ಮಕ್ಕಳ ಮೇಲೆ ದೌರ್ಜನ್ಯ ಘಟನೆಗಳು ನಡೆಯದಂತೆ ಕ್ರಮವಹಿಸಿ, ಸುರಕ್ಷತೆ ಕ್ರಿಯಾಯೋಜನೆ ರೂಪಿಸಿ: ಅಧ್ಯಕ್ಷ ಕೆ.ನಾಗಣ್ಣ ಗೌಡ

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ನ.10:

ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ದೌರ್ಜನ್ಯ ಘಟನೆಗಳ ತಡೆಗೆ ಕ್ರಮವಹಿಸಿ, ಸುರಕ್ಷತೆಗೆ ಆದ್ಯತೆ ನೀಡಿ ವಾರದೊಳಗೆ ಕ್ರಿಯಾಯೋಜನೆ ಸಿದ್ದಪಡಿಸಿ, ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ.ನಾಗಣ್ಣ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆರ್.ಟಿ.ಇ, ಪೋಕ್ಸೋ ಹಾಗೂ ಬಾಲನ್ಯಾಯ ಕಾಯ್ದೆ ಅನುಷ್ಠಾನ ಕುರಿತು ಹಾಗೂ ಮಕ್ಕಳು ಎದುರುಸುತ್ತಿರುವ ಇನ್ನಿತರೆ ಸಮಸ್ಯೆಗಳ ಕುರಿತು ಹಾಗೂ ವಿವಿಧ ಇಲಾಖೆಗಳಿಂದ ಮಕ್ಕಳಿಗೆ ಒದಗಿಸಿದ ಸೌಲಭ್ಯಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಗರಿಕ ಸಮಾಜ ತಲೆತಗ್ಗಿಸುವ ಅನೇಕ ಘಟನೆಗಳು ನಮ್ಮ ಮುಂದೆ ನಡೆಯುತ್ತಿವೆ. ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ದೌರ್ಜನ್ಯ ಘಟನೆಗಳು ಜರುಗಿದಾಗ ಸಮರ್ಪಕ ತನಿಖೆಯಾಗಬೇಕು. ಇಂತಹ ಚಟುವಟಿಕೆ ನಿಯಂತ್ರಣಕ್ಕೆ ಏನು ಮಾಡಬೇಕು ಎಂಬುದನ್ನು ಚಿಂತಿಸಬೇಕಿದೆ ಎಂದರು.
ಹಗಲು-ರಾತ್ರಿ ಎನ್ನದೇ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಮಕ್ಕಳ ಜೀವ, ಜೀವನ ಹಾಗೂ ರಕ್ಷಣೆ-ಸುರಕ್ಷತೆಗೆ ಸೂಕ್ತಕ್ರಮವಹಿಸಿ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಮಕ್ಕಳ ಕಣ್ಣೀರು ಒರೆಸುವ ಜೊತೆಗೆ ಉತ್ತಮ ಭವಿಷ್ಯ ರೂಪಿಸುವ ಹೊಣೆಗಾರಿಕೆಯೂ ಇದೆ. ದೌರ್ಜನ್ಯ ತಪ್ಪಿಸುವ ನಿಟ್ಟಿನಲ್ಲಿ, ಮಕ್ಕಳಿಗೆ ರಕ್ಷಣೆ ಒಗಿಸಲು ಸೂಕ್ತ ಕ್ರಮಕೈಗೊಳ್ಳಬೇಕು  ಎಂದು ತಾಕೀತು ಮಾಡಿದರು.
