ಮಹದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ನೊಂದಣಿಗೆ ಅವಕಾಶ

 

ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹವನ್ನು ಆಗಸ್ಟ್ 23ರಂದು ಏರ್ಪಡಿಸಿದ್ದು, ಈ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲು ಬಯಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಗಸ್ಟ್ 23ರಂದು ಬೆಳಿಗ್ಗೆ 9.30 ರಿಂದ 9.50 ಗಂಟೆಯವರೆಗೆ ಸಲ್ಲುವ ಶುಭ ಲಗ್ನದಲ್ಲಿ ಉಚಿತ ಸಾಮೂಹಿಕ ವಿವಾಹ ನೆರವೇರಲಿದೆ. ವಧುವಿಗೆ ಚಿನ್ನದ ಮಾಂಗಲ್ಯ, ಬೆಳ್ಳಿ ಕಾಲುಂಗುರ, ಸೀರೆ-ರವಿಕೆ ಹಾಗೂ ವರನಿಗೆ ಪಂಚೆ, ಶರ್ಟ್, ಟವಲ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ವಧು ವರರ ಕಡೆಯವರು ತಲಾ 10 ಜನಕ್ಕೆ ಮೀರದಂತೆ ಭಾಗವಹಿಸಲು ಅವಕಾಶವಿದ್ದು, ಇವರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ.

ವರನಿಗೆ 21 ವರ್ಷ, ವಧುವಿಗೆ 18 ವರ್ಷ ಪೂರ್ಣಗೊಂಡಿರಬೇಕು. ಬಾಲ್ಯ ವಿವಾಹ ಹಾಗೂ ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ಈ ಹಿಂದೆ ಮದುವೆ ಆಗಿರದ ಬಗ್ಗೆ ಅವರು ವಾಸಿಸುವ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಂದ ರುಜುವಾತು ಪತ್ರ ಪಡೆದು ಸಲ್ಲಿಸಬೇಕು.

ನಿಗದಿತ ನಮೂನೆ ಅರ್ಜಿಯನ್ನು ಬೆಟ್ಟದ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಅವರಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯೊಂದಿಗೆ ವಯಸ್ಸಿನ ಬಗ್ಗೆ ಶಾಲೆಯಿಂದ ಪಡೆದ ದಾಖಲಾತಿ ಪತ್ರ ಅಥವಾ ಮೂಳೆ ತಜ್ಞರಿಂದ ಪಡೆದ ದೃಢೀಕರಣ ಪತ್ರ, ವಧು ಮತ್ತು ವರನ ಜೋಡಿಯ ಮೂರು ಭಾವಚಿತ್ರ, ವಧು ಮತ್ತು ವರನ ಜಾತಿಯ ಬಗ್ಗೆ ತಹಶೀಲ್ದಾರರಿಂದ ಪಡೆದ ದೃಢೀಕರಣ ಪತ್ರ, ಆಧಾರ್ ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರವನ್ನು ಲಗತ್ತಿಸಿ ಆಗಸ್ಟ್ 10ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು.

ಮಾಹಿತಿಗಾಗಿ 9480065393, 9113215342, 08225-272128 ಸಂಪರ್ಕಿಸುವಂತೆ ಪ್ರಾಧಿಕಾರದ ಕಾರ್ಯದರ್ಶಿ ಗೀತಾ ಹುಡೇದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours