ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ವಿಸ್ತರಣೆಗೆ ಸಹಾಯಕ: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

 

ಇ-ಶ್ರಮ್ ಫೋರ್ಟಲ್ ಮೂಲಕ ಅಸಂಘಟಿತ ಕಾರ್ಮಿಕರ ನೋಂದಣಿ, ಸಿ.ಎಸ್.ಸಿ ಕೇಂದ್ರಗಳಲ್ಲಿ ನೋಂದಣಿ ಉಚಿತ
ಚಿತ್ರದುರ್ಗ, ಡಿಸೆಂಬರ್20:
ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ವಿಸ್ತರಣೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಅಸಂಘಟಿತ ಕಾರ್ಮಿಕರ ದತ್ತಾಂಶ ಸಿದ್ಧಪಡಿಸುವ ನಿಟ್ಟಿನಲ್ಲಿ ಇ-ಶ್ರಮ್ ಫೋರ್ಟ್‍ಲನ್‍ನಲ್ಲಿ ಜಿಲ್ಲೆಯ ಎಲ್ಲ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (ಸಿ.ಎಸ್.ಸಿ.) ಉಚಿತವಾಗಿ ನೋಂದಣಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಅಸಂಘಟಿತ ವಲಯದ ಕಾರ್ಮಿಕರನ್ನು ನೋಂದಾಯಿಸುವ ಅಸಂಘಟಿತ ವಲಯದ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾಬೇಸ್ ಸಿದ್ದಪಡಿಸುವ ನಿಟ್ಟಿನಲ್ಲಿ ನಡೆದ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ 38 ಕೋಟಿ ಕಾರ್ಮಿಕರು ಅಸಂಘಟಿತ ವರ್ಗಗಳಲ್ಲಿ ತೊಡಗಿದ್ದು, ಪ್ರಸ್ತುತ ಅಸಂಘಟಿತ ಕಾರ್ಮಿಕರ ಕೇಂದ್ರಿಕೃತ ದತ್ತಾಂಶ ಲಭ್ಯವಿರುವುದಿಲ್ಲ. ಆದ ಕಾರಣ ಕೇಂದ್ರ ಮತ್ತು ರಾಜ್ಯಸರ್ಕಾರಗಳಿಗೆ ವಲಸೆ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರ ಸಮಸ್ಯೆಗಳನ್ನು ನಿವಾರಣೋಪಾಯ ಕಲ್ಪಿಸುವುದು ಕಷ್ಟಸಾಧ್ಯ. ಹಾಗಾಗಿ ಈ ದತ್ತಾಂಶ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ವಿಸ್ತರಿಸಲು ಸಹಾಯಕವಾಗಲಿದೆ ಎಂದು ಹೇಳಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಸಣ್ಣ ಮತ್ತು ಅತೀ ಸಣ್ಣ ರೈತರು, ಮೀನುಗಾರರು, ಪಶುಸಂಗೋಪನಗಾರರು, ನೇಕಾರರು, ಬಡಗಿಕೆಸಲಗಾರರು, ಆಶಾಕಾರ್ಯಕರ್ತರು, ಫೋಟೋಗ್ರಾಫರು, ಕ್ಷೌರಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಮನೆಕೆಲಸಗಾರರು, ಪತ್ರಿಕೆ ಮಾರಾಟಗಾರರು, ಚಾಲಕರು, ಕೂಲಿ ಕಾರ್ಮಿಕರು (ನರೇಗಾ), ಬೀದಿ ವ್ಯಾಪಾರಿಗಳು, ಅಂಗಡಿ ವ್ಯಾಪಾರಸ್ಥರು, ಚರ್ಮ ಕೈಗಾರಿಕಾ ಕಾರ್ಮಿಕರು, ಆನ್‍ಲೈನ್ ಸೇವಾ ಕಾರ್ಮಿಕರು, ಟೈಲರ್‍ಗಳು, ಹೊಟೇಲ್ ಕಾರ್ಮಿಕರು, ಬೇಕರಿ ವ್ಯಾಪಾರಸ್ಥರು, ವಲಸೆ ಕಾರ್ಮಿಕರು, ಮೆಕಾನಿಕ್ ಕಾರ್ಮಿಕರು ಸೇರಿದಂತೆ ಕೇಂದ್ರ ಸರ್ಕಾರವು ಗುರುತಿಸಿರುವ ಸುಮಾರು 379 ವರ್ಗಗಳ ಕಾರ್ಮಿಕರು ಸೌಲಭ್ಯ ಪಡೆಯಬಹುದಾಗಿದೆ.
