ಮಕ್ಕಳ ಬಿಸಿಯೂಟದಲ್ಲಿ ಕರ್ತವ್ಯ ನಿರ್ಲಕ್ಷ್ಯ : ಮುಖ್ಯ ಶಿಕ್ಷಕಿ ಅಮಾನತು

 

ಚಿತ್ರದುರ್ಗ ಸೆ. 14 :
ಶಾಲಾ ಮಕ್ಕಳ ಬಿಸಿಯೂಟ ಪೂರೈಕೆಯಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಚಿತ್ರದುರ್ಗದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಉಮ್ಮೇಸುಮಯ ಅವರನ್ನು ಅಮಾನತುಗೊಳಿಸಿ ಡಿಡಿಪಿಐ ಕೆ. ರವಿಶಂಕರ ರೆಡ್ಡಿ ಅವರು ಆದೇಶಿಸಿದ್ದಾರೆ.

ಚಿತ್ರದುರ್ಗದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಪಿ.ಎಂ. ಪೋಷಣ್ ಯೋಜನೆಯಡಿ ಸರ್ಕಾರಿ ಉರ್ದು ಶಾಲೆಯ 110 ಮಕ್ಕಳಿಗೆ ಹಾಗೂ ಮೌಲಾನಾ ಆಜಾದ್ ಶಾಲೆಯ 150 ಮಕ್ಕಳಿಗೆ ಸೆ. 12 ರಂದು ಮಧ್ಯಾಹ್ನ ಬಿಸಿಯೂಟ (ಅನ್ನ-ಸಾಂಬಾರ್) ಜೊತೆಗೆ ಶೇಂಗಾ ಚಿಕ್ಕಿ ವಿತರಿಸಲಾಗಿತ್ತು.  ಬಳಿಕ ಮಧ್ಯಾಹ್ನ 03. 30 ರ ನಂತರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 4 ಮಕ್ಕಳು ಹಾಗೂ ಮೌಲಾನಾ ಆಜಾದ್ ಶಾಲೆಯ 03 ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿ ವಾಂತಿ ಮಾಡಿಕೊಂಡು, ಅಸ್ವಸ್ಥರಾಗಿರುತ್ತಾರೆ.  ಇಲಾಖೆಯ ನಿರ್ದೇಶನದಂತೆ ಶಾಲಾ ಮಕ್ಕಳಿಗೆ ಮೊಟ್ಟೆ ಅಥವಾ ಮಕ್ಕಳು ಇಚ್ಛಿಸಿದಲ್ಲಿ ಬಾಳೆಹಣ್ಣು ನೀಡಬೇಕಿರುತ್ತದೆ, ಮೊಟ್ಟೆ ಬಾಳೆಹಣ್ಣು ಇಚ್ಛಿಸದ ಮಕ್ಕಳಿಗೆ ಶೇಂಗಾ ಚಿಕ್ಕಿ ನೀಡಬಹುದಾಗಿರುತ್ತದೆ.  ಆದರೆ ಸರ್ಕಾರಿ ಉರ್ದು ಶಾಲೆಯ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡುವ ಬದಲಿಗೆ ಗುಣಮಟ್ಟವಲ್ಲದ ಶೇಂಗಾ ಚಿಕ್ಕಿ ನೀಡಿದ್ದು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗಲು ಕಾರಣವಾಗಿರುತ್ತದೆ.  ಪಿ.ಎಂ. ಪೋಷಣ್ ಅಭಿಯಾನದಡಿ ಮಕ್ಕಳಿಗೆ ಬಿಸಿಯೂಟ ವಿತರಣೆ ಸಂಬಂಧ ಪಾಲಿಸಬೇಕಾಗಿರುವ ನಿಯಮಗಳು ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಇಲಾಖಾ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಬಾರಿ ಮಾರ್ಗದರ್ಶನ ನೀಡಲಾಗಿರುತ್ತದೆ.  ಆದಾಗ್ಯೂ ಕರ್ತವ್ಯದಲ್ಲಿ ನಿರ್ಲಕ್ಷತೆ ಹಾಗೂ ವಹಿಸಿದ ಕೆಲಸವನ್ನು ನಿರ್ವಹಿಸಲು ಬೇಜವಾಬ್ದಾರಿತನ ತೋರಿರುವುದು ಕಂಡುಬಂದಿದ್ದು, ಈ ಬಗ್ಗೆ, ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು.  ಆದರೆ, ನೋಟಿಸ್‍ಗೆ ಯಾವುದೇ ಲಿಖಿತ ಉತ್ತರ ಸಲ್ಲಿಸಿರುವುದಿಲ್ಲ.  ಈ ಎಲ್ಲ ಅಂಶಗಳನ್ನು ಪರಿಶೀಲಿಸಿ, ಚಿತ್ರದುರ್ಗದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಉಮ್ಮೇಸುಮಯ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ರವಿಶಂಕರ ರೆಡ್ಡಿ ಅವರು ಆದೇಶಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours