರ್ಮಾಣಕ್ಕೆ ರಾಜ್ಯ ಕಂದಾಯ ಸಚಿವರಾದ ಆರ್.ಅಶೋಕ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಹೊಸದುರ್ಗ ಪಟ್ಟಣದ ಶಿವನೆಕಟ್ಟೆ ಸರ್ವೇ ನಂಬರ್‍ನಲ್ಲಿ ಎಂಟು ಎಕರೆ ವಿಸ್ತೀರ್ಣದಲ್ಲಿ ನೂತನವಾಗಿ ರೂ.10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮಿನಿವಿಧಾನಸೌಧ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿ ಅವರು ಮಾತನಾಡಿದರು.
ಹೊಸದುರ್ಗ ತಾಲ್ಲೂಕಿನಲ್ಲಿ ರೂ.10 ಕೋಟಿ ವೆಚ್ಚದಲ್ಲಿ ಮಿನಿವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಸರ್ಕಾರದ ವಿವಿಧ ಸವಲತ್ತು ಪಡೆಯಲು ಸರ್ಕಾರಿ ಕಚೇರಿಗೆ ಬರುವ ಜನರಿಗೆ ಎರಡು ಮಹಡಿಯ ಸುಸಜ್ಜಿತ ಕಚೇರಿ ನಿರ್ಮಾಣಕ್ಕೆ ಅವಕಾಶ ಮಾಡಿದ್ದು, ಇದಕ್ಕೆ ಈಗಾಗಲೇ ಅನುಮೋದನೆಯೂ ನೀಡಲಾಗಿದೆ ಎಂದರು.
ಮಿನಿವಿಧಾನಸೌಧ ಕಟ್ಟಡವೂ ಉತ್ತಮ ಜಾಗದಲ್ಲಿ ನಿರ್ಮಾಣವಾಗುತ್ತಿದೆ. ಒಳ್ಳೆಯ ರಸ್ತೆ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ. ಮಿನಿವಿಧಾನಸೌಧ ಎಂಬ ಪದದಲ್ಲಿ ಮಿನಿ ಎಂಬ ಪದ ಸರಿಯಿಲ್ಲ. ಮಿನಿ ಎಂಬುದು ಇಂಗ್ಲಿಷ್ ಪದವಾಗಿದ್ದು, ಅದಕ್ಕೆ ಅರ್ಥವೂ ಇಲ್ಲ. ಹಾಗಾಗಿ ಮಿನಿ ಎಂಬ ಪದವನ್ನು ತೆಗೆದುಹಾಕಬೇಕು ಎಂಬ ಚಿಂತನೆ ನಡೆದಿದ್ದು, ಇದರ ಬದಲಾಗಿ “ತಾಲ್ಲೂಕು ವಿಧಾನ ಸೌಧ”, “ತಾಲ್ಲೂಕು ಸೌಧ”  ಎಂಬುದಾಗಿ ಮಾಡುವುದಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಈಗಾಗಲೇ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ತಾಲ್ಲೂಕು ವಿಧಾನಸೌಧ ನಿರ್ಮಾಣಕ್ಕೆ ಅವಕಾಶ ಮಾಡಿ ಕೊಟ್ಟಿದ್ದೇವೆ. ಇವುಗಳು ಕೂಡ ನಿರ್ಮಾಣವಾಗಿದ್ದು, ಆದಷ್ಟು ಬೇಗ ಉದ್ಘಾಟನೆ ನೆರವೇರಿಸಲಾಗುವುದು. ಜೊತೆಗೆ ಹೊಳಲ್ಕೆರೆಯಲ್ಲಿಯೂ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಹತ್ತು ಎಕರೆ ಜಮೀನು ನೀಡಿದ್ದೇವೆ. ಸರ್ಕಾರಿ ಕಚೇರಿಗೆ ಸರ್ಕಾರದ ವಿವಿಧ ಸವಲತ್ತು ಪಡೆಯಲು ಬರುವ ಬಡವರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಕ್ರಮವಹಿಸಬೇಕು.
ಮನೆ ಬಾಗಿಲಿಗೆ ಪಿಂಚಣಿ: ಸಾಮಾಜಿಕ ಭದ್ರತಾ ಯೋಜನೆ ವ್ಯಾಪ್ತಿಯ ಅಡಿಯಲ್ಲಿ  ಬರುವ ವೃದ್ಧಾಪ್ಯ ವೇತನ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಹೋಗಿ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಕಂದಾಯ ಸಚಿವರಾದ ಆರ್.ಅಶೋಕ ಅವರು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಹಿಡಿದು ಕಚೇರಿಗಳ ಮುಂದೆ ನಿಲ್ಲುವಂತಾಗಬಾರದು. 