ರಾಜ್ಯ ಬಿಜೆಪಿಗೆ ವಿಜಯೇಂದ್ರ ಕಿಂಗ್

 

ಲಿಂಗಾಯತ ಯುವ ನಾಯಕನಿಗೆ ಮಣೆ ಹಾಕಿದ ಬಿಜೆಪಿ

Bangalore: ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆ ಕಾಣಲಾಗುತ್ತಿದೆ. ಇದರ ಭಾಗವಾಗಿ ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ  (B.Y. Vijayendra )ಅವರನ್ನು ಬಿಜೆಪಿ ಪಕ್ಷದ ನೂತನ ರಾಜ್ಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದ ವಿಜಯೇಂದ್ರ ಯಡಿಯೂರಪ್ಪ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಈ ಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊತ ಹಾಕಿದ್ದಾರೆ.

ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವರ ಅವಧಿ ಕೊನೆಗೊಂಡಿದೆ. ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಮುಂಚಿತವಾಗಿ ಆಗಿರುವ ಈ ಬದಲಾವಣೆ ಪಕ್ಷದ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ವಾಲ್ಮೀಕಿ ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯಕ್ಕೆ ಅರ್ಜಿ

ಅಧ್ಯಕ್ಷ ರೇಸ್ ನಲ್ಲಿ ವಿಜಯೇಂದ್ರ ವಿನ್

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಹುದ್ದೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸಿಟಿ ರವಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಮುಂಚುಣಿಯಲ್ಲಿ ಕೇಳಿಬಂದಿತ್ತು. ಅಂತಿಮವಾಗಿ ಇದೀಗ ಬಿವೈ ವಿಜಯೇಂದ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಬಿಜೆಪಿ ಹೈಕಮಾಂಡ್ ಮತ್ತೆ ಮಾಜಿ ಸಿಎಂ ಯಡಿಯೂರಪ್ಪಗೆ ಮಣೆ ಹಾಕಿದಂತಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ದೂರವಾಗಿರುವ ಲಿಂಗಾಯತ ಸಮುದಾಯವನ್ನು ಸೆಳೆದುಕೊಳ್ಳುವ ಪ್ರಯತ್ನದ ಭಾಗವಾಗಿ ಬಿಜೆಪಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಸದ್ಯ ಜೆಡಿಎಸ್ ಎನ್​​ಡಿಎ ಭಾಗವಾಗಿರುವ ಕಾರಣ ಒಕ್ಕಲಿಗ ಸಮುದಾಯ ಹೊರತುಪಡಿಸಿದ ನಾಯಕನಿಗೆ ಮಣೆ ಹಾಕಲಾಗಿದೆ. ಜತೆಗೆ, ಯುವ ನಾಯಕತ್ವದ ಬಗ್ಗೆ ಹೈಕಮಾಂಡ್ ಒಲವು ವ್ಯಕ್ತಪಡಿಸಿದೆ.
ಬಿಜೆಪಿ ಯುವ ಮೋರ್ಚಾದಲ್ಲಿ ಇರುವ ವಿಜಯೇಂದ್ರಗೆ ಇರುವ ನೆಟ್​​ವರ್ಕ್ ಬಳಸಿಕೊಳ್ಳುವುದರ ಜತೆಗೆ, ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಪ್ರಯತ್ನದ ಭಾಗವಾಗಿಯೂ ಈ ನಿರ್ಧಾರ ಮಹತ್ವದ್ದಾಗಿದೆ. ವಿಜಯೇಂದ್ರ ಅಧ್ಯಕ್ಷ ಆದರೆ ಯಡಿಯೂರಪ್ಪ ಅವರು ತಾನೇ ಅಧ್ಯಕ್ಷ ಎಂಬAತೆ ಕೆಲಸ ಮಾಡುತ್ತಾರೆ ಎಂಬ ಲೆಕ್ಕಾಚಾರವನ್ನು ಕೂಡ ಬಿಜೆಪಿ ಹೈಕಮಾಂಡ್ ಹಾಕಿ ವಿಜಯೇಂದ್ರ ಆಯ್ಕೆ ಮಾಡಲಾಗಿದೆ.

ಲಿಂಗಾಯತ ಮತ ಬ್ಯಾಂಕ್ ಉಳಿಸಿಕೊಳ್ಳುವ ಯತ್ನ

ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಯಿತು. ಇನ್ನೊಂದೆಡೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಹೋದರು. ಇತ್ತ ಬಿಜೆಪಿ ಹೈಕಮಾಂಡ್ ಕೂಡಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾತಯರಿಗಿAತ ಒಕ್ಕಲಿಗರನ್ನು ಒಲಿಸಿಕೊಳ್ಳಲು ಹೆಚ್ಚು ಸರ್ಕಸ್ ಮಾಡಿತ್ತು. ಆದ್ರೆ ಒಕ್ಕಲಿಗರ ಮತಗಳು ಬಿಜೆಪಿಗೆ ಅಷ್ಟೊಂದು ವರ್ಕೌಟ್ ಆಗೋದಿಲ್ಲ ಅನ್ನೋದು ಬಿಜೆಪಿಗೆ ಅರ್ಥವಾಗಿದೆ. ಹೀಗಾಗಿ ಲಿಂಗಾಯತರನ್ನೇ ಮತ್ತೆ ಒಲಿಸಿಕೊಳ್ಳಬೇಕಾಗಿ ಅನಿವಾರ್ಯತೆ ಬಿಜೆಪಿಗಿದೆ. ಲಿಂಗಾಯತರು ಮತ್ತೆ ಬಿಜೆಪಿ ಕಡೆ ಮುಖ ಮಾಡಬೇಕು ಅಂದ್ರೆ, ಯಡಿಯೂರಪ್ಪ ಕುಟುಂಬದವರಿಗೇ ಪಟ್ಟ ಕಟ್ಟಬೇಕು ಅನ್ನೋದು ಬಿಜೆಪಿ ಹೈಕಮಾಂಡ್‌ಗೆ ಅರ್ಥವಾಗಿದೆ. ಹೀಗಾಗಿ ವಿಜಯೇಂದ್ರಗೆ ಮಣೆ ಹಾಕಿದೆ.

ಯಡಿಯೂರಪ್ಪರನ್ನು ಕಡೆಗಣಿಸಿಲ್ಲ ಎಂಬ ಸಂದೇಶ

ವಯಸ್ಸಿನ ಕಾರಣ ನೀಡಿ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ, ಅವರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಲಿಂಗಾಯತ ಸಮುದಾಯ ಈ ಬಗ್ಗೆ ಹೆಚ್ಚು ಅಸಮಾಧಾನಗೊಂಡಿತ್ತು. ಈ ಕಾರಣಕ್ಕೋ ಏನೋ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿತ್ತು. ಇದ್ರಿಂದಾಗಿ ಲಿಂಗಾಯತ ಸಮುದಾಯ ದೊಡ್ಡ ಮಟ್ಟದಲ್ಲಿ ಬಿಜೆಪಿ ವಿರುದ್ಧ ಮುನಿಸಿಕೊಂಡಿದೆ ಅನ್ನೋದು ಸಾಬೀತಾಗಿತ್ತು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಲಿಂಗಾಯತರನ್ನು ಒಲಿಸಿಕೊಳ್ಳುವ ಅನಿವಾರ್ಯತೆ ಬಿಜೆಪಿಗಿದೆ. ಹೀಗಾಗಿ, ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಯುವಕರನ್ನು ಸೆಳೆಯುವ ಯತ್ನ

೨೦೨೩ರ ವಿಧಾನಸಭಾ ಚುನಾವಣೆಗೂ ಮುನ್ನ ಪ್ರವೀಣ್ ನೆಟ್ಟಾರು, ಶಿವಮೊಗ್ಗದ ಶರತ್ ಹತ್ಯೆ ಪ್ರಕರಣ ಹೀಗೆ ಹಲವು ಘಟನೆಗಳು ಜರುಗಿದ್ದವು. ಈ ಘಟನೆಗಳಿಂದ ಬಿಜೆಪಿ ಯುವ ಕಾರ್ಯಕರ್ತರು ಹೆಚ್ಚು ಆತಂಕ ವ್ಯಕ್ತಪಡಿಸಿದ್ದರು. ಬಿಜೆಪಿಗೆ ರಾಜೀನಾಮೆ ನೀಡುವ ಹಂತಕ್ಕೂ ಹೋಗಿದ್ದರು.. ಇನ್ನು ಬಿಜೆಪಿಯಲ್ಲಿ ಜನಪ್ರಿಯ ಯುವ ನಾಯಕರು ಅಂತ ಇದ್ದರೆ ಅದು ವಿಜಯೇಂದ್ರ ಮಾತ್ರ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದರೆ, ಯುವಕರಿಗೆ ಆದ್ಯತೆ ಕೊಟ್ಟಂತೆಯೂ ಆಗುತ್ತದೆ. ಯುವ ಸಮುದಾಯವನ್ನು ಬಿಜೆಪಿಗೆ ಸೆಳೆದಂತೆಯೂ ಆಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್‌ನದ್ದು.

ಇದನ್ನೂ‌ ಓದಿ:ಜಿ.ಪಂ.ತಾ.ಪಂ.ಚುನಾವಣೆ ಅಧಿಸೂಚನೆಗೆ ನಾಲ್ಕು ವಾರ ಗಡುವು: ಹೈಕೋರ್ಟ್

ವಿಜಯೇಂದ್ರ ಅವರು ಬಿಜೆಪಿ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ. ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಉಪ ಚುನಾವಣೆಗಳ ಸಂದರ್ಭದಲ್ಲಿ ವಿಜಯೇಂದ್ರ ಒಂದಷ್ಟು ಕ್ಷೇತ್ರಗಳ ಉಸ್ತುವಾರಿ ನೀಡಲಾಗಿತ್ತು. ಆ ಕ್ಷೇತ್ರಗಳಲ್ಲಿ ವಿಜಯೇಂದ್ರ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. ಬಿಜೆಪಿ ಅಸ್ತಿತ್ವದಲ್ಲೇ ಇಲ್ಲದ ಅಂತಹ ಕ್ಷೇತ್ರಗಳಲ್ಲಿ ಯುವಕರನ್ನು ಹುರಿದುಂಬಿಸಿ ಪಕ್ಷ ಗೆಲ್ಲುವಂತೆ ನೋಡಿಕೊಂಡಿದ್ದರು. ಈ ಕಾರಣಕ್ಕಾಗಿ ವಿಜಯೇಂದ್ರಗೆ ಅಧಿಕಾರ ಕೊಡಬೇಕು ಅನ್ನೋ ಕೂಗು ಮೊದಲಿನಿಂದಲೂ ಇತ್ತು.

ವಿಜಯೇಂದ್ರ ಮೊದಲ ಮಾತು.

ರಾಜ್ಯದ ಬಿಜೆಪಿ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಆಯ್ಕೆ ಮಾಡಿದ ಎಲ್ಲಾರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.ಕರ್ನಾಟಕ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕ ಹಿರಿಯರ ಹಾದಿಯಲ್ಲಿ ಬಿಜೆಪಿ ಕಟ್ಟಿದ ಶ್ರಮವಿದೆ. ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದೆ.ಕೇಂದ್ರದ ವರಿಷ್ಠರು ಮತ್ತು ರಾಜ್ಯ ನಾಯಕರು ಇಟ್ಟಿರುವ ಭರವಸೆ, ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ರಾಜ್ಯದ ಎಲ್ಲಾ ಹಿರಿಯರ ನಾಯಕರ ಮಾರ್ಗದರ್ಶನ ಪಡೆದುಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿ ಪಕ್ಷ ಗಟ್ಟಿಗೊಳಿಸುವ ಕೆಲಸ ಮಾಡುತ್ತೇನೆ. ನಮ್ಮ ಗುರಿ ಮುಂದಿನ ಲೋಕಸಭೆ ಚುನಾವಣೆ ಆಗಿದೆ. ಇಡೀ ಜಗತ್ತು ಭಾರತ ಮತ್ತು ವಿಶ್ವ ನಾಯಕ ಮೋದಿಜೀ ಅವರ ಕಡೆ ನೋಡುತ್ತಿದೆ. ಮೋದಿ ಅವರ ನಾಯಕತ್ವದ ಮೇಲೆ ಭರವಸೆ ಇಟ್ಟುಕೊಂಡು ಪಕ್ಷ ಸಂಘಟನೆ ಮಾಡುವ ಮೂಲಕ ರಾಜ್ಯದಿಂದ ಲೋಕಸಭೆಗೆ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಡುವ ಮೂಲಕ ಕೈ ಬಲಪಡಿಸುವಲ್ಲಿ ಯಶಸ್ವಿಯಾಗುತ್ತೇವೆ..

ಬಿ.ವೈ. ವಿಜಯೇಂದ್ರ

ನೂತನ ಬಿಜೆಪಿ ರಾಜ್ಯಧ್ಯಕ್ಷರು ಮತ್ತು ಶಾಸಕರು ಶಿಕಾರಿಪುರ ಕ್ಷೇತ್ರ

[t4b-ticker]

You May Also Like

More From Author

+ There are no comments

Add yours