ಯುವ ಮತದಾರರ ಸೇರ್ಪಡೆಗೆ ಕ್ರಿಯಾ ಯೋಜನೆ ರೂಪಿಸಿ: ಡಾ.ಶಮ್ಲಾ ಇಕ್ಬಾಲ್

 

 

 

 

chitradurga:ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ನಡೆದಿದ್ದು, 17 ವರ್ಷ ಹಾಗೂ 18 ವರ್ಷ ತುಂಬಿರುವ ಎಲ್ಲ ಯುವ ಮತದಾರರನ್ನು ಮತದಾರರ ಪಟ್ಟಿಗೆ    (Electoral Roll)ಸೇರ್ಪಡೆಗೊಳಿಸಲು ಹಮ್ಮಿಕೊಳ್ಳಲಾಗುವ ಕಾರ್ಯಗಳ ಕುರಿತು ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಬೇಕು ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ಹಾಗೂ ಚಿತ್ರದುರ್ಗ ಜಿಲ್ಲೆಗೆ ಮತದಾರರ ಪಟ್ಟಿ ವೀಕ್ಷಕರಾಗಿರುವ ಡಾ. ಶಮ್ಲಾ ಇಕ್ಬಾಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ ಸಂಬಂಧ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ವೇಳಾಪಟ್ಟಿಯಂತೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ ಸೇರಿದಂತೆ ವಿವಿಧ ಹಕ್ಕು ಮತ್ತು ಆಕ್ಷೇಪಣೆ ಸಂಬಂಧದ ಅರ್ಜಿ ನಮೂನೆ ಸಲ್ಲಿಸಲು ಡಿಸೆಂಬರ್ 09 ರವರೆಗೂ ಕಾಲಾವಕಾಶ ನೀಡಲಾಗಿದೆ.  ಕಳೆದ ಜನವರಿ 01 ರಿಂದ ಅಕ್ಟೋಬರ್ 27 ರವರೆಗಿನ ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 46906 ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.  ಅ. 27 ರಿಂದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಪ್ರಾರಂಭಗೊಂಡಿದ್ದು, 2006 ರ ಡಿಸೆಂಬರ್ 31 ರವರೆಗೆ ಜನಿಸಿದವರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಲು ಅರ್ಹರಿದ್ದು, ಅಧಿಕಾರಿಗಳು ಕೇವಲ 18 ವರ್ಷ ಪೂರ್ಣಗೊಂಡವರಿಗೆ ಆದ್ಯತೆ ನೀಡುವುದರ ಜೊತೆ ಜೊತೆಗೆ 17 ವರ್ಷ ಪೂರ್ಣಗೊಂಡವರನ್ನೂ ಕೂಡ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ನಮೂನೆ-06 ಅರ್ಜಿ ಪಡೆದು, ಪ್ರಕ್ರಿಯೆ ಪ್ರಾರಂಭಿಸಬೇಕು.  ಇದಕ್ಕಾಗಿ ಜಿಲ್ಲೆಯ ಎಲ್ಲ ಕಾಲೇಜುಗಳು, ಐಟಿಐ, ಪಾಲಿಟೆಕ್ನಿಕ್, ಇಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು, ಹಾಗೂ ಆಯಾ ಕಾಲೇಜುಗಳ ಹಂತದಲ್ಲಿಯೇ ಅರ್ಜಿಗಳನ್ನು ವಿದ್ಯಾರ್ಥಿಗಳಿಂದ ಪಡೆಯಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಗೆ ಪ್ರಸಕ್ತ ಪರಿಷ್ಕರಣಾ ಅವಧಿಯಲ್ಲಿ 22 ಸಾವಿರ ಯುವ ಮತದಾರರನ್ನು ಸೇರ್ಪಡೆಗೊಳಿಸುವ ಗುರಿ ಇದ್ದು, ಇದನ್ನು ಸಾಧಿಸಲು ಆಯಾ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.  ಹೀಗಾಗಿ ಗುರಿ ಸಾಧನೆಗೆ ಕೈಗೊಳ್ಳಲಾಗುವ ಕಾರ್ಯಕ್ರಮಗಳ ಕುರಿತು ಕ್ರಿಯಾ ಯೋಜನೆ ರೂಪಿಸಿ, ಕೂಡಲೆ ಸಲ್ಲಿಸಬೇಕು, ನಿರ್ಲಕ್ಷ್ಯ ತೋರಿದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಾ. ಶಮ್ಲಾ ಇಕ್ಬಾಲ್ ಅವರು ಎಚ್ಚರಿಕೆ ನೀಡಿದರು.
ಅರ್ಜಿಗಳ ತ್ವರಿತ ವಿಲೇವಾರಿಗೆ ಸೂಚನೆ :
*********** ಕಳೆದ ಅಕ್ಟೋಬರ್ 27 ಕ್ಕೂ ಪೂರ್ವದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಮುಂತಾದವುಗಳಿಗ ಸಲ್ಲಿಸಿರುವ ಅರ್ಜಿಗಳ ಪೈಕಿ ಸುಮಾರು 15 ಸಾವಿರಕ್ಕೂ ಹೆಚ್ಚು ಅರ್ಜಿಗಳ ವಿಲೇವಾರಿ ಮಾಡುವುದು ಬಾಕಿ ಉಳಿದಿದ್ದು, ಎಲ್ಲ ತಹಸಿಲ್ದಾರರು ಕೂಡಲೆ ಅಂತಹ ಅರ್ಜಿಗಳನ್ನು ಪರಿಶೀಲಿಸಿ, ನಿಯಮಾನುಸಾರ ವಿಲೇವಾರಿ ಮಾಡಬೇಕು, ಇದರ ಜೊತೆಗೆ ಈಗ ನಡೆಯುತ್ತಿರುವ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನೂ ಕೂಡ, ಬಿಎಲ್‍ಒ ಗಳಿಂದ ವರದಿ ಪಡೆದು, ಅವುಗಳನ್ನೂ ಕೂಡ ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ತಹಸಿಲ್ದಾರರಿಗೆ ಸೂಚನೆ ನೀಡಿದರು.
ರಾಜಕೀಯ ಪಕ್ಷದವರು ಸಹಕರಿಸಿ :
***********ಚುನಾವಣಾ ಆಯೋಗದ ಸೂಚನೆಯಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಜರುಗಿದ್ದು, ಡಿ. 09 ರವರೆಗೂ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.  ಈ ಅವಧಿಯೊಳಗೆ ಹೆಸರು ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ ಮತ್ತಿತರ ಪ್ರಕ್ರಿಯೆ ಮಾಡಿಕೊಳ್ಳಬಹುದಾಗಿದ್ದು, ಅವಧಿ ಮುಗಿದ ಬಳಿಕ ಅವಕಾಶ ಇರುವುದಿಲ್ಲ.  ಡಿ. 02 ಮತ್ತು 03 ರಂದು ಜಿಲ್ಲೆಯಲ್ಲಿ ಮತದಾರರ ನೊಂದಣಿಗೆ ವಿಶೇಷ ಅಭಿಯಾನವನ್ನು ಹಮ್ಮಿಕೊಂಡು, ಅಧಿಕಾರಿಗಳು ಮತಗಟ್ಟೆಗಳಿಗೆ ಭೇಟಿ ನೀಡುವರು. ರಾಜಕೀಯ ಪಕ್ಷದವರು ಪ್ರತಿ ಬೂತ್ ಮಟ್ಟಕ್ಕೆ ಏಜೆಂಟರನ್ನು ನೇಮಿಸಿಕೊಂಡು, ಪಟ್ಟಿಯನ್ನು ಆಯಾ ತಹಸಿಲ್ದಾರರಿಗೆ ಸಲ್ಲಿಸಬೇಕು, ಅಂತಹ ಏಜೆಂಟರಿಗೆ ನಮೂನೆ-06, 07 ಮತ್ತು 08 ಅರ್ಜಿಗಳ ಬಳಕೆ ಬಗ್ಗೆ ಸೂಕ್ತ ಮಾಹಿತಿ ಹಾಗೂ ತರಬೇತಿ ನೀಡಬೇಕು. ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ಆಸಕ್ತಿ ವಹಿಸಬೇಕು.  ಚುನಾವಣಾ ಆಯೋಗ ನೀಡುವ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ರಾಜಕೀಯ ಪಕ್ಷದವರು ಸಹಕಾರ ನೀಡಬೇಕು ಎಂದರು.
14,01,830 ಮತದಾರರು :
*********ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಮಾತನಾಡಿ, ಪ್ರಕಟಿತ ಕರಡು ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ 6,98,024-ಪುರುಷ, 7,03,728-ಮಹಿಳೆ, 78- ಇತರೆ ಸೇರಿದಂತೆ ಒಟ್ಟು 14,01,830 ಮತದಾರರಿದ್ದಾರೆ.  ನಗರ-299, ಗ್ರಾಮೀಣ-1362 ಸೇರಿದಂತೆ ಒಟ್ಟು 1661 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  1510 ಜನ ಶಿಕ್ಷಕರು, 151 ಜನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.  ಈ ಹಿಂದೆ ಒಬ್ಬರು ಬಿಎಲ್‍ಒ  02-03 ಮತಗಟ್ಟೆ ನೋಡಿಕೊಳ್ಳುವ ಪರಿಸ್ಥಿತಿ ಇತ್ತು.  ಆದರೆ ಈಗ ಪ್ರತಿ ಮತಗಟ್ಟೆಗೆ ಒಬ್ಬರಂತೆ ಬಿಎಲ್‍ಒ ನೇಮಿಸಲಾಗಿದೆ. ಕಳೆದ ಜೂನ್ 05 ರಿಂದ ನ. 18 ರವರೆಗೆ ನಮೂನೆ 06, 07, 08 ಮತ್ತಿತರೆ ಒಟ್ಟು 79582 ಅರ್ಜಿಗಳು ಸಲ್ಲಿಕೆಯಾಗಿದ್ದು, 59815 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಪ್ರಸಕ್ತ ಪರಿಷ್ಕರಣೆ ಕಾರ್ಯಕ್ರಮದಲ್ಲಿ 5692 ಅರ್ಜಿಗಳು ಸಲ್ಲಿಕೆಯಾಗಿವೆ. ಕೇವಲ 18 ವರ್ಷ ತುಂಬಿದವರು ಮಾತ್ರವಲ್ಲದೆ, 17 ವರ್ಷ ಪೂರ್ಣಗೊಂಡವರಿಂದಲೂ ನಮೂನೆ-06 ಪಡೆದುಕೊಳ್ಳಲು ಬಿಎಲ್‍ಒ ಗಳಿಗೆ, ತಹಸಿಲ್ದಾರರಿಗೆ ಸೂಚನೆ ನೀಡಲಾಗಿದೆ. ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರನ್ನು ಪತ್ತೆ ಹಚ್ಚಿ, ಅಂತಹವರಿಗೆ ಪತ್ರ ಬರೆದು, ವಿವರಣೆ ಕೇಳಲಾಗುತ್ತಿದೆ, ಅಲ್ಲದೆ ಅಂತಹವರು ಯಾವುದಾದರೂ ಒಂದು ಮತಗಟ್ಟೆಯಲ್ಲಿ ಉಳಿಯುವಂತೆ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು, ಅವರ ಮನವಿಯನ್ನು ಬಿಎಲ್‍ಒ ಗಳ ಪರಿಶೀಲನೆ ಬಳಿಕ ಅನುಮೋದಿಸಲಾಗುವುದು ಎಂದರು.
ಕಾಲೇಜುಗಳಲ್ಲಿ ವಿಶೇಷ ಅಭಿಯಾನ :
********** ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಅವರು ಮಾತನಾಡಿ, ಯುವ ಮತದಾರರನ್ನು ಮತದಾರರ ಪಟ್ಟಿಗೆ ಹೆಚ್ಚು ಹೆಚ್ಚು ಸೇರ್ಪಡೆಗೊಳಿಸಲು, ಜಿಲ್ಲೆಯ ಎಲ್ಲ ಪದವಿ, ಡಿಪ್ಲೋಮಾ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ವಿಶೇಷ ಅಭಿಯಾನವನ್ನು ಆರಂಭಿಸಲಾಗಿದೆ, ಯುವಜನರಿಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿ.ಪಂ. ಸಿಇಒ ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ. ಕಾರ್ತಿಕ್, ಸೇರಿದಂತೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಸಿಲ್ದಾರರು, ಅಲ್ಲದೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

 

 

ದಿವ್ಯಪ್ರಭು ಜಿ.ಆರ್.ಜೆ., ಜಿಲ್ಲಾಧಿಕಾರಿ-
*************ಮತದಾರರ ಗುರುತಿನ ಕಾರ್ಡ್ ಕಳೆದುಹೋಗಿದ್ದಲ್ಲಿ ಅಥವಾ ತುಂಬಾ ಹಳೆಯದಾಗಿರುವ ಕಾರ್ಡ್ ಬದಲಿಗೆ ಹೊಸ ಕಾರ್ಡ್ ಪಡೆಯಬೇಕಿದ್ದಲ್ಲಿ, ಅಂತಹ ಮತದಾರರು, ನಮೂನೆ-08 ಅನ್ನು ಭರ್ತಿ ಮಾಡಿ ಆಯಾ ಬಿಎಲ್‍ಒ ಗಳಿಗೆ ಸಲ್ಲಿಸಬೇಕು.  ಅಂತಹವರಿಗೆ ಹೊಸ ಕಾರ್ಡ್ ಅನ್ನು ಉಚಿತವಾಗಿ ಪೋಸ್ಟ್ ಮೂಲಕ ಮತದಾರರ ಮನೆಗೆ ಅಂಚೆ ಮೂಲಕ ತಲುಪಿಸಲಾಗುವುದು. ಈ ಮೊದಲು 30 ರೂ. ಶುಲ್ಕ ಇತ್ತು, ಆದರೆ ಈಗ ಸಂಪೂರ್ಣ ಉಚಿತವಾಗಿ ತಲುಪಿಸಲಾಗುವುದು. ಡಿಟಿಪಿ ಸೆಂಟರ್‍ಗಳು ಅಥವಾ ಇತರೆ ಯಾವುದೇ ಬಗೆಯ ಕಂಪ್ಯೂಟರ್ ಸೆಂಟರ್‍ಗಳಲ್ಲಿ ಮತದಾರರ ಗುರುತಿನ ಕಾರ್ಡ್ ಪಡೆಯಲು ಅವಕಾಶವಿಲ್ಲ, ಈ ರೀತಿ ಪಡೆಯುವ ಯಾವುದೇ ಬಗೆಯ ಕಾರ್ಡ್‍ಗಳಿಗೆ ಮಾನ್ಯತೆ ನೀಡಲಾಗುವುದಿಲ್ಲ.  ಅಲ್ಲದೆ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ಮತದಾರರಿಗೂ, ಉಚಿತವಾಗಿ ಅಂಚೆ ಮೂಲಕ ಗುರುತಿನ ಕಾರ್ಡ್ ತಲುಪಿಸಲಾಗುವುದು.

[t4b-ticker]

You May Also Like

More From Author

+ There are no comments

Add yours