ಬೆಳೆಹಾನಿ ಪರಿಶೀಲನೆ: ಬೆಳೆಹಾನಿ ಪರಿಹಾರ ವಿತರಣೆಗೆ ಶೀಘ್ರ ಕ್ರಮ:ಕಂದಾಯ ಸಚಿವ ಆರ್.ಅಶೋಕ

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಆ.10:
ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಎಡಬಿಡದೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಯನ್ನು ಕಂದಾಯ ಸಚಿವರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾದ ಆರ್.ಅಶೋಕ ಬುಧವಾರ ಪರಿಶೀಲಿಸಿದರು.
ಚಿತ್ರದುರ್ಗ ತಾಲ್ಲೂಕಿನ ಓಬವ್ವನಾಗತಿಹಳ್ಳಿ ಹಾಗೂ ದೊಡ್ಡ ಆಲಘಟ್ಟ ಗ್ರಾಮ ರೈತರ ಮುಸುಕಿನ ಜೋಳದ ಜಮೀನಿಗಳಿಗೆ ಭೇಟಿ ನೀಡಿ ಬೆಳೆಹಾನಿ ಪ್ರದೇಶವನ್ನು ವೀಕ್ಷಿಸಿದ ಅವರು, ರೈತರು ಹಾಗೂ ಅಧಿಕಾರಿಗಳಿಂದ ಬೆಳೆಹಾನಿ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.


ನಂತರ ಮಾತನಾಡಿದ ಸಚಿವ ಆರ್.ಅಶೋಕ, ಮಳೆಯಿಂದ ಉಂಟಾದ ಬೆಳೆಹಾನಿ ಸರ್ವೇ ನಡೆಸಿ ಮಾಹಿತಿ ನೀಡಿದರೆ, ಆದಷ್ಟು ಶೀಘ್ರದಲ್ಲಿ ತಿಂಗಳೊಳಗೆ ಬೆಳೆಹಾನಿ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಕಂದಾಯ ಸಚಿವರು ಭರವಸೆ ನೀಡಿದರು.
ಬೆಳೆಹಾನಿಯಿಂದಾಗಿ ರೈತರು ಕಂಗಲಾಗಿದ್ದಾರೆ. ಬೆಳೆಹಾನಿಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದು, ಬೆಳೆ ಪರಿಹಾರ ಮೊತ್ತವನ್ನು ಮುಖ್ಯಮಂತ್ರಿಗಳು ಡಬಲ್ ಮಾಡಿದ್ದಾರೆ. ಹೆಕ್ಟೇರ್‍ಗೆ ರೂ.13,800 ಹೆಚ್ಚಳ ಮಾಡಲಾಗಿದೆ. ಬೆಳೆಹಾನಿ ಸಮೀಕ್ಷೆ ನಡೆಸಿ ಆಪ್‍ನಲ್ಲಿ ಅಪ್‍ಲೊಡ್ ಮಾಡಿದ ತಕ್ಷಣ ಪರಿಹಾರ ನೀಡುತ್ತೇವೆ. ಮಧ್ಯವರ್ತಿಗಳ ಕಾಟತಪ್ಪಿಸಿ, ರೈತರ ಖಾತೆಗೆ ನೇರವಾಗಿ ಪರಿಹಾರದ ಹಣ ಜಮಾ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಯಾವುದೇ ಮಾನವಹಾನಿ ಸಂಭವಿಸಿಲ್ಲ. ಹೊಳಲ್ಕೆರೆ ತಾಲ್ಲೂಕಿನನಲ್ಲಿ 4 ಮೇಕೆಗಳು ಸತ್ತಿದ್ದು, ಪರಿಹಾರವನ್ನು ತಕ್ಷಣವೇ ವಿತರಿಸಲಾಗಿದೆ. 444 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಖಉಖಊಅಐ ಮೂಲಕ ಪರಿಹಾರ ನೀಡಲು ಕ್ರಮ ವಹಿಸಲಾಗಿದೆ. ಒಟ್ಟು 35568.41 ಹೆಕ್ಟೇರ್ ಕೃಷಿ ಭೂಮಿ, 1843.13 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಉಂಟಾಗಿದೆ. ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ 24*7 ಸಹಾಯವಾಣಿ ಆರಂಭಿಸಲಾಗಿದೆ. ಜಿಲ್ಲಾ ವ್ಯಾಪ್ತಿಯ ಎಲ್ಲಾ ಕೆರೆ, ಕಟ್ಟೆ, ಜಲಕಾಯಗಳ ಮಾಲೀಕತ್ವ ಹೊಂದಿರುವ ಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ, ವಾಸ್ತವಾಂಶದ ವರದಿ ಪಡೆಯಲಾಗಿದೆ. ಆಗ್ಗಿಂದಾಗ್ಗೆ ಭೇಟಿ ನೀಡಿ, ನೀರಿನ ಶೇಖರಣೆಯ ಪ್ರಮಾಣದ ಬಗ್ಗೆ ಸ್ಥಳೀಯರಿಗೆ ಅರಿವು ಮೂಡಿಸಲು ಹಾಗೂ ನೀರಿನ ಹೊರ ಹರಿವಿನಿಂದ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಇಂಜಿನಿಯರ್‍ಗಳಿಗೆ ಮಳೆಯಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಎಲ್ಲಾ ರಸ್ತೆ ಮತ್ತು ಸೇತುವೆಗಳ ಸುಸ್ಥಿತಿಯಲ್ಲಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು, ಮಳೆಯಿಂದ ಹಾನಿ ಉಂಟಾದಲ್ಲಿ ದುರಸ್ಥಿ ಕಾರ್ಯವನ್ನು ತುರ್ತಾಗಿ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಜಿಲ್ಲಾ ವ್ಯಾಪ್ತಿಯಲ್ಲಿ ಮಳೆಯಿಂದ ಉಂಟಾದ ಮನೆ ಮತ್ತು ಬೆಳೆ ಹಾನಿಯ ಬಗ್ಗೆ ಜಂಟಿ ಸಮೀಕ್ಷೆ ನಡೆಸಲು ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಮನೆ ಹಾನಿ ಉಂಟಾದ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ತುರ್ತು ಕ್ರಮವಹಿಸಲು ತಹಶೀಲ್ದಾರ್ ನೇತೃತ್ವದ ತಂಡ ಕಾರ್ಯನಿರ್ವಹಿತ್ತಿದೆ. ಪ್ರಕೃತಿ ವಿಕೋಪದಿಂದ ಉಂಟಾಗುವ ಪ್ರಾಣ ಹಾನಿಗೆ ಸಂಬಂಧಿಸಿದಂತಹ ಪ್ರಕರಣಗಳಿಗೆ 24 ಗಂಟೆ ಒಳಗಾಗಿ ಸರ್ಕಾರದಿಂದ ಪರಿಹಾರ ನೀಡಲು ತುರ್ತು ಕ್ರಮವಹಿಸಲು ತಹಶೀಲ್ದಾರ್‍ಗಳಿಗೆ ಸೂಚಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ತಹಶೀಲ್ದಾರ್ ಸತ್ಯನಾರಾಯಣ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಪಿ.ರಮೇಶ್‍ಕುಮಾರ್, ಸಹಾಯಕ ನಿರ್ದೇಶಕ ಚಂದ್ರಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours