ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ: ಡಿಸಿ ಕವಿತಾ ಎಸ್.ಮನ್ನಿಕೇರಿ ಖಡಕ್ ಸೂಚನೆ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಆಗಸ್ಟ್ 01:
ವಿದ್ಯಾರ್ಥಿಗಳ ನಿಲಯಗಳ ವಿದ್ಯಾರ್ಥಿಗಳ ಆರೋಗ್ಯದ ದೃಷ್ಠಿಯಿಂದ ಆಹಾರ ತಯಾರಿಕೆ ಹಾಗೂ ಕುಡಿಯಲು ಶುದ್ಧವಾದ ನೀರು ಪೂರೈಕೆ ಮಾಡಬೇಕು ಹಾಗೂ ಉತ್ತಮ ಶುಚಿತ್ವ ಕಾಪಾಡಿಕೊಳ್ಳುವ ಮೂಲಕ ಸ್ವಚ್ಛತೆಗೆ ಅದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಬಿಸಿಎಂ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಲ್ಲ ವಿದ್ಯಾರ್ಥಿ ನಿಲಯಗಳು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿ ನಿಲಯ ನಿರ್ವಹಣೆ ಹಾಗೂ ಉತ್ತಮ ಆಹಾರ ತಯಾರಿಕೆ ಬಗ್ಗೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕಲ್ಯಾಣಾಧಿಕಾರಿಗಳು, ವಸತಿ ಶಾಲೆ ಪ್ರಾಂಶುಪಾಲರು, ವಿಸ್ತರಣಾಧಿಕಾರಿಗಳು, ನಿಲಯ ಮೇಲ್ವಿಚಾರಕು ಹಾಗೂ ಅಡುಗೆ ಸಿಬ್ಬಂದಿಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕಳೆದ 15 ದಿನಗಳಿಂದ 3 ಹಾಸ್ಟೆಲ್‍ಗಳಲ್ಲಿ ಮಕ್ಕಳು ಅಸ್ವಸ್ಥರಾಗಿದ್ದಾರೆ. ಹಾಸ್ಟೆಲ್‍ಗಳಿಗೆ ಬರುವಂತಹ ದಾಸ್ತಾನುಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಅವಶ್ಯಕತೆಗೆ ತಕ್ಕಂತೆ ವಸ್ತುಗಳನ್ನು ಖರೀದಿ ಮಾಡಬೇಕು. ಆತ್ಮತೃಪ್ತಿಗಾಗಿ ಕೆಲಸ ಮಾಡಿ ತೋರಿಕೆಗಾಗಿ ಕೆಲಸ ಮಾಡಬೇಡಿ ಎಂದು ಅಧಿಕಾರಿಗಳಿಗೆ  ಸೂಚಿಸಿದರು.
ಅಡುಗೆ ಮನೆಯನ್ನು ಸರಿಯಾದ ರೀತಿಯಲ್ಲಿ ಸ್ವಚ್ಛತೆಯಲ್ಲಿ ಇಟ್ಟುಕೊಳ್ಳಬೇಕು ಇಚ್ಛಾಶಕ್ತಿಯಿಂದ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ದಿನೇ ದಿನೇ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಸೊಳ್ಳೆಗಳಿಂದ ಡೆಂಗೀ ಜ್ವರ ಬರುತ್ತಿದೆ. ಅವುಗಳ ನಿಯಂತ್ರಣ ಮಾಡುವುದಕ್ಕಾಗಿ ಸ್ವಚ್ಛತೆ ಅಗತ್ಯವಾಗಿದೆ. ಹಾಸ್ಟೆಲ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಬೇಕು. ಇಲ್ಲವಾದರೆ ನಿಮ್ಮ ಮೇಲೆ ಕಾನೂನು ರೀತಿಯ ಕ್ರಮವನ್ನು ತೆಗೆದುಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಮಾತನಾಡಿ ಮಲೇರಿಯಾ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್‍ಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಮುಖ್ಯವಾಗಿ ಎಂದು ತಿಳಿಸಿದರು.
