ಬಿಜೆಪಿಗೆ ಏಕೆ‌ ಮತ ನೀಡುತ್ತಿರಿ, ತೈಲ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕಾ?: ಕೆಪಿಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ ವಾಗ್ದಾಳಿ

 

ಬಿಜೆಪಿಗೆ ಯಾಕೆ ಮತ ಹಾಕುತ್ತಿದ್ದೀರಾ? ತೈಲ ಬೆಲೆ ಹೆಚ್ಚಳ ಮಾಡಿದ್ದಕ್ಕಾ? : ರಣದೀಪ್‌

ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳ ಸುರಿಮಳೆ ಗೈಯುತ್ತಿದ್ದಾರೆ. ಕೆಪಿಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ ಸುದ್ದಿಘೋಷ್ಟಿ ನಡೆಸಿದ್ದು ರಾಜ್ಯ ಹಾಗು ಕೇಂದ್ರ ಬಿಜೆಪಿ ಸರ್ಕಾರಗಳ ವಿರುದ್ದ ಹರಿಹಾಯ್ದಿದ್ದಾರೆ.

ದೇಶ ಹಾಗೂ ರಾಜ್ಯಗಳಲ್ಲಿ ಒಂದೇ ಪರಿಸ್ಥಿತಿ. ಇಂದು ಜನಸಾಮಾನ್ಯರ ಸ್ಥಿತಿ ಶೋಚನೀಯವಾಗಿದೆ. ಕರ್ನಾಟಕದ ಬಡವರು, ದಲಿತರು, ಯುವಕರು, ಮಹಿಳೆಯರು ಇಂದು ಅತ್ಯಂತ ಸಂಕಷ್ಟದ ಸ್ಥಿತಿಗೆ ಸಿಲುಕಿದ್ದಾರೆ. ಜನರ ಆದಾಯ ಕಡಿಮೆಯಾಗಿದ್ದು, ವೆಚ್ಚ ಹೆಚ್ಚಾಗಿದೆ. ವ್ಯವಸಾಯ ಮಾಡುವವರ ಆದಾಯ ಅರ್ಧಕ್ಕೆ ಕುಸಿದಿದೆ. ವೆಚ್ಚ ದುಪ್ಪಟ್ಟಾಗಿದೆ. ಬೆಲೆ ಏರಿಕೆ ಪರಿಣಾಮವಾಗಿ ಜನ ದಿನಬೆಳಗಾದರೆ ದೇವರ ಜತೆಗೆ ಅಡುಗೆ ಸಿಲಿಂಡರ್, ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಆರತಿ ಎತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ.

ಪೆಟ್ರೋಲ್ ಬೆಲೆ 110 ರೂ. ಆಗಿದೆ. ಡೀಸೆಲ್ ಬೆಲೆ 101.30 ರೂ. ಆಗಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆ 925 ರೂ. ಆಗಿದೆ. ಕಬ್ಬಿಣ, ಸೀಮೆಂಟ್, ಮರಳು, ಅಡುಗೆ ಎಣ್ಣೆ, ಬೇಳೆ ಕಾಳುಗಳು, ಯೂರಿಯಾ ಗೊಬ್ಬರ ಎಲ್ಲವೂ ದುಬಾರಿಯಾಗಿವೆ. ಸ್ವಾತಂತ್ರ್ಯ ಭಾರತದ 75 ವರ್ಷಗಳ ಇತಿಹಾಸದಲ್ಲಿ ಇದೇ ಗರಿಷ್ಠ.ಮೋದಿ ಅವರು ಮಾತೆತ್ತಿದರೆ 75 ವರ್ಷಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಕರ್ನಾಟಕ ಸೇರಿ ಇಡೀ ದೇಶ ಬೆಲೆ ಏರಿಕೆಯಿಂದ ತತ್ತರಿಸಿದೆ. ಬಿಜೆಪಿಗೆ ಯಾಕೆ ಮತ ಹಾಕಬೇಕು? ಬೆಲೆ ಏರಿಕೆಗಾ? ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಹೆಚ್ಚಳಕ್ಕಾ? ಯಾತಕ್ಕೆ ಹಾಕಬೇಕು ಮತ? ಎಂದು ಪ್ರಶ್ನಿಸಿದ್ದಾರೆ.