60 ವರ್ಷ ಮೇಲ್ಪಟ್ಟವರ ಆಧಾರ ಕಾರ್ಡ್ , ರೇಷನ್ ಕಾರ್ಡ್ ಮಾಹಿತಿ ನಮ್ಮ ಬಳಿ ಇದ್ದು, ಇವುಗಳ ಮಾಹಿತಿ ಪರಿಗಣಿಸಿ, 60 ವರ್ಷ ಮೇಲ್ಪಟ್ಟರ ಮನೆ ಬಾಗಿಲಿಗೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ನೀವುಗಳು ವೃದ್ಧಾಪ್ಯ ವೇತನದ ಫಲಾನುಭವಿಗಳಾಗಿದ್ದೀರಾ ಎಂದು ಹೇಳಿ ಆದೇಶ ಪ್ರತಿ ನೀಡಬೇಕು. ಈಗಾಗಲೇ ರಾಜ್ಯದಲ್ಲಿ ಸುಮಾರು 30 ಸಾವಿರ ಜನಕ್ಕೆ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಿದ್ದೇವೆ. ಇನ್ನೂ 2 ಲಕ್ಷ ಜನರಿಗೆ ಕೊಡುವುದು ಬಾಕಿ ಇದೆ ಎಂದರು. ರಾಜ್ಯದಲ್ಲಿ ಒಟ್ಟು 68 ಲಕ್ಷ ಜನರಿಗೆ ಪಿಂಚಣಿ ನೀಡುತ್ತಿದ್ದು, ಈ ಸಾಲಿನಲ್ಲಿ ಹೆಚ್ಚುವರಿಯಾಗಿ 1.72 ಲಕ್ಷ ಮಂದಿಗೆ ಮನೆ ಬಾಗಿಲಿಗೆ ಪಿಂಚಣಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಬಿಪಿಎಲ್ ಕಾರ್ಡ್ ಹೊಂದಿರುವ 60 ವರ್ಷ ವಯೋಮಾನದ ಎಲ್ಲರಿಗೂ ಯಾವುದೇ ಅರ್ಜಿ ಸ್ವೀಕರಿಸದೇ ಅಂತವರ ಮನೆ ಬಾಗಿಲಿಗೆ ಕಂದಾಯ ಇಲಾಖೆಯವರೇ ತೆರಳಿ ವೃದ್ಧಾಪ್ಯ ವೇತನ ನೀಡುವ ವ್ಯವಸ್ಥೆ ಆಗಬೇಕು. ಇದರಿಂದ ಸರ್ಕಾರ ಮತ್ತು ನಮ್ಮೆಲ್ಲರಿಗೂ ಪುಣ್ಯ ಲಭಿಸಲಿದೆ ಎಂದರು.
ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ನೀಡಲಾಗುವುದು. ಕಂದಾಯ ಅಧಿಕಾರಿಗಳು ಶನಿವಾರ ಬೆಳಗ್ಗೆ 11 ಗಂಟೆಗೆ ಗ್ರಾಮಗಳಿಗೆ ತೆರಳಿ ಮಾರನೆ ದಿನ ಬೆಳಗ್ಗೆ 11 ಗಂಟೆಯವರೆಗೆ ಅಲ್ಲಿಯೇ ಇದ್ದು ಜನರ ಮನೆಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ರೂ.25 ಕೋಟಿ ಬಿಡುಗಡೆ: ಜಿಲ್ಲಾ ಕೇಂದ್ರ ಚಿತ್ರದುರ್ಗದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ರೂ.25 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.
ಇನ್ನೂ ಹದಿನೈದು ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗುವುದು. ಜಿಲ್ಲಾಧಿಕಾರಿ ಕಚೇರಿಯನ್ನು ಒಟ್ಟು ರೂ.40 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಪ್ರತಿಯೊಂದು ಗ್ರಾಮಕ್ಕೂ ಸ್ಮಶಾನ: ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲೂ ಸ್ಮಶಾನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಬೇಕು ಎಂದು ಕಂದಾಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 1243 ಗ್ರಾಮಗಳಿದ್ದು, ಅದರಲ್ಲಿ 313 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಮಂಜೂರು ಮಾಡಲಾಗಿದೆ. ಇನ್ನೂ 333 ಹಳ್ಳಿಗಳಲ್ಲಿ ಸ್ಮಶಾನ ಜಾಗ ಮಂಜೂರು ಬಾಕಿ ಇದ್ದು, ಅದನ್ನು ಕೂಡ ಮಂಜೂರು ಮಾಡಲಾಗುವುದು. ಮನುಷ್ಯ ಬದುಕಿದ್ದಾಗ ಇದ್ದ ಗೌರವ ಸತ್ತ ನಂತರವು ಗೌರಯುತವಾಗಿ ಅಂತ್ಯ ಸಂಸ್ಕಾರವಾಗಬೇಕು. ಈ ನಿಟ್ಟಿನಲ್ಲಿ ಸ್ಮಶಾನಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗುವುದು ಎಂದು ಹೇಳಿದರು.
ಹಕ್ಕಿ ಪಿಕ್ಕಿ ಜನಾಂಗ, ಹಟ್ಟಿ, ತಾಂಡ ಮುಂತಾದ ಜನಾಂಗದವರು ವಾಸಿಸುವ ಪ್ರದೇಶಗಳನ್ನು  ಕಂದಾಯ ಗ್ರಾಮಗಳಾಗಿ ಮಾಡಲು ಆದೇಶ ನೀಡಲಾಗಿದೆ. ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾದರೆ ಸರ್ಕಾರದ ವಿವಿಧ ಸೌಲಭ್ಯಗಳು ದೊರೆಯಲಿವೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ 279 ಕಂದಾಯ ಗ್ರಾಮಗಳನ್ನು ಗುರುತಿಸಿದ್ದು, 107 ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ ಹಟ್ಟಿಗಳಿಗೂ ಕಂದಾಯ ಗ್ರಾಮಗಳಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ ಮಾತನಾಡಿ, ಹೊಸದುರ್ಗ ತಾಲ್ಲೂಕಿನಲ್ಲಿ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣಕ್ಕೆ ರೂ.10 ಕೋಟಿ ಅನುದಾನ ಮಂಜೂರು ಮಾಡಿ ಆಧುನಿಕ ವ್ಯವಸ್ಥೆಯ ಸುಸಜ್ಜಿತವಾದ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿರುವುದು ಇಡೀ ತಾಲ್ಲೂಕು ಹೆಮ್ಮೆ ಹಾಗೂ ಸಂತೋಷ ಪಡುವಂತಹ ವಿಷಯವಾಗಿದೆ ಎಂದರು.
ಹೊಸದುರ್ಗ ಪಟ್ಟಣದಲ್ಲಿ 100 ಅಡಿ ಬೈಪಾಸ್ ರಸ್ತೆ ನಿರ್ಮಾಣ ಹಾಗೂ ಹೊಸದುರ್ಗ ಪಟ್ಟಣಕ್ಕೆ ಹೊಂದಿಕೊಂಡಂತೆ ಉದ್ಯಾನವನ ನಿರ್ಮಾಣಕ್ಕೆ 20 ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಕಂದಾಯ ಸಚಿವರಿಗೆ ಮನವಿ ಮಾಡಿದರು.
ಹೊಸದುರ್ಗ ಶಾಸಕರಾದ ಗೂಳಿಹಟ್ಟಿ ಡಿ. ಶೇಖರ್ ಮಾತನಾಡಿ, ತಾಲ್ಲೂಕಿನ ಮಿನಿವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಕಂದಾಯ ಸಚಿವ ಆರ್.ಅಶೋಕ ಅವರು ರೂ.10 ಕೋಟಿ ಅನುದಾನ ನೀಡುವುದರ ಜೊತೆಗೆ ಎಂಟು ಎಕರೆ ಜಮೀನು ಮಂಜೂರು ಮಾಡಿದ್ದಾರೆ. ಇದರ ಜೊತೆಗೆ ಅಲ್ಲಿ ವಾಸವಾಗಿರುವ ಹಕ್ಕಿಪಿಕ್ಕಿ, ಹಂದಿಜೋಗಿ, ಹೆಳವ ಜನಾಂಗದ 40 ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಕ್ಕಾಗಿ 13 ಎಕರೆ ಜಮೀನನ್ನು ಆಶ್ರಯ ಮನೆ ಯೋಜನೆಗಾಗಿ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಪೌತಿ ಖಾತೆ ಸಂಬಂಧಿಸಿದ ಸಮಸ್ಯೆಗಳ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಹೊಸದುರ್ಗ ತಾಲ್ಲೂಕಿನಲ್ಲಿ ಪೌತಿ ಖಾತೆ ಅಂದೋಲನ ಹಮ್ಮಿಕೊಂಡು ಪೌತಿ ಖಾತೆ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ತಾಲ್ಲೂಕಿನಲ್ಲಿ 2012ರ ಹಿಂದೆ ಸರ್ಕಾರಿ ಜಾಗದಲ್ಲಿ ಅಕ್ರಮ ಸಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡರಿಗೆ ತಾತ್ಕಾಲಿಕವಾಗಿ ಹಕ್ಕು ಪತ್ರ ನೀಡುತ್ತಿದ್ದರು. ಆದರೆ ಈಗ ಅವರಿಗೆ  ಮೂಲ ಹಕ್ಕು ಪತ್ರಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದರು.
ಕಂದಾಯ ಇಲಾಖೆ, ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಹೊಸದುರ್ಗ ತಾಲ್ಲೂಕು ಕ್ರೀಡಾಂಗಣದ ವೇದಿಕೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಇಲಾಖೆಯ ಸರ್ಕಾರಿ ಸವಲತ್ತುಗಳ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹೊಸದುರ್ಗ ಪುರಸಭೆ ಅಧ್ಯಕ್ಷ ಎಂ.ಶ್ರೀನಿವಾಸ್, ಉಪಾಧ್ಯಕ್ಷೆ ಜ್ಯೋತಿ ಕೆಂಚಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ತಹಶೀಲ್ದಾರ್ ವೈ.ತಿಪ್ಪೇಸ್ವಾಮಿ, ಮುಖಂಡರಾದ ಜಗದೀಶ್, ಗುರುಸ್ವಾಮಿ, ತಿಮ್ಮಣ್ಣ, ದೇವಿಶ್ರೀನಾಥ್ ಸೇರಿದಂತೆ ಮತ್ತಿತರರು ಇದ್ದರು.

 

[t4b-ticker]

You May Also Like

More From Author

+ There are no comments

Add yours