ಹಾಸ್ಟೆಲ್‍ಗಳಲ್ಲಿ  ದಾಸ್ತಾನು ವ್ಯವಸ್ಥೆ ಸರಿಯಾಗಿ ಮಾಡುತ್ತಿಲ್ಲ. ವಾರ್ಡನ್‍ಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಕಲಿಕೆಗಾಗಿ ಬಂದಿರುವ ಮಕ್ಕಳನ್ನು ತಮ್ಮ ಮಕ್ಕಳಂತೆ ಪಾಲನೆ-ಪೋಷಣೆ ಮಾಡಿ ಅವರಿಗೆ ಪಾಠಗಳನ್ನು ಹೇಳುವುದು ನಿಮ್ಮ ಜವಾಬ್ದಾರಿ ಕರ್ತವ್ಯವಾಗಿದೆ. ಹಾಸ್ಟೆಲ್‍ಗಳಲ್ಲಿರುವಂತಹ ವಿದ್ಯಾರ್ಥಿಗಳನ್ನು ಅಡುಗೆ ಕೆಲಸಗಳಿಗೆ ತೊಡಗಿಸಿಕೊಳ್ಳುವುದು ಹಾಗೂ  ಹಾಸ್ಟೆಲ್‍ಗಳಲ್ಲಿ ತಂಬಾಕು, ಎಲೆ, ಅಡಿಕೆ ಮತ್ತು ಧೂಮಪಾನಗಳನ್ನು ಮಾಡಬಾರದು ಎಂದು ಸಿಬ್ಬಂದಿ ವರ್ಗದವರಿಗೆ ಸೂಚಿಸಿದರು.
ಕಲುಷಿತ ನೀರಿನ ಬಗ್ಗೆ ಗಮನ ಹರಿಸಬೇಕು. ಶುದ್ಧವಾದ ತರಕಾರಿ ತಂದು ಊಟ ತಯಾರಿಸಬೇಕು. ಊಟ ತಯಾರಿಸುವ ಸಂದರ್ಭದಲ್ಲಿ ಹ್ಯಾಂಡ್‍ವಾಶ್ ಮಾಡಿಕೊಂಡು ಹ್ಯಾಂಡ್ ಕ್ಲೋಸ್ ತಲೆಗೆ ಟೋಪಿ ಹಾಕಿಕೊಂಡು ಅಡುಗೆಯನ್ನು ತಯಾರಿಸಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಪ್ರತಿ ಹಾಸ್ಟೆಲಿಗೆ ಭೇಟಿ ನೀಡಿ ಮಕ್ಕಳ ಜೊತೆಗೆ ಕುಂದು ಕೊರತೆಗಳನ್ನು ಚರ್ಚೆ ಮಾಡಬೇಕು ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜೆ.ಸಿ.ವೆಂಕಟೇಶಯ್ಯ ಮಾತನಾಡಿ ಹಾಸ್ಟೆಲ್‍ಗಳಲ್ಲಿ ಸ್ವಚ್ಛತೆ ಇಲ್ಲದೆ ಮಕ್ಕಳ ಮೇಲೆ ತೊಂದರೆಗಳಾಗುತ್ತಿವೆ. ಹಾಗಾಗಿ ಹಾಸ್ಟೆಲ್ ನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಸ್ವಚ್ಛತೆಗೆ ಹೆಚ್ಚು ಗಮನ ಹರಿಸಬೇಕು. ಹಾಜರಾತಿ ಸಮಯಪಾಲನೆ ಮಾಡಬೇಕು. ಹಾಸ್ಟೆಲ್‍ನಲ್ಲಿರುವಂತಹ ಮಕ್ಕಳ ಮೇಲೆ ಹೆಚ್ಚಿನ ಕಾಳಜಿಯನ್ನು ಹಾಗೂ ಪೋಷಣೆಯನ್ನು ಅಧಿಕಾರಿಗಳು ತೋರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂಹಾಸ್ಟೆಲ್‍ನ ವಾರ್ಡನ್‍ಗಳು ಅಡುಗೆ ಸಿಬ್ಬಂದಿ ವರ್ಗದವರು ಇದ್ದರು.
*********

 

 

[t4b-ticker]

You May Also Like

More From Author

+ There are no comments

Add yours