ಕಣ್ಣಿಗೆ ಕಾಣದು ಕೊರೊನಾ-ನಾವೆಲ್ಲ ಮನೆಯೊಳಗೇ ಇರೋಣ, ಬಚ್ಚಬೋರನಹಟ್ಟಿಯಲ್ಲಿ ಕೊರೊನಾ ಜಾಗೃತಿ…

 

ಚಿತ್ರದುರ್ಗ:
ನಮ್ಮ ಕಣ್ಣಿಗೆ ಕಾಣದ ಕೊರೊನಾ ವೈರಸ್ ಉಂಟು ಮಾಡುವ ಆಪತ್ತಿನಿಂದ ಬಚಾವಾಗಲು ನಾವೆಲ್ಲ ಮನೆಯೊಳಗೆ ಇರುವುದಲ್ಲದೆ ಪರಸ್ಪರ ಅಂತರ ಕಾಯ್ದುಕೊಂಡು ಮುಂಜಾಗ್ರತೆ ವಹಿಸುವುದೊಂದೇ ದಾರಿಯಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಹೇಳಿದರು.
  ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಚ್ಚಬೋರನಹಟ್ಟಿ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಸೋಮವಾರ ಏರ್ಪಡಿಸಿದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾರ ಕಣ್ಣಿಗೂ ಕಾಣದು ಕೊರೊನಾ, ಮನೆಯೊಳಗೇ ಇರೋಣ ಎಂದು ಕಿವಿ ಮಾತು ಹೇಳಿದ ಮೂಗಪ್ಪ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ದಿನೇ ದಿನೇ  ಹೆಚ್ಚುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದೆ.  ಆದರೆ ಯಾರೂ ಭಯಪಡುವ ಅಗತ್ಯವಿಲ್ಲ. ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ತಿರುಗಾಡುವುದನ್ನು ಕಡಿಮೆ ಮಾಡಬೇಕು. ಶಾಲೆಗಳು ಆರಂಭವಾಗದೆ ಮಕ್ಕಳು ಮನೆಯಲ್ಲಿಯೇ ಉಳಿದಿದ್ದಾರೆ. ಮಕ್ಕಳು ಹಾಗೂ ಹಿರಿಯರೊಂದಿಗೆ ಪರಸ್ಪರ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ, ಸ್ವಚ್ಛತೆಗೆ ಆದ್ಯತೆ ನೀಡಿ ಮನೆಯಲ್ಲಿರುವುದೇ ಈಗಿನ ಪರಿಸ್ಥಿತಿಗೆ ಉತ್ತಮ. ತಾಲೂಕಿನಲ್ಲಿ ನಮ್ಮ ಮನೆ, ನಮ್ಮ ಗ್ರಾಮವನ್ನು ಸ್ವಯಂಪ್ರೇರಿತವಾಗಿ ಲಾಕ್‍ಡೌನ್ ಮಾಡಿಕೊಂಡು, ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಸೋಂಕಿತ ಪ್ರದೇಶದಿಂದ ಯಾರಾದರೂ ಬಂದಲ್ಲಿ, ಅಂತಹವರು ಆರೋಗ್ಯ ಸಹಾಯಕರ ಸಲಹೆಗಳನ್ನು ಪಡೆದು 14 ದಿನ ಸ್ವಯಂಪ್ರೇರಿತರಾಗಿ ಹೊರಗಡೆ ಹೋಗದಂತೆ ಮನೆಯಲ್ಲಿ ಪ್ರತ್ಯೇಕವಾಗಿರಬೇಕು. ಶೀತ, ಕೆಮ್ಮು, ಜ್ವರ, ಲಕ್ಷಣಗಳಿದ್ದರೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು ಎಂದರು.
     ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ.ಬಿ. ಹನುಮಂತಪ್ಪ ಕೀಟಜನ್ಯ ರೋಗಗಳ ಕುರಿತು ಮಾಹಿತಿ ನೀಡಿ ಮಾತನಾಡಿ, ಸೊಳ್ಳೆ ಚಿಕ್ಕದು, ಕಾಟ ದೊಡ್ಡದು. ಕೊರೊನಾ ದಿಂದ ಭಯಬೀತರಾಗಿ ಸೊಳ್ಳೆಗಳ ಬಗ್ಗೆ ಗಮನ ಕೊಡುವುದನ್ನು ಮರೆಯಬೇಡಿ. ಯಾವುದೇ ಜ್ವರ ಇರಲಿ, ರಕ್ತ ಪರೀಕ್ಷೆ ಮಾಡಿಸಿ.  ಅಲ್ಲಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಿ, ಸೊಳ್ಳೆಯಿಂದ ಕಚ್ಚಿಸಿಕೊಳ್ಳದಂತೆ  ಪಾರಾಗಲು ಮಲಗುವಾಗ ಸೊಳ್ಳೆ ಪರದೆ ಬಳಸಿರಿ ಎಂದರು.
     ಡೆಂಘೀ ಮಾಸಾಚರಣೆಯ ಅಂಗವಾಗಿ ಇದೇ ಸಂದರ್ಭದಲ್ಲಿ ಡೆಂಘೀ ಜ್ವರದ ಲಕ್ಷಣಗಳು, ಹರಡುವ ಬಗೆ, ಸೊಳ್ಳೆಗಳಿಂದ ರಕ್ಷಿಸಿಕೊಳ್ಳುವ ವಿಧಾನಗಳ ಬಗ್ಗೆಯೂ ಜನರಲ್ಲಿ ಜಾರ್ಗತಿ ಮೂಡಿಸಲಾಯಿತು.
      ಈ ಸಂದರ್ಭದಲ್ಲಿ ಆರೋಗ್ಯ ಸಹಾಯಕ ಮಹೇಶ್, ಶುಭಶ್ರೀ ಆಶಾ ಕಾರ್ಯಕರ್ತೆ ಬೋರಮ್ಮ ಉಮಾಕ್ಷಿ ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.  

[t4b-ticker]

You May Also Like

More From Author

+ There are no comments

Add yours