ಹೆಣ್ಣು ಮಕ್ಕಳ ಶಾಲೆ ಹಾಗೂ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯಗಳು ಇರುವ ಕಡೆ ಅವರ ರಕ್ಷಣೆಗೆ ಅಗತ್ಯ ಕ್ರಮವಹಿಸಬೇಕು. ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಮಹಿಳಾ ಮೇಲ್ವಿಚಾರಕರನ್ನೇ ನಿಯೋಜಿಸಬೇಕು.  ಹೆಚ್ಚಿನ ಕ್ರಿಯಾಶೀಲತೆಯ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಮಕ್ಕಳ ಮೇಲಿನ ಯಾವುದೇ ದೌರ್ಜನ್ಯ ಪ್ರಕರಣದ ಸುಳಿವು ದೊರೆತರೂ  ಅಧಿಕಾರಿಗಳು ತಕ್ಷಣಕ್ಕೆ ಕ್ರಮವಹಿಸಬೇಕು. ತಪ್ಪಿತಸ್ಥರಿಗೆ ಯಾವುದೇ ಕಾರಣಕ್ಕೂ ಕ್ಷಮಿಸುವುದು ಬೇಡ. ಕ್ಷಮಿಸಿದರೆ, ದೌರ್ಜನ್ಯದ ಅಭ್ಯಾಸ ಮುಂದುವರೆಸುತ್ತಾರೆ. ದೌರ್ಜನ್ಯ ನಡೆಸಿದವರೂ ಎಷ್ಟೇ ದೊಡ್ಡವರಾದರೂ ಪ್ರಭಾವಕ್ಕೆ ಒಳಗಾಗಿ ಸುಮ್ಮನಾಗಬೇಡಿ. ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಲ್ಲಿ ಜರುಗಬಹುದಾದ ಇಂತಹ ಹತ್ತಾರು ಪ್ರಕರಣಗಳನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.
ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವ ಅಗತ್ಯವಿದೆ. ಪ್ರತಿಯೊಬ್ಬ ನಾಗರಿಕರು ಕೂಡ ಮಕ್ಕಳ ಹಕ್ಕುಗಳ ಬಗ್ಗೆ ತಿಳುವಳಿಕೆ ನೀಡಬೇಕು. ತಾಯಿ ಮತ್ತು ಮಕ್ಕಳು ಪೌಷ್ಠಿಕ ಆಹಾರವನ್ನು ಸೇವಿಸುವುದರ ಮೂಲಕ ಅಪೌಷ್ಠಿಕತೆಯನ್ನು ಹೋಗಲಾಡಿಸಬೇಕಿದೆ.  ಅಪೌಷ್ಠಿಕತೆ ಹೋಗಲಾಡಿಸಲು ದುಬಾರಿ ಬೆಲೆಯ ಆಹಾರಕ್ಕೆ ಮಾರುಹೋಗದೇ, ಕಡಿಮೆ ಬೆಲೆಯ ತರಕಾರಿ, ಮೊಳಕೆಕಾಳು, ಹಣ್ಣು,  ಸೊಪ್ಪು, ಪ್ರೋಟಿನ್‍ಯುಕ್ತ ಪೋಷಕಾಂಶಗಳ ಕುರಿತು ಪ್ರಾತ್ಯಕ್ಷಿಕತೆ ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಕಳ್ಳ ಸಾಗಾಣಿಕೆ ನಿಯಂತ್ರಣಕ್ಕೆ ರಚನೆಗೊಂಡಿರುವ ಸಮಿತಿಗಳು ಕಾಟಚಾರಕ್ಕೆ ಕಾರ್ಯನಿರ್ವಹಿಸದೇ ಏಕೆಂದರೆ ಮಕ್ಕಳ ಸಾಗಾಣಿಕೆ ಜಾಲ ದೊಡ್ಡದು ಇದೆ. ಇದನ್ನು ಬೇಧಿಸುವ ಕಾರ್ಯ ಸಮರ್ಪಕವಾಗಿ ಆಗಬೇಕು ಎಂದರು.
ಬಾರ್ ಮತ್ತು ರೆಸ್ಟೋರೆಂಟ್, ಲಿಕ್ಕರ್ ಶಾಪ್‍ಗಳಿಂದ ಮಕ್ಕಳು ದೂರವಿರುವಂತೆ ಅಗತ್ಯ ಕ್ರಮವಹಿಸಬೇಕು. 18 ವರ್ಷದೊಳಗಿನ ಮಕ್ಕಳು ಬಾರ್‍ನಲ್ಲಿ ಕೂರಬಾರದು. ಶಾಲಾ-ಕಾಲೇಜುಗಳಿಂದಲೂ ಮದ್ಯದ ಅಂಗಡಿಗಳು ದೂರವಿರಬೇಕು ಎಂದು ಅಧ್ಯಕ್ಷರು ಹೇಳಿದರು.
ಮಕ್ಕಳು ಹೆಚ್ಚು ಅನುಕರಣೆಯಿಂದ ಕಲಿಯುತ್ತಾರೆ. ಮಕ್ಕಳ ಮುಂದೆ ಕೆಟ್ಟ ಹವ್ಯಾಸಗಳನ್ನು ಮಾಡಬಾರದು. ಇದು ಮಕ್ಕಳ ಮೇಲೆ ಪ್ರಭಾವ ಬೀರಲಿದೆ. ಹಾಗಾಗಿ ಶಾಲಾ-ಕಾಲೇಜುಗಳಿಂದ ಮದ್ಯದ ಅಂಗಡಿಗಳು ದೂರವಿರುವಂತೆ ಕ್ರಮವಹಿಸಿ, ತನಿಖೆ ಮಾಡಿ ವರದಿ ನೀಡುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನವೆಂಬರ್ 18ರಂದು ಮಕ್ಕಳ ಮೇಲಿನ ದೌರ್ಜನ್ಯ ವಿರೋಧಿ ದಿನ ಆಚರಿಸಲಾಗುತ್ತಿದ್ದು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯುವಕ, ಯುವತಿ ಮಂಡಳಿಗಳು, ಶಿಕ್ಷಕರು, ಜನಪ್ರತಿನಿಧಿಗಳು, ಶಾಲಾ ಮಕ್ಕಳನ್ನು ಒಳಗೊಂಡು ವಿಶೇಷ ಜಾಗೃತಿ ಮೂಡಿಸವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕಾನೂನಿನಲ್ಲಿ ಇರುವಂತಹ ಶಿಕ್ಷೆಗಳ ಬಗ್ಗೆ ಎಚ್ಚರಿಕೆಯ ಸಂದೇಶ ನೀಡುವಂತಹ ಬೃಹತ್ ಜಾಥಾ ಏರ್ಪಡಿಸಲು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ಬಾಲ್ಯ ವಿವಾಹ ತಡೆಗೆ ಕೇವಲ ಒಂದೆರೆಡುಇಲಾಖೆಗಳ ಕಾರ್ಯನಿರ್ವಹಿಸದೇ ಸಾಲದು. ಇದರಿಂದ ಪರಿಣಾಮಕಾರಿ ತಡೆ ಆಗುತ್ತಿಲ್ಲ. ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ, ಪೊಲೀಸ್, ಆರೋಗ್ಯ ಇಲಾಖೆ, ತಹಶೀಲ್ದಾರ್ ಒಳಗೊಂಡ ಅಧಿಕಾರಿಗಳೂ ಬಾಲ್ಯ ವಿವಾಹದ ಬಗ್ಗೆ ಸಣ್ಣ ಸುಳಿವು ದೊರೆತರೂ ತಡೆಗೆ ಕ್ರಮವಹಿಸಬೇಕು ಎಂದು ಹೇಳಿದರು.
ಇಟ್ಟಿಗೆ ಭಟ್ಟಿ, ಕೋಳಿ ಫಾರಂಗಳಲ್ಲಿ ನಿರಂತರವಾಗಿ ದಾಳಿ ನಡೆಸಿ, ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಕ್ರಮವಹಿಸಬೇಕು ಎಂದು ಸೂಚಿಸಿದರು. ಮಕ್ಕಳು ತಮ್ಮ ಹಕ್ಕಿನಿಂದ ವಂಚಿತರಾಗುವಂತೆ ತಪ್ಪಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲೋಕೇಶ್ವರಪ್ಪ ಮಾತನಾಡಿ, 2022-23ನೇ ಸಾಲಿನಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 81 ದೂರುಗಳು ಬಂದಿದ್ದು, 79 ಬಾಲ್ಯವಿವಾಹಗಳನ್ನು ತಡೆಯಾಗಿದೆ. 2 ಪ್ರಕರಣಗಳಿಗೆ ಎಫ್‍ಐಆರ್ ದಾಖಲಿಸಲಾಗಿದೆ. ಪೋಕ್ಸೊ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ವರ್ಷ 96 ಪ್ರಕರಣಗಳು ದಾಖಲಾಗಿವೆ. 23 ತನಿಖೆ ಹಂತ ಹಾಗೂ 73 ನ್ಯಾಯಾಲಯದ ವಿಚಾರಣೆಯ ಹಂತದಲ್ಲಿದೆ.  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಆರು ಸಂತ್ರಸ್ಥರಿಗೆ 17.50 ಲಕ್ಷ ಪರಿಹಾರ ನೀಡಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲೋಕೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಭಾಕರ್ ಹಾಗೂ ಸಮಿತಿ ಸದಸ್ಯರಾದ ಡಿ.ಕೆ.ಶೀಲಾ, ಬಸವರಾಜ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours