ಮೋದಿಗೆ ಜೈ ಎಂದ ಸುಮಲತಾ, ಕಮಲಕ್ಕೆ ಬಾಹ್ಯ ಬೆಂಬಲ

 

ಮಂಡ್ಯ: ರಾಜ್ಯ ರಾಜಕಾರಣದಲ್ಲಿ  ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh)​ ಅವರ ರಾಜಕೀಯ ನಡೆ ಬಹಿರಂಗವಾಗಿದ್ದು, ಸದ್ಯಕ್ಕೆ ಬಿಜೆಪಿ ಪಕ್ಷಕ್ಕೆ  ಬಾಹ್ಯ ಬೆಂಬಲ ಘೋಷಿಸಿದರು.

ಇಂದು  ಮಂಡ್ಯದ ಚಾಮುಂಡೇಶ್ವರಿಯಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಮಲತಾ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲ. ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ಮೋದಿ ನಾಯಕತ್ವವನ್ನು ನಾನು ನಂಬಿದ್ದೇನೆ. ಈ ಕಾರಣಕ್ಕಾಗಿ ನಾನು ಬಿಜೆಪಿಗೆ ನಾನು ಬೆಂಬಲಿಸುವುದಾಗಿ ಬಹಿರಂಗವಾಗಿ ಘೋಷಿಸಿದರು. ಒಂದು ವೇಳೆ ಈಗಾಗಲೇ ಬಿಜೆಪಿ ಸೇರಿದರೆ ಸಂಸದೆ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಅವರು ಕಾನೂನು ತೊಡಕು ಮಾಡಿಕೊಳ್ಳದಿರಲು ತೀರ್ಮಾನಿಸಿದ್ದು, ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಬದಲು ಬಾಹ್ಯ ಬೆಂಬಲ ಘೋಷಣೆ ಮಾಡಿದರು.

ಮಾಧ್ಯಮದವರ ಜೊತೆ ಮಾತನಾಡಿದ  ಸುಮಲತಾ ಅಂಬರೀಶ್‌, ಮಂಡ್ಯ ಜಿಲ್ಲೆಯಲ್ಲಿ ನಾಲ್ಕು ವರ್ಷಗಳಿಂದ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ದಾಖಲೆ ಸಮೇತ ಬಿಚ್ಚಿಟ್ಟ ಅವರು ಮೋದಿ ನಾಯಕತ್ವದಲ್ಲಿ ಮಾತ್ರವೇ ದೇಶದಲ್ಲಿ ಅಭಿವೃದ್ಧಿ ಸಾಧ್ಯ. ನನ್ನ ಹಲವು ಹೋಜನೆಗಳಿಗೆ ಕೇಂದ್ರದಿಂದ ಅಪಾರ ನೆರವು ಸಿಕ್ಕಿದೆ. ಮಂಡ್ಯದ ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಧಾರ ಮಾಡಿದ್ದೇನೆ. ಬದಲಾವಣೆಗಾಗಿ ನನಗೆ ಇನ್ನಷ್ಟು ಶಕ್ತಿಯ ಅಗತ್ಯವಿದೆ ಎಂದು ಹೇಳುವ ಮೂಲಕ ಬಾಹ್ಯ ಬೆಂಬಲ ಘೋಷಣೆ ಮಾಡಿದರು.

ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆಯಾಗುವುದಿಲ್ಲ. ಸದ್ಯ ಬಿಜೆಪಿ ಸೇರ್ಪಡೆಗೆ ಕೆಲವು ತಾಂತ್ರಿಕ ತೊಂದರೆಗಳಿವೆ. ಮೋದಿ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ಅಂಬರೀಶ್ ಹೆಸರಿಗೆ ಕಳಂಕ ತರುವ ಕೆಲಸ ನಾನು ಮಾಡುವುದಿಲ್ಲ. ಈ ಜನ್ಮದಲ್ಲಿ ನಾನೆಂದೂ ಕಳಂಕ ತರುವ ಕೆಲಸ ಮಾಡುವುದಿಲ್ಲ. ನಾನು ರಾಜಕಾರಣ ಬಿಡುತ್ತೇನೆ ಹೊರತು ಸ್ವಾಭಿಮಾನ ಬಿಡಲ್ಲ. ಪ್ರಾಣ ಬಿಟ್ಟರು ಕೂಡ ನಾನು ಮಂಡ್ಯ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಭಿಷೇಕ್​ ಅಂಬರೀಶ್ ರಾಜಕೀಯ ಪ್ರವೇಶ ಗೊಂದಲಗಳಿಗೆ ತೆರೆ

ಸುಮಾರು ಒಂದು ವರ್ಷದಿಂದ ಬಿಜೆಪಿಯವರು ನನಗೆ ಆಹ್ವಾನ ನೀಡಿದ್ದಾರೆ. ನಾನೆಂದೂ ಕುಟುಂಬ ರಾಜಕಾರಣ ಮಾಡೋದಿಲ್ಲ. ಅಭಿಷೇಕ್‌ಗೆ ನಾನು ಎಲ್ಲಿಯೂ ಟಿಕೆಟ್‌ ಕೇಳಲ್ಲ. ಇದು ಚಾಮುಂಡೇಶ್ವರಿ ತಾಯಿಯ ಮೇಲೆ ಆಣೆ. ನಾನು ರಾಜಕಾರಣದಲ್ಲಿ ಇರುವವರೆಗೂ ಅಭಿಷೇಕ್‌ ಅಂಬರೀಶ್‌ ರಾಜಕಾರಣಕ್ಕೆ ಬರುವುದಿಲ್ಲ. ನನ್ನ ಮಗನ ಭವಿಷ್ಯವನ್ನು ಚಾಮುಂಡಿ ತಾಯಿಯೇ ನೋಡಿಕೊಳ್ಳುತ್ತಾಳೆ. ಚುನಾವಣೆಗೆ ನಿಲ್ಲುವಂತೆ ಅಭಿಷೇಕ್‌ಗೆ ಎರಡು ಪಕ್ಷಗಳಿಂದ ಆಹ್ವಾನ ಬಂದಿತ್ತು. ಆದ್ರೆ, ನನ್ನ ಪುತ್ರ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಲ್ಲ. ನಾನು ಎಲ್ಲಿಯವರೆಗೂ ರಾಜಕೀಯದಲ್ಲಿ ಇರುತ್ತೇನೋ ಅಲ್ಲಿವರೆಗೂ ಅಭಿಷೇಕ್​ ರಾಜಕಾರಣಕ್ಕೆ ಬರಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು. ಈ ಮೂಲಕ ಪುತ್ರ ಅಭಿಷೇಕ್ ಅಂಬರೀಶ್ ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನುವ ಗೊಂದಲಗಳೀಗೆ ತೆರೆ ಎಳೆದರು.

[t4b-ticker]

You May Also Like

More From Author

+ There are no comments

Add yours