ನೋಂದಣಿಯಿಂದಾಗುವ ಪ್ರಯೋಜನ: ಅಸಂಘಟಿತ ಕಾರ್ಮಿಕರು ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳನ್ನು ಪಡೆಯುತ್ತಾರೆ. ಈ ಡೇಟಾಬೇಸ್ ಸರ್ಕಾರಕ್ಕೆ ಅಸಂಘಟಿತ ಕಾರ್ಮಿಕರಿಗಾಗಿ ವಿಶೇಷ ನೀತಿಗಳು ಮತ್ತು ಯೋಜನೆಗಳನ್ನು ಮಾಡಲು ಸಹಾಯ ಮಾಡುತ್ತದೆ. ಇ-ಶ್ರಮ್‍ನಲ್ಲಿ ನೋಂದಾಯಿಸಿಕೊಂಡರೆ ಕಾರ್ಮಿಕರು 1ವರ್ಷಕ್ಕೆ ಪಿಎಂಎಸ್‍ಬಿಐ ಲಾಭವನ್ನು ಪಡೆಯುತ್ತಾರೆ. (ಆಕಸ್ಮಕ ಸಾವು ಮತ್ತು ಪೂರ್ಣ ಅಂಗವೈಕಲ್ಯಕ್ಕೆ ರೂ. 2ಲಕ್ಷ ಮತ್ತು ಭಾಗಶಃ ಅಂಗವೈಕಲ್ಯಕ್ಕೆ ರೂ.1ಲಕ್ಷ) ಇದು ವಲಸೆ ಕಾರ್ಮಿಕರನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಮತ್ತು ಅವರಿಗೆ ಉದ್ಯೋಗಾವಶಕಾಗಳನ್ನು ಒದಗಿಸುತ್ತದೆ ಎಂದು ಹೇಳಿದರು.
ನೋಂದಣಿಗೆ 16ರಿಂದ59 ವಯೋಮಿತಿ ಹೊಂದಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಭವಿಷ್ಯನಿಧಿ ಹಾಗೂ ಇಎಸ್‍ಐ ಫಲಾನುಭವಿಯಾಗಿರಬಾರದು. ಆಧಾರ್ ಕಾರ್ಡ್, ಸಕ್ರಿಯ ಬ್ಯಾಂಕ್ ಖಾತೆಯ ಪಾಸ್ ಬುಕ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ನೋಂದಣಿಗೆ ಅವಶ್ಯಕ ಎಂದು ಹೇಳಿದರು.
ಜಿಲ್ಲಾ ವ್ಯಾಪ್ತಿಯ ತಮ್ಮ ಇಲಾಖೆಯಡಿ ಬರುವ ಅಸಂಘಟಿತ ವಲಯಗಳಲ್ಲಿ ಬರುವ ವಿವಿಧ ವರ್ಗದ ಕಾರ್ಮಿಕರ ನೋಂದಣಿಗೆ ಹೆಚ್ಚಿನ ಆದ್ಯತೆ ನೀಡಿ ಸೂಕ್ತ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು .ಇದರ ಜೊತೆಗೆ ವಿವಿಧ ಕಾರ್ಮಿಕರ ಹಾಗೂ ಅಸಂಘಟಿತ ವಲಯಗಳ ಸಂಘಟನೆಗಳ ಸಹಕಾರ ಅಗತ್ಯವಾಗಿದೆ ಎಂದರು.
ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂಸಾಬ್ ಮಾತನಾಡಿ, ಅಸಂಘಟಿತ ಕಾರ್ಮಿಕರು ಇ-ಶ್ರಮ್ ಫೋರ್ಟಲ್ www.eshram.gov.in ನಲ್ಲಿ ಸ್ವಯಂ ನೋಂದಣಿ ಅಥವಾ ಹತ್ತಿರದ ಸಿ.ಎಸ್.ಸಿ ಕೇಂದ್ರಗಳಿಗೆ ಭೇಟಿ ನೀಡಿ ಉಚಿತವಾಗಿ ನೋಂದಣಿ ಮಾಡಿಸಬಹುದು. ನೋಂದಣಿಯಾದ ಫಲಾನುಭವಿಗೆ ಸ್ಥಳದಲ್ಲಿಯೇ ಗುರುತಿನ ಚೀಟಿ ನೀಡಲಾಗುವುದು.ಇದು ಜೀವಿತಾವಧಿಯ ಮಾನ್ಯತೆ ಹೊಂದಿರುತ್ತದೆ.
ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಡಿಸೆಂಬರ್-2021ರ ಅಂತ್ಯಕ್ಕೆ ರಾಜ್ಯದಲ್ಲಿ 1.89 ಕೋಟಿ ಅಸಂಘಟಿತ ಕಾರ್ಮಿಕರ ನೋಂದಣಿ ಮಾಡಿಸಲು ಗುರಿ ನಿಗಧಿಪಡಿಸಲಾಗಿದೆ. ಇ-ಶ್ರಮ್ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 37,415 ಅಸಂಘಟಿತ ಕಾರ್ಮಿಕರು ನೋಂದಾಯಿತರಾಗಿದ್ದು, ಜಿಲ್ಲೆಯು ಈ ಯೋಜನೆಯ ನೋಂದಣಿಯಲ್ಲಿ 24ನೇ ಸ್ಥಾನಪಡೆದಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರಾದ ಡಿ.ರಾಜಣ್ಣ, ಟಿ.ಕುಸುಮ, ಅಲ್ಲಾಭಕ್ಷಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

 

[t4b-ticker]

You May Also Like

More From Author

+ There are no comments

Add yours