7 ವರ್ಷಗಳ ಹಿಂದೆ ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿದಾಗ ಕಚ್ಚಾತೈಲ ಬೆಲೆ ಬ್ಯಾರಲ್ ಗೆ 108 ಅಮೆರಿಕನ್ ಡಾಲರ್ ಇತ್ತು. ಆಗ ಪೆಟ್ರೋಲ್ ಬೆಲೆ ಸುಮಾರು 70 ರೂ. ಇದ್ದರೆ, ಡೀಸೆಲ್ ಬೆಲೆ 54 ರೂ ಇತ್ತು. ಇಂದು ಕಚ್ಚಾ ತೈಲಬೆಲೆ ಬ್ಯಾರೆಲ್ ಗೆ ಸುಮಾರು 70-80 ಡಾಲರ್ ಮಧ್ಯೆ ಇದೆ. ಆದರೂ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿರುವುದೇಕೆ? ಕಾರಣ ಇದರ ಮೇಲೆ ಮೋದಿ ಹಾಗೂ ಬೊಮ್ಮಾಯಿ ಅವರ ತೆರಿಗೆ ಬಿದ್ದಿದೆ ಎಂದು ಆರೋಪಿಸಿದ್ದಾರೆ.

7 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೇವಲ ಪೆಟ್ರೋಲ್ ಹಾಗೂ ಡೀಸೆಲ್ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿ 18 ಲಕ್ಷ ಕೋಟಿ ಹಣ ಸಂಪಾದಿಸಿದೆ. ರಾಜ್ಯ ಸರ್ಕಾರ ಕಳೆದ 20 ತಿಂಗಳಲ್ಲಿ 7 ಸಾವಿರ ಕೋಟಿ ಹಣವನ್ನು ಸುಲಿಗೆ ಮಾಡಿದೆ. ಸರ್ಕಾರ ಈ ರೀತಿ ನಡೆದುಕೊಂಡರೆ ಜನಸಾಮಾನ್ಯರ ಪಾಡೇನು? ಈ ವಿಚಾರ ಇಷ್ಟಕ್ಕೆ ನಿಲ್ಲುವುದಿಲ್ಲ ಎಂದು ಎಚ್ಚರಿಸಿದ್ದಾರೆ.ಕೋವಿಡ್ ಸಮಯದಲ್ಲಿ ಸರ್ಕಾರ ಎಲ್ಲ ಜವಾಬ್ದಾರಿಯನ್ನು ಜನರ ಮೇಲೆ ಹಾಕಿ ನುಣುಚಿಕೊಂಡಿತು. ಜನರನ್ನು ರಕ್ಷಿಸಲಾಗದೆ ಮನೆ ಸೇರಿಕೊಂಡಿತ್ತು. ಯಾವುದೇ ಬಿಜೆಪಿ ನಾಯಕರು ನಿಮ್ಮ ಸಹಾಯಕ್ಕೆ ಬರಲಿಲ್ಲ. ಆದರೆ ಯುವ ನಾಯಕರಾದ ಮಾನೆ ಅವರು ಜನರ ಕಷ್ಟಕ್ಕೆ ಧಾವಿಸಿದ್ದಾರೆ. ಬಡವರಿಗೆ ಆರ್ಥಿಕ ನೆರವು ನೀಡಿ ಅವರ ಬೆನ್ನಿಗೆ ನಿಂತರು. ಆಕ್ಸಿಜನ್ ಕೊರತೆಯಿಂದ ಜನ ಉಸಿರುಗಟ್ಟಿ ಸಾಯುವಾಗ ಸಂಸದರಾಗಲಿ, ನಾಯಕರಾಗಲಿ, ಶಾಸಕ ಸ್ಥಾನಕ್ಕೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಯಾಗಲಿ ಯಾರೂ ನೆರವಿಗೆ ಬರಲಿಲ್ಲ.

ಮಾನೆಯವರು ತಮ್ಮ ಯುವ ಕಾರ್ಯಕರ್ತರ ಜತೆ ಸೇರಿಕೊಂಡು ಆಕ್ಸಿಜನ್, ಆಕ್ಸಿಜನ್ ಕಾನ್ಸಂಟ್ರೇಟರ್ ಗಳ ವ್ಯವಸ್ಥೆ ಕಲ್ಪಿಸಿದ್ದರು. ಹೀಗಾಗಿ ಅವರಿಗೆ ಆಪದ್ಭಾಂದವ ಎಂಬ ಬಿರುದನ್ನು ಜನರೇ ಕೊಟ್ಟಿದ್ದಾರೆ ಎಂದು ಹಾನಗಲ್ ಅಭ್ಯರ್ಥಿ ಶ್ರೀನಿವಾಸ ಮಾನೆಯನ್ನು ಹಾಡಿ ಹೊಗಳಿದ್ದಾರೆ.

[t4b-ticker]

You May Also Like

More From Author

+ There are no comments

Add yours