ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಎಷ್ಟು ಸಾವಿರಕ್ಕೆ ಹೆಚ್ಚಳ ಮಾಡತ್ತಾರೆ ಗೊತ್ತೆ, ನಳೀನ್ ಕುಮಾರ್ ಭರವಸೆ ಏನು?

 

ಕಲಬುರಗಿ:ವಿಧಾನಪರಿಷತ್‌ನಲ್ಲಿ ಬಿಜೆಪಿಗೆ ಅಗತ್ಯ ಸಂಖ್ಯಾಬಲವಿಲ್ಲ. ಈ ಬಾರಿ ಹೆಚ್ಚು ಸಂಖ್ಯೆಯ ಪರಿಷತ್ ಸದಸ್ಯರನ್ನು ಗೆಲ್ಲಿಸಿದರೆ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನವನ್ನು ₹10 ಸಾವಿರಕ್ಕೆ ಹೆಚ್ಚಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ್ದೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಭರವಸೆ ನೀಡಿದರು.

ನಗರದ ಕೆಇಬಿ ಕಲ್ಯಾಣ ಮಂಟಪದ ಎದುರಿನ ಮೈದಾನದಲ್ಲಿ ಆಯೋಜಿಸಿದ್ದ ಪಕ್ಷದ ಜನ ಸ್ವರಾಜ್ ಸಮಾವೇಶದಲ್ಲಿ ಶನಿವಾರ ಮುಖ್ಯ ಭಾಷಣ ಮಾಡಿದ ಅವರು, ‘ಗ್ರಾಮ ಪಂಚಾಯಿತಿಗಳಿಗೆ ಸ್ವಾಯತ್ತತೆ ನೀಡುವ ನಿಟ್ಟಿನಲ್ಲಿ ಕೇರಳ ಮಾದರಿಯನ್ನು ಅನುಸರಿಸಲು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ್ದೇವೆ. ಕೇರಳದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ತಲಾ ₹1 ಕೋಟಿ ಅನುದಾನ ನೀಡಲಾಗುತ್ತದೆ. ಗ್ರಾ.ಪಂ. ಅಧ್ಯಕ್ಷರಿಗೆ ಕಾರು, ಆಪ್ತ ಸಹಾಯಕರನ್ನು ಒದಗಿಸಲಾಗುತ್ತದೆ. ಇಲ್ಲಿಯೂ ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ಹಣ ನೀಡಲು ಮುಖ್ಯಮಂತ್ರಿ ಅವರು ಚಿಂತನೆ ನಡೆಸಿದ್ದಾರೆ’ ಎಂದರು.
‘ಹಲವು ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ಮಂಜೂರಾತಿ ಕುಂಠಿತಗೊಂಡಿದೆ. ಕೆಲವೇ ದಿನಗಳಲ್ಲಿ ರಾಜ್ಯದ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ 5 ಲಕ್ಷ ಮನೆಗಳನ್ನು ನಿರ್ಮಿಸಿಕೊಡುವ ಚಿಂತನೆ ನಡೆದಿದೆ. ಈ ಬಗ್ಗೆ ಸರ್ಕಾರ ಘೋಷಣೆ ಹೊರಡಿಸಲಿದೆ’ ಎಂದು ಹೇಳಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ‘ಪ್ರಧಾನಿಯವರು ಜಾರಿಗೊಳಿಸಿದ ₹12 ಮೊತ್ತ ಪಾವತಿಸಿ ವಿಮೆ ಮಾಡಿಸುವ ಯೋಜನೆಯು ಲಕ್ಷಾಂತರ ಜನರಿಗೆ ಉಪಯೋಗವಾಗಿದ್ದು, ಇತ್ತೀಚೆಗೆ ನನ್ನ ಗೆಳೆಯನ ಶಸ್ತ್ರಚಿಕಿತ್ಸೆ ಮಣಿಪಾಲ್ ಆಸ್ಪತ್ರೆಯಲ್ಲಿ ಆಯಿತು. ಎಷ್ಟು ದುಡ್ಡು ಕೊಡಬೇಕಾಗುತ್ತದೋ ಎಂಬ ಭೀತಿಯಲ್ಲಿದ್ದ ಗೆಳೆಯ ನಜೀರ್‌ಗೆ ಆಸ್ಪತ್ರೆಯವರು ಸರ್ಕಾರದ ಆರೋಗ್ಯ ವಿಮೆಯಡಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಮಾತನಾಡಿ, ‘ಕಲಬುರಗಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಮುಖ್ಯಮಂತ್ರಿಗಳು ನನಗೆ ಅವಕಾಶ ನೀಡಿದ್ದಾರೆ. ವಿಷನ್–2050ಯಡಿ ಕೃಷಿ, ಕೈಗಾರಿಕೆ, ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಯತ್ನಿಸುತ್ತಿದ್ದೇವೆ. ಪ್ರಸಕ್ತ ವರ್ಷದಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಇಸ್ರೇಲ್ ಮಾದರಿ ಕೃಷಿಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗುತ್ತದೆ. ಮುಂದಿನ ವರ್ಷ 3 ಸಾವಿರ ಎಕರೆ ಪ್ರದೇಶದಲ್ಲಿ ಅಳವಡಿಸಲಾಗುವುದು’ ಎಂದರು.
ಪಕ್ಷದ ಅಭ್ಯರ್ಥಿ ಬಿ.ಜಿ. ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ, ಬಿಜೆಪಿ ವಿಭಾಗೀಯ ಪ್ರಭಾರಿ ರಾಜಕುಮಾರ ಪಾಟೀಲ ತೆಲ್ಕೂರ, ಶಾಸಕರಾದ ಬಸವರಾಜ ಮತ್ತಿಮೂಡ, ಶಶೀಲ್ ನಮೋಶಿ, ಸುನೀಲ ವಲ್ಯಾಪುರೆ ಡಾ. ಅವಿನಾಶ ಜಾಧವ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಬಿಜೆಪಿ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ, ಕರ್ನಾಟಕ ನರ್ಸಿಂಗ್ ಮಂಡಳಿ ಸದಸ್ಯೆ ದಿವ್ಯಾ ಹಾಗರಗಿ ವೇದಿಕೆಯಲ್ಲಿದ್ದರು.

[t4b-ticker]

You May Also Like

More From Author

+ There are no comments

Add yours