ಎದೆಗುಂದದೆ ಪ್ರತಿ ಮನೆ ಮನೆಗೆ ಹೋಗಿ ಧೈರ್ಯವಾಗಿ ಬಿಜೆಪಿ.ಗೆ ಮತ ಕೇಳಿ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ಕಾರ್ಯಕರ್ತರಿಗೆ ಮುಜುಗರವಾಗುವ ಯಾವ ಕೆಲಸವನ್ನು ಮಾಡಿಲ್ಲ. ಎದೆಗುಂದದೆ ಪ್ರತಿ ಮನೆ ಮನೆಗೆ ಹೋಗಿ ಧೈರ್ಯವಾಗಿ ಬಿಜೆಪಿ.ಗೆ ಮತ ಕೇಳಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕರೆ ನೀಡಿದರು.
ಕೆಳಗೋಟೆಯಲ್ಲಿರುವ ಅಂಬಾ ಭವಾನಿ ದೇವಸ್ಥಾನದಲ್ಲಿ ಬಿಜೆಪಿ. ನಗರ ಮಂಡಲ ವತಿಯಿಂದ ನಡೆದ ಬೂತ್ ವಿಜಯ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದ ಶಾಸಕರು ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಅತ್ಯಂತ ಮಹತ್ವವಾದುದು. ಬೇರೆ ಯಾವ ಪಕ್ಷಗಳಲ್ಲಿಯೂ ಇಂತಹ ವ್ಯವಸ್ಥೆಯಿಲ್ಲ. ಶೇ.51 ರಷ್ಟು ಮತಗಳನ್ನು ಪಡೆದರೆ ಅಂತಹ ಬೂತ್ ಗೆದ್ದಂತೆ. ಕೆಲವು ಬೂತ್‍ಗಳಲ್ಲಿ ಕಳೆದ ಚುನಾವಣೆಯಲ್ಲಿ ಹಿನ್ನೆಡೆ ಯಾಕಾಯಿತು, ನೂನ್ಯತೆಗಳೇನು ಎನ್ನುವುದನ್ನು ತಿಳಿದುಕೊಂಡು ಸರಿಪಡಿಸುವ ಕೆಲಸ ಮಾಡಿಕೊಂಡು ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳನ್ನು ಗೆದ್ದುಕೊಳ್ಳೋಣ ಎಂದು ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದರು.
ಚಿತ್ರದುರ್ಗ ನಗರ, ಗ್ರಾಮಾಂತರ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಗಳಲ್ಲಿ 287 ಬೂತ್‍ಗಳಿದ್ದು, ಎಲ್ಲಾ ಬೂತ್‍ನಲ್ಲಿಯೂ ವಿಜಯ ಅಭಿಯಾನ ನಡೆದಿದೆ. ಬೂತ್‍ಗಳ ಕಡೆ ಹೆಚ್ಚಿನ ಗಮನ ಕೊಡುವಂತೆ ಪಕ್ಷ ಸೂಚಿಸಿದೆ. ಜ.21 ರಿಂದ ಬೂತ್ ವಿಜಯ ಸಂಕಲ್ಪ ಯಾತ್ರೆ ಆರಂಭಗೊಳ್ಳಲಿದೆ. ನಗರದ ಸ್ಲಂಗಳಲ್ಲಿ ಹನ್ನೆರಡು ಸಾವಿರ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ಕೊಡುತ್ತಿದ್ದೇವೆ. ಎಂಟೊಂಬತ್ತು ಲಕ್ಷ ರೂ.ಗಳನ್ನು ನೀಡಿ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಹಾಗಾಗಿ ಕಾರ್ಯಕರ್ತರು ನಿರಾಶರಾಗುವುದು ಬೇಡ. ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಅವಕಾಶ ಸಿಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ನಾಮನಿರ್ದೇಶನ ಮಾಡಲಾಗುವುದು. ಕಾಂಗ್ರೆಸ್‍ನಲ್ಲಿ ಅನೇಕ ವಂಚನೆಯಾಗಿದೆ. 2013 ರಲ್ಲಿ ಚಿತ್ರದುರ್ಗಕ್ಕೆ ಮಂಜೂರಾದ ಮೆಡಿಕಲ್ ಕಾಲೇಜನ್ನು ಬೇರೆಡೆ ವರ್ಗಾಯಿಸಲಾಯಿತು. ಆದರೆ ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರ ಅಧಿಕಾರದಲ್ಲಿ ಮೆಡಿಕಲ್ ಕಾಲೇಜು ಕಟ್ಟಡ ಆರಂಭಗೊಳ್ಳಲಿದೆ ಎಂದು ಹೇಳಿದರು.
ಬೂತ್ ವಿಜಯ ಅಭಿಯಾನದ ಸಂಚಾಲಕ ಮಲ್ಲಿಕಾರ್ಜುನ್ ಮಾತನಾಡುತ್ತ ಹತ್ತು ದಿನಗಳ ಕಾಲ ಜಿಲ್ಲೆಯಲ್ಲಿ ಬೂತ್ ಅಭಿಯಾನ ನಡೆಯಿತು. ಎಲ್ಲೆಡೆ ಜನರ ಸ್ಪಂದನೆ ಸಿಕ್ಕಿದೆ. ವಿಧಾನಸಭೆ ಚುನಾವಣೆಗೆ ಇದು ದಿಕ್ಸೂಚಿಯಾಗಿದೆ. ಹಿಂದೆ ಮಾಡಿದ ಬೂತ್ ಸಮಿತಿಯನ್ನು ಪರಿಶೀಲಿಸಿದ್ದೇವೆ. 45 ಬೂತ್‍ನಲ್ಲಿ ಕಾರ್ಯಕರ್ತರ ಉತ್ಸಾಹವಿದೆ. ಬೂತ್ ಮಟ್ಟದಲ್ಲಿ ಸಂಘಟನೆಯಾಗಬೇಕು. ಪೇಜ್ ಪ್ರಮುಖ್, ಮನ್‍ಕಿಬಾತ್ ಲಿಂಕ್ ಮಾಡಿ ಪ್ರತಿ ಮನೆ ಮನೆಗೆ ಧ್ವಜಗಳನ್ನು ಕಟ್ಟಲಾಗಿದೆ. ಚಿತ್ರದುರ್ಗ ನಗರ ಸೇರಿದಂತೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಉತ್ತಮ ಗುಣಮಟ್ಟದ ರಸ್ತೆ, ನೀರು, ಬೀದಿ ದೀಪದ ವ್ಯವಸ್ಥೆ ಕಲ್ಪಿಸಿದ್ದಾರೆ. ದೇಶದ ಪ್ರಧಾನಿ ಮೋದಿರವರು ಕಪ್ಪುಚುಕ್ಕೆಯಿಲ್ಲದ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತಿಳಿಸಿ ಎಂದು ಮನವಿ ಮಾಡಿದರು.
ಬೂತ್ ವಿಜಯ ಅಭಿಯಾನ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ ಮಾತನಾಡಿ ಕೇಂದ್ರ ಮತ್ತು ರಾಜ್ಯದ ಅಭಿವೃದ್ದಿ ಕೆಲಸಗಳು ಎಲ್ಲರ ಕಣ್ಣಿಗೆ ಕಾಣುತ್ತಿವೆ. ಚಿತ್ರದುರ್ಗದಲ್ಲಿ ಶಾಸಕರು ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಬೇರೆ ಯಾರು ಮಾಡಿಲ್ಲ. ಈ ಬಾರಿಯ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಜಿ.ಹೆಚ್.ತಿಪ್ಪಾರೆಡ್ಡಿರವರನ್ನು ಗೆಲ್ಲಿಸಿ ಎದುರಾಳಿಗಳು ಧೂಳಿಪಟವಾಗುವ ರೀತಿಯಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕೆಂದು ವಿನಂತಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿಗಳಾದ ಜೈಪಾಲ್, ನರೇಂದ್ರ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್‍ಸಿದ್ದಾಪುರ, ಉಪಾಧ್ಯಕ್ಷೆ ಚಂದ್ರಿಕಾ ಲೋಕನಾಥ್ ವೇದಿಕೆಯಲ್ಲಿದ್ದರು.
ಸಂಪತ್‍ಕುಮಾರ್, ಶಿವಣ್ಣಾಚಾರ್, ನಾಗರಾಜ್‍ಬೇದ್ರೆ, ನಗರಸಭೆ ಸದಸ್ಯ ಹರೀಶ್, ರವಿಕುಮಾರ್, ಕವನ, ರಾಮು, ಕಿರಣ್, ಕೃಷ್ಣ, ಉಷಭಾಯಿ ಸೇರಿದಂತೆ ಬೂತ್ ಅಧ್ಯಕ್ಷರು, ಶಕ್ತಿ ಕೇಂದ್ರದ ಪ್ರಮುಖರು, ಕಾರ್ಯಕರ್ತರು ಸಮಾರೋಪ ಸಮಾರಂಭದಲ್ಲಿ ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours