ಅಕ್ರಮ ಗಣಿಗಾರಿಕೆಗೆ ಬೆಂಬಲ ನೀಡಿದವರ ಮೇಲೆ ಕ್ರಮ ತೆಗೆದುಕೊಳ್ಳಿ:ಗೂಳಿಹಟ್ಟಿ ಶೇಖರ್

 

ಹೊಸದುರ್ಗ ಅರಣ್ಯ ಇಲಾಖೆ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಿದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್
ಹೊಸದುರ್ಗ : ತಾಲ್ಲೂಕಿನ ಪರಿಶಿಷ್ಟ ಜಾತಿಯ ಕೂಲಿ ಕಾರ್ಮಿಕರ ಮೇಲೆ ಪದೇ ಪದೇ ದೌರ್ಜನ್ಯ ಎಸಗಿರುವುದು ಹಾಗೂ ಡೀಮ್ಡ್‌ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ಬೆಂಬಲ ನೀಡಿ  ಮಂಜೂರು ಮಾಡಲು, ಶಿಫಾರಸ್ಸಿಗೆ ಅನುಕೂಲ ಮಾಡಿಕೊಟ್ಟಿರುವ ಹಿಂದಿನ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಉಪ ಅರಣ್ಯಸಂರಕ್ಷಣಾಧಿಕಾರಿ, ಜಿಲ್ಲಾ ಹಾಗೂ ವಲಯ ಅರಣ್ಯಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವವರೆಗೂ ಒಂಟಿ ಅಮರಣ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಹೇಳಿದರು.
    ಪಟ್ಟಣದ ಅರಣ್ಯ ಇಲಾಖೆ ಎದುರು ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಒಂಟಿ ಅಮರಣ ಉಪವಾಸ ಸತ್ಯಾಗ್ರಹ ಆರಂಭಿಸಿ ಅವರು ಮಾತನಾಡಿದರು.
    ತಾಲ್ಲೂಕಿನ ಗುಡ್ಡಗಾಡುಗಳಲ್ಲಿ ಬಿದ್ದಿರುವ ಕಲ್ಲುಗಳು ಮತ್ತು ಬೆಂಕಿಯಿಂದ ಸುಟ್ಟ ಸೈಜು ಕಲ್ಲು ಹಾಗೂ ಕಲ್ಲು ಒಡೆದು ವೃತ್ತಿ ಮಾಡುತ್ತಿರುವ ಪರಿಶಿಷ್ಟ ಜಾತಿಯ ಕೂಲಿ ಕಾರ್ಮಿಕರ ಮೇಲೆ ಅರಣ್ಯ ಇಲಾಖೆಯವರು ನಿರಂತರ ದೌರ್ಜನ್ಯ ಎಸಗುತ್ತಿದ್ದಾರೆ. ಕಲ್ಲು ಒಡೆಯುವವರ ಸಾಂಪ್ರಾದಾಯಿಕ ಜೀವನಕ್ಕೆ  ತೊಂದರೆ ಮಾಡಬಾರದೆಂಬ ನಿಯಮವನ್ನು ಹೊಸದುರ್ಗದಲ್ಲಿ ಉಲ್ಲಂಘಿಸಲಾಗುತ್ತಿದೆ. ಈ ದೌರ್ಜನ್ಯ ಖಂಡಿಸಿ ಕಳೆದ 4 ತಿಂಗಳ ಹಿಂದಯೇ ಸತ್ಯಾಗ್ರಹ ಮಾಡಬೇಕಿತ್ತು, ಅಧಿಕಾರಿಗಳಿಗೆ ತಪ್ಪಿನ ಅರಿವಾಗಬಹುದು ಎಂಬ ಉದ್ದೇಶದಿಂದ ಕಾಲಾವಕಾಶ ನೀಡಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
     ಸರ್ವೆ ನಂ 86, 87 ಮತ್ತು 88 ರ ಪ್ರದೇಶವನ್ನು ಡೀಮ್ಡ್‌ ಅರಣ್ಯ ಎಂದು ಘೋಷಿಸಲಾಗಿತ್ತು. 2008 ರಲ್ಲಿ ಹೊಸಹಳ್ಳಿ ಗ್ರಾಮದವರು ಕಲ್ಲು ಗಣಿಗಾರಿಕೆಗೆ ಅರ್ಜಿ ಹಾಕಿದರು. ಆದರೆ, ಕಂದಾಯ ಇಲಾಖೆ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿ ಒಂದು ಅರ್ಜಿಯನ್ನು ಮಾತ್ರ (ಲಿಂಗಮೂರ್ತಿ ತಮ್ಮ ಸಿದ್ಧಪ್ಪ) ಪುರಸ್ಕರಿಸಿತು. ಆಗ ಇವರು ಅರ್ಜಿ ಹಾಕಿದ ಸ್ಥಳ ಅರಣ್ಯ ಇಲಾಖೆ ವ್ಯಾಪ್ತಿಯಲಿಲ್ಲ ಎಂಬ ತಪ್ಪು ಮಾಹಿತಿಯನ್ನು ಇಲಾಖೆ, ಕಂದಾಯ ಇಲಾಖೆಗೆ ತಿಳಿಸಿತು, ಕೂಡಲೇ ಅವರು ಅರ್ಜಿ ಸ್ವೀಕರಿಸಿದರು. ನಂತರ ತಾಲ್ಲೂಕಿನ 4 ವ್ಯಕ್ತಿಗಳಿಗೆ (ಅನಂತ್‌, ದಳವಾಯಿ ವೆಂಕಟೇಶ್‌, ಯತೀಶ್‌, ಮಂಜಣ್ಣ) ತಲಾ 5 ಎಕರೆಗಳಂತೆ ಒಟ್ಟು 20 ಎಕರೆ ಪ್ರದೇಶದ ಲೀಜ್‌ ಗೆ ಅರ್ಜಿ ಹಾಕಿದರು. ಪುನಃ ಅರಣ್ಯ ಇಲಾಖೆಯವರು ಈ ಸ್ಥಳ ತಮ್ಮದಲ್ಲ ಎಂದು ತಪ್ಪು ಮಾಹಿತಿ ನೀಡಿದರು. ಆಗ ಅರ್ಜಿ ಸ್ವೀಕೃತವಾಯಿತು. ಹೀಗೆ ಹೊಸಹಳ್ಳಿ ಗ್ರಾಮದವರಿಗೆ ಅನ್ಯಾಯ ಮಾಡಿ, ಬಡ ಜನರ ವಿರುದ್ಧ ಅಧಿಕ ಪ್ರಕರಣಗಳನ್ನು ದಾಖಲಿಸಿ, ಅಕ್ರಮವಾಗಿ ಹಣ ಸಂಪಾದಿಸುವವರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಇದಕ್ಕೆ ಕಾರಣಿಕರ್ತರಾದ ಹಿಂದಿನ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಉಪ ಅರಣ್ಯಸಂರಕ್ಷಣಾಧಿಕಾರಿ, ಜಿಲ್ಲಾ ಹಾಗೂ ವಲಯ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲೇಬೇಕು ಎಂದು ಒತ್ತಾಯಿಸಿದರು.
   ಕಳೆದ ಒಂದು ತಿಂಗಳ ಹಿಂದೆ ಮಧುರೆ ರೈತರೊಬ್ಬರು ಅರಣ್ಯ ಭೂಮಿಯಲ್ಲಿ ಅಡಿಕೆ ಹಾಕಿದ್ದಾರೆಂದು ಫಸಲಿಗೆ ಬಂದಿದ್ದ 2 ಸಾವಿರ ಅಡಿಕೆ ಗಿಡಗಳನ್ನು ರಾತ್ರೋ ರಾತ್ರಿ ಕಡಿಯಲಾಗಿದೆ. ಬಡವರ ಮೇಲಿನ ದರ್ಪ ನಿಲ್ಲಿಸಿ. ಪಕ್ಕದ ಭಗೀರಥ ಪೀಠಕ್ಕೆ ಸಂಬಂಧಿಸಿದ ಅಡಿಕೆ ಹಾಗೂ ತೆಂಗು ಅರಣ್ಯ ಇಲಾಖೆಗೆ ಸೇರಿದ್ದು ಅದನ್ನು ಕಡಿಯಬಹುದಿತ್ತಲಾ? ಬಡವರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ವಲಯ ಅರಣ್ಯಾಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸುವವರೆಗೂ ಯಾವುದೇ ಕಾರಣಕ್ಕೂ ಸತ್ಯಾಗ್ರಹ ಹಿಂಪಡೆಯುವುದಿಲ್ಲ ಎಂದು ಒತ್ತಾಯಿಸಿದರು.
*ಜಿಲ್ಲಾ ಅರಣ್ಯಾಧಿಕಾರಿ ಭೇಟಿ:*
  ಕೂಡಲೇ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಅರಣ್ಯಾಧಿಕಾರಿ ರಾಜಣ್ಣ ಮಾತನಾಡಿ, ನಮಗೆ ಪರಿಶೀಲಿಸಲು ಕಾಲಾವಕಾಶ ಕೊಡಿ, ವಾರದೊಳಗೆ ತೀರ್ಮಾನ ಕೈಗೊಳ್ಳಲಾಗುವುದು. ಕೂಡಲೇ ಸತ್ಯಾಗ್ರಹ ಹಿಂಪಡೆಯಿರಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೂಳಿಹಟ್ಟಿ ಶೇಖರ್‌ 2022 ರಲ್ಲಿಯೇ ಡೀಮ್ಡ್‌ ಅರಣ್ಯದಿಂದ ಹಿಂಪಡೆದಿರುವ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ದಿಂಡು ತಂದಿದ್ದಕ್ಕೆ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿದ್ದಾರೆ. ನಿಯಮನುಸಾರ ಕರ್ತವ್ಯ ನಿರ್ವಹಿಸುವುದಾದರೆ, ಕೂಡಲೇ ಭಗೀರಥ ಪೀಠದಲ್ಲಿನ 500 ಎಕರೆ ಭೂಮಿಯಲ್ಲಿನ ಅಡಿಕೆ ಹಾಗೂ ತೆಂಗಿನ ಗಿಡಗಳನ್ನು ತೆಗೆಸಿ ನಿಮ್ಮ ತಾಕತ್ತು ತೋರಿಸಿ. ಬಡವರ ಮೇಲೆ ದರ್ಪ ತೋರಿಸುವುದು ಸರಿಯೇ? ಕರ್ತವ್ಯ ಲೋಪವೆಸಗಿರುವ ವಲಯ ಅರಣ್ಯಾಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸಿ, ಅಲ್ಲಿಯವರೆಗೂ ಸತ್ಯಾಗ್ರಹ ಹಿಂಪಡೆಯುವುದಿಲ್ಲವೆಂದು ಬಿಗಿಪಟ್ಟು ಹಿಡಿದರು.
——————————————————————–
 ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವವರೆಗೂ ಅಮರಣ ಉಪವಾಸ ಸತ್ಯಾಗ್ರಹದಿಂದ ಮೇಲೆಳುವುದಿಲ್ಲ. ನಾನು ಒಂದು ಬಾರಿ ಹಠ ಹಿಡಿದು ಕುಳಿತರೆ, ಮೇಲೆ ಎದ್ದೇಳುವ ಮಾತೇ ಇಲ್ಲ. ಹಿಂದೆ ಸರಿದರೆ, ನನಗೆ ನಾನೇ ಅವಮಾನ ಮಾಡಿಕೊಂಡಂತೆ. ಇದನ್ನು( ಅರಣ್ಯ ಇಲಾಖೆಯ ಭೂಮಿ ಒತ್ತುವರಿ, ಅಕ್ರಮ ಗಣಿಗಾರಿಕೆ) ಕೆದಕುತ್ತಾ ಹೋದರೆ, ಇದರಲ್ಲಿ ದೊಡ್ಡ ದೊಡ್ಡವರ ಕೈಗಳೆ ಇವೆ. ಎಲ್ಲ ದಾಖಲೆಗಳನ್ನು ಸಂಗ್ರಹಿಸಿಕೊಂಡಿದ್ದು, ಲೋಕಾಯುಕ್ತರಿಗೆ ದೂರು ಕೊಡುವೆ. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ತಡವೇಕೆ? ನಾನು ಮಂತ್ರಿಯಾಗಿದ್ದ ಸಂದರ್ಭದಲ್ಲಿ ತಪ್ಪಿತಸ್ಥ ಅಧಿಕಾರಿಗಳನ್ನು ಒಂದು ನಿಮಿಷದಲ್ಲಿಯೇ ಸಸ್ಪೆಂಡ್ ಮಾಡಿಸಿದ್ದೇನೆ. ಬಡ ರೈತರು ಮತ್ತು ಪರಿಶಿಷ್ಟ ಜಾತಿಯ ಕೂಲಿ ಕಾರ್ಮಿಕರ ಮೇಲೆ ದರ್ಪ ಮೆರೆದಿರುವ ಹೊಸದುರ್ಗ ಅರಣ್ಯ ವಲಯ ಅಧಿಕಾರಿ ಸಸ್ಪೆಂಡ್ ಆಗಬೇಕು. ಬಡವರಿಗೆ ನ್ಯಾಯ ಸಿಗುವವರೆಗೂ ಉಪವಾಸ ಸತ್ಯಗ್ರಹದಿಂದ ಮೇಲೇಳುವುದಿಲ್ಲ.
  ಗೂಳಿಹಟ್ಟಿ ಡಿ.ಶೇಖರ್
ಮಾಜಿ ಶಾಸಕರು, ಹೊಸದುರ್ಗ ವಿಧಾನಸಭಾ ಕ್ಷೇತ್ರ.
[t4b-ticker]

You May Also Like

More From Author

+ There are no comments

Add yours