ಪ್ರಧಾನಿ ನಿವಾಸದ ಮೇಲೆ ಡ್ರೋಣ್ ಹಾರಾಟ: ಕಟ್ಟೆಚ್ಚರ

 

ನವದೆಹಲಿ,ಜು.೩- ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಇತ್ತೀಚೆಗಷ್ಟೇ ಇ-ಮೇಲ್ ಬೆದರಿಕೆ ಬಂದ ಬೆನ್ನಲ್ಲೇ ನವದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದ ಮೇಲೆ ಡ್ರೋನ್ ಹಾರಾಟ ಶಂಕೆ ಹಿನ್ನೆಲೆಯಲ್ಲಿ ವಿಶೇಷ ಭದ್ರತಾ ಪಡೆ-ಎಸ್‌ಪಿಜಿ ಹಾಗು ದೆಹಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ.ಡ್ರೋನ್‌ನಂತೆ ಹಾರುವ ವಸ್ತುವೊಂದು ನಿಷೇಧಿತ ವಲಯವಾಗಿರುವ ದೆಹಲಿಯ ಪ್ರಧಾನಿ ನಿವಾಸದ ಮೇಲೆ ಇಂದು ಮುಂಜಾನೆ ೫ ಗಂಟೆಯ ಸುಮಾರಿಗೆ ಹಾರಾಟ ನಡೆಸಿದೆ. ಎಸ್‌ಪಿಜಿ ಸೇರಿದಂತೆ ವಿವಿಧ ಭದ್ರತಾ ಪಡೆಗಳಿಗೆ ಆತಂಕ ಸೃಷ್ಟಿಯಾದ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ೨೦ ಸ್ಲೀಪರ್ ಸೆಲ್‌ಗಳು ಕೆಲಸ ಮಾಡುತ್ತಿವೆ. ೨೦ ಕೆಜಿ ಆರ್‍ಡಿಎಕ್ಸ್ ಸಿದ್ಧವಾಗಿದೆ.ತಾನು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ ಅನಾಮಿಕ ವ್ಯಕ್ತಿಯಿಂದ ಇ-ಮೇಲ್ ಈ ಸಂದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಮುಂಬೈ ಘಟಕಕ್ಕೆ ಈ ಮಾಹಿತಿ ರವಾನೆ ಮಾಡಲಾಗಿತ್ತು.ಇದರ ನಡುವೆ ಇಂದು ಬೆಳಗ್ಗೆ ಡ್ರೋಣ್ ಮಾದರಿಯ ವಸ್ತು ಹಾರಾಟವಾದ ಹಿನ್ನೆಲೆಯಲ್ಲಿ ತಕ್ಷಣ ಎಚ್ಚೆತ್ತುಕೊಂಡ ಎಸ್‌ಪಿಜಿ ನಿವಾಸವನ್ನು ಸುತ್ತುವರಿದು ಯಾವುದೇ ವಸ್ತು ಹಾರಾಟ ಮಾಡದಂತೆ ನಿಷೇಧ ಏರಿದೆ. ಹಾರಾಟ ಮಾಡಿದ ವಸ್ತು ಯಾವುದು ಎನ್ನುವುದನ್ನು ಪತ್ತೆ ಹಚ್ಚುವ ಕೆಲಸದಲ್ಲಿ ಭದ್ರತಾ ಪಡೆಗಳು ತನಿಖೆ ಕೈಗೊಂಡಿವೆ ಡ್ರೋಣ್ ಮಾದರಿಯ ವಸ್ತು ಹಾರಾಟ ನಡೆಸಿದ ಮಾಹಿತಿ ಸಿಕ್ಕ ತಕ್ಷಣ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ ಯಾವುದೇ ವಸ್ತು ಅಲ್ಲಿ ಕಂಡುಬಂದಿಲ್ಲ ಎನ್ನಲಾಗಿದೆ. ಜೊತೆಗೆ ದೆಹಲಿ ಏರ್ ಟ್ರಾಫಿಕ್ ಕಂಟ್ರೋಲ್ ಮೂಲಕ ತಪಾಸಣೆ ನಡೆಸಲಾಗಿದೆ ಅದರಲ್ಲಿಯೂ ಯಾವುದೇ ಹಾರಾಟ ಪತ್ತೆ ಮಾಡಿಲ್ಲ ಎಂದು ಹೇಳಲಾಗಿದೆ.
ಡ್ರೋಣ್ ಮಾದರಿಯ ವಸ್ತುವಿನ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭದ್ರತೆ ಬಿಗಿಗೊಳಿಸಲಾಗಿದೆ” ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ದೆಹಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ವ್ಯಕ್ತಿಯೊಬ್ಬ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಮಾಡಿದ್ದ. ಬಳಿಕ ಆತನನ್ನು ಬಂಧಿಸಲಾಗಿತ್ತು.ಕರೆ ಮಾಡಿದ ವ್ಯಕ್ತಿ ವೃತ್ತಿಯಲ್ಲಿ ಬಡಗಿಯಾದ್ದು, ಪೊಲೀಸ್ ನಿಯಂತ್ರಣ ಕೊಠಡಿಗೆ ಎರಡು ಬಾರಿ ಕರೆ ಮಾಡಿದ್ದ. ಆತನ ಕುಟುಂಬಸ್ಥರ ಹೇಳಿಕೆ ಪ್ರಕಾರ, ಆರೋಪಿ ಮದ್ಯವ್ಯಸನಿಯಾಗಿದ್ದು, ಅಮಲೇರಿದ ಸ್ಥಿತಿಯಲ್ಲಿ ಕರೆಗಳನ್ನು ಮಾಡಿದ್ದಾನೆ ಎಂದು ಹೇಳಿದ್ದರು. ವಿಚಾರಣೆಯ ವೇಳೆ ಇದು ಸಾಬೀತಾಗಿತ್ತು.
ಬೆದರಿಕೆ ಪತ್ರದಲ್ಲಿ ಏನಿತ್ತು
ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಕೆಲವು ಉಗ್ರರನ್ನು ಭೇಟಿ ಮಾಡಿದ್ದೇನೆ. ಅವರು ಆರ್‍ಡಿಎಕ್ಸ್ ಪಡೆಯಲು ಸಹಾಯ ಮಾಡಿದ್ದಾರೆ. ಸುಲಭವಾಗಿ ಬಾಂಬ್ ಸಿಕ್ಕಿದ್ದೂ ಈ ವಿಚಾರದಲ್ಲಿ ಖುಷಿ ಇದೆ. ಎಲ್ಲ ಕಡೆಯೂ ಬಾಂಬ್ ಸ್ಫೋಟಿಸಲಾಗುವುದು. ಹತ್ಯೆ ಮಾಡುತ್ತೇವೆ ಎನ್ನುವ ಅನಾಮಿಕ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಹತ್ಯೆಗೆ ಯೋಜನೆ ರೂಪಿಸಲಾಗಿದೆ. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೇವೆ. ದೇಶಾದ್ಯಂತ ರಕ್ತಪಾತ ಹರಿಸುತ್ತೇವೆ ಎಂದು ಮಾಹಿತಿ ಹಂಚಿಕೊಳ್ಳಲಾಗಿತ್ತು ಎನ್ನಲಾಗಿದೆ.

[t4b-ticker]

You May Also Like

More From Author

+ There are no comments

Add yours