ಪಕ್ಷಕ್ಕಾಗಿ ದುಡಿದಿದ್ದು ಕಾಂಗ್ರೆಸ್ ಟಿಕೆಟ್ ನನಗೆ : ಯೋಗೇಶ್ ಬಾಬು

 

ಚಿತ್ರದುರ್ಗ: ತಳಮಟ್ಟದಿಂದ ಪಕ್ಷ ಸಂಘಟಿಸಿ ಹಂತ ಹಂತವಾಗಿ ಬೆಳೆದು ಬಂದಿದ್ದೇನೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡುವುದಾಗಿ ನಾಯಕರುಗಳು ನನಗೆ ಭರವಸೆ ನೀಡಿದ್ದಾರೆ. ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಬಲ ಸ್ಪರ್ಧಾಕಾಂಕ್ಷಿ ಬಿ.ಯೋಗೇಶ್‍ಬಾಬು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಬಂದವರಿಗೆ ಟಿಕೇಟ್ ಕೊಡಬೇಕೋ ಬೇಡವೋ ಎನ್ನುವುದನ್ನು ನಾಯಕರುಗಳು ತೀರ್ಮಾನ ಮಾಡುತ್ತಾರೆ. ಹಾಗಾಗಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗುವುದು ಖಚಿತ. ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಸಿಗಲ್ಲ. ಮೊಳಕಾಲ್ಮುರು ಕ್ಷೇತ್ರದಲ್ಲಿ ಕಾಂಗ್ರೆಸ್ ಸದೃಢವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿ ಕಾಂಗ್ರೆಸ್‍ನಿಂದ ಪಕ್ಷದಲ್ಲಿ ಕೆಲಸ ಮಾಡಿ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದೇನೆ. ಬಿಜೆಪಿ.ವಿರುದ್ದ ಅನೇಕ ಹೋರಾಟ ಮಾಡಿರುತ್ತೇನೆ. ಜಿಲ್ಲಾ ಪಂಚಾಯಿತಿ ಸದಸ್ಯನಾಗಿ 2018 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ನಂತರ ಮನೆಯಲ್ಲಿ ಕೂರಲಿಲ್ಲ. ಕ್ಷೇತ್ರಾದ್ಯಂತ ಸಂಚರಿಸಿ ಪಕ್ಷ ಸಂಘಟಿಸಿದ್ದೇನೆ. ಯಾರಿಗೆ ಆದ್ಯತೆ ಕೊಡಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಮೇಲೆ ಬಿ.ಶ್ರೀರಾಮುಲು ಕ್ಷೇತ್ರದ ಜನರ ಕೈಗೆ ಸಿಕ್ಕಿಲ್ಲ. ರಾಹುಲ್‍ಗಾಂಧಿ ಭಾರತ್ ಜೋಡೋ ಯಾತ್ರೆ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮೂರು ದಿನ ಸಂಚರಿಸಿದಾಗ ಭವ್ಯವಾಗಿ ಸ್ವಾಗತಿಸಿ ಅಭೂತಪೂರ್ವವಾಗಿ ಬೀಳ್ಕೊಡುಗೆ ಕೊಟ್ಟಿದ್ದೇನೆ. ಸೋಮಣ್ಣ, ತಿಪ್ಪೇಸ್ವಾಮಿ ಇವರುಗಳು ಪಕ್ಷದಿಂದ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಹೊರಗಿನಿಂದ ಬಂದವರಿಗೆ ಪಕ್ಷ ಯಾವುದೆ ಕಾರಣಕ್ಕೂ ಮಣೆ ಹಾಕುವುದಿಲ್ಲ ಎಂಬ ನಂಬಿಕೆಯಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ಹೆಚ್.ಅಂಜಿನಪ್ಪ, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಜಯಣ್ಣ ಮೊಳಕಾಲ್ಮುರು, ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಿರೆಡ್ಡಿ, ಅಶೋಕ್‍ನಾಯ್ಡು, ಪಾಪಣ್ಣ, ಜಗದೀಶ್, ಓಬಳೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಮ್ಮ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours