ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಡಿ.9 ಕೊನೆಯ ದಿನ

 

 

 

 

 ವಿಧಾನ ಪರಿಷತ್ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ: ಕರಡು ಮತದಾರರ ಪಟ್ಟಿ ಪ್ರಕಟ
ಚಿತ್ರದುರ್ಗ23:ವಿಧಾನಪರಿಷತ್ತಿನ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ನೊಂದಣಿ ನಿಯಮಗಳು, 1960ರ ನಿಯಮಾವಳಿಗನುಸಾರವಾಗಿ ಸಿದ್ದಪಡಿಸಿರುವ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ( Smt. Divya Prabhu GRJ)ಬಿಡುಗಡೆಗೊಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಿ, ಮಾತನಾಡಿದ ಜಿಲ್ಲಾಧಿಕಾರಿಗಳು, ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಗುರುವಾರದಂದು ಪ್ರಕಟಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ತಹಶೀಲ್ದಾರ್‍ಗಳ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು, ಕಚೇರಿ ವೇಳೆಯಲ್ಲಿ ಪರಿಶೀಲನೆಗೆ ದೊರೆಯುತ್ತದೆ ಎಂದರು.
ಮತದಾರರ ಪಟ್ಟಿಯ ತಯಾರಿಕೆಗಾಗಿ 2023ರ ನವೆಂಬರ್ 01 ಅರ್ಹತಾ ದಿನಾಂಕವಾಗಿರುತ್ತದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು, ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಅಂತಹವುಗಳನ್ನು 2023ರ ನವೆಂಬರ್ 23 ರಿಂದ ಡಿಸೆಂಬರ್ 09 ರೊಳಗಾಗಿ ಚುನಾವಣಾ ಆಯೋಗವು ನಿಗದಿಪಡಿಸಿರುವ ನಮೂನೆಯಲ್ಲಿ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ನಿರ್ಧಿಷ್ಟಾಧಿಕಾರಿಗಳಲ್ಲಿ ಸಲ್ಲಿಸಬಹುದಾಗಿದೆ. ಇದುವರೆಗೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸದೇ ಇರುವವರು, ಹೆಸರು ನೊಂದಣಿಗೆ ಈ ಅವಕಾಶ ಬಳಸಿಕೊಳ್ಳಬೇಕು ಎಂದರು.
ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ  ಚುನಾವಣೆ-2024ರ ಸಂಬಂಧ 2023 ರ ನವೆಂಬರ್ 21 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ನವೆಂಬರ್ 23 ರಿಂದ ಡಿಸೆಂಬರ್ 9 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಡಿಸೆಂಬರ್ 25 ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು. ಡಿಸೆಂಬರ್ 30ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದರು.
ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ  ಚುನಾವಣೆಗೆ ಸಂಬಂಧಪಟ್ಟಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತದಾರರ ನೋಂದಣಾಧಿಕಾರಿಗಳಾಗಿರುತ್ತಾರೆ. ಜಿಲ್ಲಾಧಿಕಾರಿಗಳು ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ.

 

 

ಜಿಲ್ಲೆಯಲ್ಲಿ 4271 ಶಿಕ್ಷಕ ಮತದಾರರು: ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿಯಂತೆ ಚಿತ್ರದುರ್ಗ ಜಿಲ್ಲೆಯಲ್ಲಿ 3003 ಪುರುಷರು, 1268 ಮಹಿಳೆಯರು ಸೇರಿದಂತೆ ಒಟ್ಟು 4271 ಶಿಕ್ಷಕ ಮತದಾರರು ಇದ್ದಾರೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 244, ಚಳ್ಳಕರೆ 828, ಚಿತ್ರದುರ್ಗ 1421, ಹಿರಿಯೂರು 759, ಹೊಸದುರ್ಗ 628 ಹಾಗೂ ಹೊಳಲ್ಕೆರೆಯಲ್ಲಿ 391 ಮತದಾರರು ಇದ್ದಾರೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕಳೆದ ಬಾರಿ ಚಿತ್ರದುರ್ಗ ಜಿಲ್ಲೆಯಲ್ಲಿ 3650 ಶಿಕ್ಷಕಕರು ಮತದಾರರು ಇದ್ದರು. ಈ ಬಾರಿ ಜಿಲ್ಲೆಯಲ್ಲಿ 4271 ಶಿಕ್ಷಕ ಮತದಾರರು ನೊಂದಣಿಯಾಗಿದ್ದಾರೆ ಎಂದು ತಿಳಿಸಿದ ಅವರು,  ಕಳೆದ ಆರು ವರ್ಷಗಳಲ್ಲಿ, ಕನಿಷ್ಟ ಮೂರು ವರ್ಷಗಳು ಪ್ರೌಢಶಾಲೆ ಹಾಗೂ ನಂತರದ ಹಂತದ ಕಾಲೇಜುಗಳು, ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ ಕಾಲೇಜುಗಳಲ್ಲಿ (ಅಧಿಕೃತ ಶಾಲಾ ಕಾಲೇಜುಗಳ ಪಟ್ಟಿಯಲ್ಲಿರುವ) ಬೋಧನಾ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ನೊಂದಣಿಗೆ ಅರ್ಹರು. 2020ನೇ ಸಾಲಿನಿಂದೀಚೆಗೆ ನಿವೃತ್ತಿಯಾಗಿದ್ದರೂ ಸಹ ಶಿಕ್ಷಕರ ಕ್ಷೇತ್ರ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಹರಿರುತ್ತಾರೆ.  ಅತಿಥಿ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರು ನೊಂದಣಿಗೆ ಅರ್ಹರಲ್ಲ.  ಹೆಚ್ಚಿನ ವಿವರಗಳು  www.ceokarnataka.kar.nic.in ವೆಬ್‍ಸೈಟ್‍ನಲ್ಲಿ ಲಭ್ಯವಿರುತ್ತದೆ ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಟಿ.ಯಶವಂತ್ ಕುಮಾರ್, ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಬಿಎಸ್‍ಪಿ ತಾಲ್ಲೂಕು ಘಟಕದ ಉಪಾಧ್ಯಕ್ಷೆ ಲಕ್ಷ್ಮಮ್ಮ ಸೇರಿದಂತೆ ಚುನಾವಣಾ ಶಾಖೆಯ ಮಲ್ಲಿಕಾರ್ಜುನ್, ಸಿಬ್ಬಂದಿ ವರ್ಗದವರು ಇದ್ದರು.

=======

[t4b-ticker]

You May Also Like

More From Author

+ There are no comments

Add yours