ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆ: ಅಗತ್ಯ ಸಿದ್ಧತೆ ಕೈಗೊಳ್ಳಿ: ಜಿಲ್ಲಾಧಿಕಾರಿ ದಿವ್ಯಾಪ್ರಭು ಜಿ.ಆರ್.ಜೆ

 

ಚಿತ್ರದುರ್ಗ,ಜ. 18(ಕರ್ನಾಟಕ ವಾರ್ತೆ):
ಇದೇ ಜನವರಿ 26ರಂದು ಆಚರಿಸಲ್ಪಡುವ ಭಾರತ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಭಾರತ ಗಣರಾಜ್ಯೋತ್ಸವ-2023 ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ಗಣರಾಜ್ಯೋತ್ಸವ ದಿನಾಚರಣೆಯು ದೇಶಪ್ರೇಮ, ದೇಶಭಕ್ತಿ ಹಾಗೂ ಭಾರತ ಸಂವಿಧಾನ ಆಚರಣೆಯ ಪ್ರತೀಕವಾಗಿದ್ದು, ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ವಿವಿಧ ಇಲಾಖೆಗಳು ಸಮನ್ವಯತೆಯಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಗಣರಾಜ್ಯೋತ್ಸವವನ್ನು ಆಚರಿಸಬೇಕು. ಇಲಾಖೆಯ ಅಧಿಕಾರಿಗಳಿಗೆ ನೀಡಿರುವ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.
ಭಾರತ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಜನವರಿ 26ರಂದು ಬೆಳಿಗ್ಗೆ 9ಕ್ಕೆ ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜು (ಮುರುಘ ರಾಜೇಂದ್ರ ಕ್ರೀಡಾಂಗಣ) ಮೈದಾನದಲ್ಲಿ ಆಚರಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುವರು ಎಂದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಆವರಣ ಸ್ವಚ್ಛಗೊಳಿಸಿ ಮೈದಾನದಲ್ಲಿ ಸ್ವಾಗತ ಕಮಾನುಗಳನ್ನು ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮಕ್ಕೆ ದೀಪಾಲಂಕಾರ, ಉತ್ತಮ ಧ್ವನಿವರ್ಧಕ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಗಣ್ಯರು ಕುಳಿತುಕೊಳ್ಳುವುದಕ್ಕೆ ಉತ್ತಮವಾದ ಆಸನ ವ್ಯವಸ್ಥೆ, ಆಸನಗಳ ಹತ್ತಿರ ನಾಮಫಲಕ, ತೋಟಗಾರಿಕೆ ಇಲಾಖೆಯಿಂದ ಹೆಚ್ಚಿನ ಆಕರ್ಷಣೆ ಉಳ್ಳ ಹೂವಿನ ಕುಂಡಗಳ ಪಡೆದು ಸಿಂಗರಿಸಬೇಕು. ಸ್ವಾತಂತ್ರ್ಯ ಹೋರಾಟಗಾರರು, ಅಧಿಕಾರಿಗಳು, ಮಾಧ್ಯಮದವರು ಆಸಿನರಾಗಲು ಪ್ರತ್ಯೇಕವಾಗಿ ಆಸನದ ವ್ಯವಸ್ಥೆ ಮಾಡಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ವೇದಿಕೆಯ ಮೇಲೆ ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ಸೂಕ್ತ ಕೈಗೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ಉಪವಿಭಾಗಾಧಿಕಾರಿಗಳ ಮುಂದಾಳತ್ವದಲ್ಲಿ ನಗರಸಭೆ ಹಾಗೂ ತಹಶೀಲ್ದಾರ್ ಅವರಿಗೆ ತಿಳಿಸಲಾಯಿತು.
ಭಾರತ ಗಣರಾಜ್ಯೋತ್ಸವದ ಪೆರೇಡ್ ವ್ಯವಸ್ಥೆಯನ್ನು ಏರ್ಪಡಿಸಲು ಕ್ರಮತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಅವರು, ಪೊಲೀಸ್ ಸಿಬ್ಬಂದಿ, ಹೋಂ ಗಾರ್ಡ್, ಅರಣ್ಯ ಇಲಾಖೆ, ಅಬಕಾರಿ, ಎನ್‍ಸಿಸಿ ಸೇರಿದಂತೆ ವಿವಿಧ ತುಕಡಿಗಳು ಪಥ ಸಂಚಲನಕ್ಕೆ ಸಜ್ಜುಗೊಳಿಸಲು ತಿಳಿಸಿದರು.
ಭಾರತ ಸೇವಾದಳದಿಂದ ತರಬೇತಿ ಹೊಂದಿದ ಶಿಕ್ಷಕರಿಗೆ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ, ಪ್ಯಾರಾ ಒಲಂಪಿಕ್‍ನಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಜಿಲ್ಲೆಯಲ್ಲಿ ಇದೇ ಮೊದಲಬಾರಿಗೆ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಪ್ರಗತಿಪರ ರೈತರಿಗೆ ಡಾಕ್ಟರೇಟ್ ಪದವಿ ನೀಡಲಾಗಿದ್ದು, ಡಾಕ್ಟರೇಟ್ ಪದವಿ ಪಡೆದ ಪ್ರಗತಿಪರ ರೈತರನ್ನು ಸನ್ಮಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಪಟ್ಟಿಯನ್ನು ಶೀಘ್ರವಾಗಿ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours