ಚಿತ್ರದುರ್ಗದಲ್ಲಿ ರೂ.45 ಕೋಟಿ ವೆಚ್ಚದ ನೂತನ ಹೈಟೆಕ್ ಬಸ್ ನಿಲ್ದಾಣ: ಎಂ.ಚಂದ್ರಪ್ಪ

 

 ಚಿತ್ರದುರ್ಗ ನಗರದಲ್ಲಿ ರೂ.45 ಕೋಟಿ ವೆಚ್ಚದ ನೂತನ ಹೈಟೆಕ್ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ,

********************
ವಿನೂತನ ವಿದ್ಯುತ್ ಚಾಲಿತ ಪವರ್ ಪ್ಲಸ್ ಬಸ್ ಉದ್ಘಾಟಿಸಿದ ಕೆಎಸ್‍ಆರ್‍ಟಿಸಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ
****************
ವರ್ಷದೊಳಗೆ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಪೂರ್ಣದ ಭರವಸೆ
*************
ಚಿತ್ರದುರ್ಗ(ಕರ್ನಾಟಕ ವಾರ್ತೆ)ಮಾ.24:
ಚಿತ್ರದುರ್ಗ ನಗರದಲ್ಲಿ ರೂ.45 ಕೋಟಿ ವೆಚ್ಚದಲ್ಲಿ ನೂತನ ಹೈಟೆಕ್ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಒಂದು ವರ್ಷದೊಳಗೆ ಅತ್ಯುತ್ತಮವಾದ ಬಸ್‍ನಿಲ್ದಾಣ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸÀಲಾಗುವುದು ಎಂದು ಹೊಳಲ್ಕೆರೆ ಶಾಸಕರು ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ಚಿತ್ರದುರ್ಗ ನಗರದಲ್ಲಿ ನೂತನ ಹೈಟೆಕ್ ಬಸ್ ನಿಲ್ದಾಣದ ಶಂಕುಸ್ಥಾಪನಾ ಸಮಾರಂಭ ಹಾಗೂ ವಿನೂತನ ವಿದ್ಯುತ್ ಚಾಲಿತ ಪವರ್ ಪ್ಲಸ್ ಬಸ್, ಅಂಬಾರಿ ಉತ್ಸವ್ ಸ್ಲೀಪರ್ ಬಸ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಹಳ್ಳಿಯಿಂದ ನಗರಕ್ಕೆ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಹಾಗೂ ಇತರೆ ನೌಕರರಿಗೆ ಇನ್ನೂ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಠಿಯಿಂದ 06 ಎಕರೆ ವಿಸ್ತೀರ್ಣದಲ್ಲಿ ಚಿತ್ರದುರ್ಗ ನಗರದಲ್ಲಿ ನೂತನ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ ರೂ. 45 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.  ಒಟ್ಟು ರೂ.90 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದರು.
ದಾವಣಗೆರೆಯಲ್ಲಿ ರೂ.126 ಕೋಟಿ, ತುಮಕೂರಿನಲ್ಲಿ ರೂ.100 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಮಾಡಲಾಗುತ್ತಿದ್ದು, ರಾಜ್ಯದ ಬೇರೆ ಬೇರೆ ಜಿಲ್ಲಾ ಕೇಂದ್ರಗಳಲ್ಲಿಯೂ ಅತ್ಯುತ್ತಮವಾದ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಎಲ್ಲ ವರ್ಗದ ಜನರಿಗೂ ಸರ್ಕಾರಿ ಬಸ್‍ಗಳು ಅನುಕೂಲವಾಗಲಿವೆ ಎಂದರು.
ಕೋವಿಡ್ ಸಂದರ್ಭದಲ್ಲಿ ಸಾವಿರಾರೂ ಕೋಟಿ ನಷ್ಟ ಉಂಟಾದರೂ ಕಳೆದ ನಾಲ್ಕು ವರ್ಷದ ಹಿಂದೆ ನಿಗಧಿಪಡಿಸಿದ ಬಸ್ ದರವನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ರಾಜ್ಯಾದ್ಯಂತ ವಿನೂತನ ಅತ್ಯುತ್ತಮ ಮಾದರಿಯ ವಿದ್ಯುತ್ ಚಾಲಿತ 350 ಬಸ್‍ಗಳನ್ನು  ಖರೀದಿ ಮಾಡಲಾಗಿದೆ. ಅದೇ ರೀತಿ ಸುಮಾರು 650ಕ್ಕೂ ಹೆಚ್ಚಿನ ಹೊಸ ಬಸ್‍ಗಳನ್ನು ಖರೀದಿ ಮಾಡಲಾಗಿದೆ. ಕೆಎಸ್‍ಆರ್‍ಟಿಸಿ ಸಂಸ್ಥೆಯ ಕಷ್ಟದಲ್ಲಿದ್ದರೂ ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ಗುಣಮಟ್ಟದ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಸಂಸ್ಥೆಯ ನೌಕರರಿಗೆ ಪ್ರತಿ ತಿಂಗಳು 1ನೇ ತಾರೀಖು ವೇತನ ಪಾವತಿ ಮಾಡಲಾಗುತ್ತಿದೆ.  ಸಂಸ್ಥೆಯ ನೌಕರರು ಅಪಘಾತದಲ್ಲಿ ಮೃತರಾದಾಗ ಪ್ರೀಮಿಯಂ ಕಟ್ಟದೇ ಇದ್ದರೂ ಬ್ಯಾಂಕ್ ಖಾತೆ ಇದ್ದರೆ ಸಾಕು, ಒಂದು ಕೋಟಿ ರೂ. ವಿಮೆ ಬರುವ ಕೆಲಸ ಮಾಡಲಾಗಿದೆ. ಸಂಸ್ಥೆಯ ಚಾಲಕರು ಹಾಗೂ ನಿರ್ವಾಹಕರಿಗೆ ಅಪಘಾತದಲ್ಲಿ ಕಾಲು-ಕೈ ಕಳೆದುಕೊಂಡರೆ ರೂ.40 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳಾದರೆ ರೂ.20 ಲಕ್ಷ ಕೊಡುವ ವಿನೂತನ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.  ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆಯಲ್ಲಿ ಲೋಪವಾಗಿದ್ದಕ್ಕಾಗಿ ಇದೇ ಸಂದರ್ಭದಲ್ಲಿ ವಿಷಾದ ವ್ಯಕ್ತಪಡಿಸಿದರು.


ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಮಾತನಾಡಿ, ಚಿತ್ರದುರ್ಗ ನಗರದಲ್ಲಿ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿರುವುದರಿಂದ ಹೈಟೆಕ್ ಬಸ್ ನಿಲ್ದಾಣದ ಅವಶ್ಯಕತೆ ತುಂಬಾ ಇದೆ. ಈ ಹೈಟೆಕ್ ಬಸ್ ನಿಲ್ದಾಣದಿಂದ ಬೆಂಗಳೂರು, ಹೊಸಪೇಟೆ, ಬಳ್ಳಾರಿ, ಚಳ್ಳಕೆರೆ ಕಡೆಯಿಂದ ಬರುವ ಬಸ್‍ಗಳಿಗೆ ಬಹಳ ಅನುಕೂಲವಾಗಲಿದೆ. ದಾವಣಗೆರೆ, ಶಿವಮೊಗ್ಗ ಕಡೆಯಿಂದ ಬರುವ ಬಸ್‍ಗಳಿಗೆ ಹಳೇ ಬಸ್ ನಿಲ್ದಾಣದಿಂದ ಅನುಕೂಲವಾಗಲಿದೆ.  ನೂತನ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಕಾಂಪ್ಲೆಕ್ಸ್ ನಿರ್ಮಾಣದಿಂದ ಸಾರಿಗೆ ಸಂಸ್ಥೆಗೆ ಹೆಚ್ಚು ಆದಾಯ ಬರಲಿದೆ.  ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರ ಶ್ರಮದ ಫಲವಾಗಿ ಇಂದು ದೇಶ ಹಾಗೂ ರಾಜ್ಯದಲ್ಲಿ ಅತ್ಯುತ್ತಮ ಅನೇಕ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗುತ್ತಿವೆ.  ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ ಪರ ನಿಲುವಿನಿಂದಾಗಿ ನಮ್ಮ ಭಾರತ ವಿದೇಶದಲ್ಲಿ ಗೌರವಯುತ ಸ್ಥಾನ ಪಡೆದುಕೊಂಡಿದ್ದು, ಅಭಿವೃದ್ಧಿ ಪಥದಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿದೆ ಎಂದರು.
ಸಾರಿಗೆ ವ್ಯವಸ್ಥೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮವು ರಾಷ್ಟ್ರದಲ್ಲಿಯೇ ನಂ.1 ಸ್ಥಾನದಲ್ಲಿದೆ. ಚಿತ್ರದುರ್ಗ ನಗರದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದ್ದು, ಆದಷ್ಟು ಶೀಘ್ರದದಲ್ಲಿಯೇ ಗುತ್ತಿಗೆದಾರರು ಬಸ್ ನಿಲ್ದಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ ಅವರು, ಹೈಟೆಕ್ ಬಸ್ ನಿಲ್ದಾಣದ ಹಿಂಭಾಗ ಕೆಎಸ್‍ಆರ್‍ಟಿಸಿ ಸಿಬ್ಬಂದಿಗೆ ವಸತಿ ಗೃಹ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು.
ಶಂಕುಸ್ಥಾಪನೆ ಫಲಕದಲ್ಲಿ ಶಿಷ್ಟಾಚಾರ ಪಾಲನೆಯಲ್ಲಿ ಲೋಪವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಜಿ.ಟಿ. ಸುರೇಶ್ ಅವರು ವೇದಿಕೆಯಿಂದ ನಿರ್ಗಮಿಸಿದ ಪ್ರಸಂಗ ಜರುಗಿತು. ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ನಗರಸಭೆ ಸದಸ್ಯೆ ತಾರಕೇಶ್ವರಿ, ರಾಜ್ಯ ರಸ್ತೆ ಸಾರಿಗೆ ನಿಗಮ ಮಂಡಳಿ ನಿರ್ದೇಶಕರಾದ ಪಿ.ರುದ್ರೇಶ್, ಆರುಂಡಿ ನಾಗರಾಜ್, ರಾಜು ವಿಠಲಸ ಜರತಾರಘರ, ವಿರೇಂದ್ರ ಶೆಟ್ಟರ್, ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿ ಮತ್ತು ಜಾಗೃತ ವಿಭಾಗ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್.ಹೆಬ್ಬಾಳ್ ಸೇರಿದಂತೆ ಮತ್ತಿತರರು ಇದ್ದರು.
[t4b-ticker]

You May Also Like

More From Author

+ There are no comments

Add yours