ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಡಿಸಿ ಕವಿತಾ ಎಸ್.ಮನ್ನಿಕೇರಿ ಚಾಲನೆ

 

ಚಿತ್ರದುರ್ಗ,ಮೇ.26:
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಸೋಂಕು ಹೆಚ್ಚಳ ಹಿನ್ನಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣ ಹಾಗೂ ಜಾಗೃತಿ ಮೂಡಿಸಲು ವೈದ್ಯರ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಬುಧವಾರ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಾಯಿತು.
  ಚಿತ್ರದುರ್ಗ ಹೊರವಲಯದಲ್ಲಿನ ಪಿಳ್ಳೆಕೇರನಹಳ್ಳಿಗೆ ಭೇಟಿ ನಿಡಿದ ವೇಳೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಜಿಲ್ಲೆಯ ವಿವಿಧೆಡೆ ಹಾಸ್ಟೆಲ್‍ಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಪ್ರಾರಂಭಿಸಲಾಗಿದ್ದು, ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಹಾಸಿಗೆ, ಉಚಿತ ಊಟದ ವ್ಯವಸ್ಥೆ, ಬಿಸಿ ನೀರು,  ಪ್ರತ್ಯೇಕ ಶೌಚಾಲಯ ಸೌಲಭ್ಯ, ವಿಶೇಷ ಕಾಳಜಿಯಿಂದ ಹಾಗೂ ಮಕ್ಕಳ ರೀತಿಯಲ್ಲಿ ಆರೈಕೆ ಮಾಡಲು ವೈದ್ಯರು ಹಾಗೂ ಶುಶ್ರೂಷಕರು ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹಾಗಾಗಿ ಕೋವಿಡ್ ಸೋಂಕು ದೃಢಪಟ್ಟ ಸಂದರ್ಭದಲ್ಲಿ ಹೋಂ ಐಸೋಲೇಷನ್ ಬದಲಾಗಿ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಾಗಿ, ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿ ಎಂದು ತಿಳಿಸಿದರು.
ಮನೆಯಲ್ಲಿಯೇ ಕೋವಿಡ್‍ಗೆ ಚಿಕಿತ್ಸೆ ಪಡೆಯುವುದರಿಂದ ಕುಟುಂಬದ ಇತರ ಸದಸ್ಯರಿಗೂ ಕೋವಿಡ್ ಸೋಂಕು ಹರಡುತ್ತದೆ. ಹಾಗಾಗಿ ಯಾವುದೇ ಭಯ ಪಡದೇ ಎಲ್ಲ ರೀತಿಯ ಸೌಲಭ್ಯಗಳಿರುವ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು. 
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ ಮಾತನಾಡಿ, ಜಿಲ್ಲೆಯಲ್ಲಿ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ಸೋಂಕು ತಡೆಗಟ್ಟುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೋವಿಡ್ ರೋಗ ಲಕ್ಷಣಗಳಿರುವವರು ತಕ್ಷಣವೇ ಕೋವಿಡ್-19 ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಸಲಹೆ  ನೀಡಿದರು.
ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮದಕರಿಪುರ, ಜಿ.ಆರ್.ಹಳ್ಳಿ ಪ್ರಾಥಮಿಕ ಆರೋಗ್ಯ್ ಕೇಂದ್ರ ವ್ಯಾಪ್ತಿಯ ಪಿಳ್ಳೇಕೆರೆನಹಳ್ಳಿ, ಗೊಡಬನಹಾಳ್ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗೊಡಬನಾಳ್ ಹಾಗೂ ಕ್ಯಾಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸೀಬಾರ ಗ್ರಾಮ ಸೇರಿದಂತೆ ಚಿತ್ರದುರ್ಗ ತಾಲ್ಲೂಕಿನ ನಾಲ್ಕು ಹಳ್ಳಿಗಳಿಗೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.
ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೋವಿಡ್ ಪರೀಕ್ಷೆ ಮಾಡಿ, ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳುವುದು, ಕೋವಿಡ್ ಸೋಂಕಿನ ಪ್ರಸರಣದ ಸರಪಳಿ ತುಂಡರಿಸುವುದು, ಜನರನ್ನು ಪರೀಕ್ಷೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು “ವೈದ್ಯರ ನಡೆ ಹಳ್ಳಿಗಳ ಕಡೆ” ಕಾರ್ಯಕ್ರಮದ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ, ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು. 
ಭೇಟಿ ನೀಡಿದ ಗ್ರಾಮಗಳಲ್ಲಿನ ಸಕ್ರಿಯ ಪ್ರಕರಣಗಳು; ಪಿಳ್ಳಕೇರನಹಳ್ಳಿ 27, ಮದಕರಿಪುರ 35,ಗೊಡಬನಹಾಳ್ 18, ಸೀಬಾರ ಗ್ರಾಮದಲ್ಲಿ 17 ಪ್ರಕರಣಗಳಿರುತ್ತವೆ.

[t4b-ticker]

You May Also Like

More From Author

+ There are no comments

Add yours