ಚಳ್ಳಕೆರೆ| ಜನತಾ ದರ್ಶನ| ಬರ ನಿರ್ವಹಣೆಗೆ ಸಮರೋಪಾದಿಯಲ್ಲಿ ಸಿದ್ಧತೆ:ಡಿ.ಸುಧಾಕರ್

 

 

 

 

ಚಿತ್ರದುರ್ಗ🙁chitradurga )  ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.
ಚಳ್ಳಕೆರೆ ನಗರದ ಶ್ರೀ ಗುರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಜನತಾದರ್ಶನ  (janatha darshana)  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಸಮಸ್ಯೆ ಆಗದಂತೆ ಕ್ರಮ ವಹಿಸಿ

ಬರ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳಬೇಕು. ಎಲ್ಲಿಯಾದರೂ ಕುಡಿಯುವ ನೀರಿನ ಸಮಸ್ಯೆ ತಲೆ ತೋರಿದರೆ ತಕ್ಷಣವೇ ಬೋರ್‍ವೆಲ್ ಕೊರೆಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಏಳು ತಿಂಗಳ ಒಳಗಾಗಿ ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನ ಭಾಗ್ಯ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದೇ ಜನವರಿ 12ರಂದು ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಗೆ ಚಾಲನೆ ದೊರಕಲಿದೆ. ಈಗಾಗಲೇ ರಾಜ್ಯಾದ್ಯಂತ 43 ಸಾವಿರ ಅರ್ಜಿಗಳು ಯುವನಿಧಿ ಯೋಜನೆಗೆ ನೋಂದಣಿಯಾಗಿವೆ. ಒಟ್ಟು 4 ಲಕ್ಷ ಯುವಕ ಯುವತಿಯರು ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂಬ ಅಂದಾಜಿದೆ. ಜಿಲ್ಲೆಯ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವ ಡಿ.ಸುಧಾಕರ್ ಕರೆ ನೀಡಿದರು.
ರಾಜ್ಯದ ಗ್ಯಾರಂಟಿ  ಯೋಜನೆಗಳು ಯಶಸ್ವಿಯಾಗಿದ್ದು, ಶಕ್ತಿ ಯೋಜನೆ ಅಡಿ ಸುಮಾರು 100 ಕೋಟಿ ಅಧಿಕ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಶೇಕಡ 97 ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಲಾಗಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪರಿಶೀಲಿನಾ ಸಭೆ ಜರುಗಲಿದೆ. ಬಳಿಕ ಕಾಮಗಾರಿಯನ್ನು ಅದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ ಈ ಭಾಗಕ್ಕೆ ಭದ್ರೆಯ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುವ ಸಲುವಾಗಿ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಥಳದಲ್ಲಿ ಪರಿಹಾರ ದೊರಕದ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಾಕೀತು ಮಾಡಿದರು.

ಚಳ್ಳಕೆರೆಯಲ್ಲಿ ನಿರಂತರ ಜನಸಂಪರ್ಕ ಸಭೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಜನಸಂಪರ್ಕ ಸಭೆಗಳನ್ನು ನಡೆಸಲಾಗುತ್ತಿದ್ದು, ಈಗಾಗಲೇ 26 ಜನಸಂಪರ್ಕ ಸಭೆಗಳನ್ನು ಚಳ್ಳಕೆರೆ ಕ್ಷೇತ್ರದಾದ್ಯಂತ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಕರೆಸಿ, ಜನರ ಸಮಸ್ಯೆ ಬಗೆಹರಿಸಲಾಗಿದೆ ಎಂದು ತಿಳಿಸಿದ ಅವರು, ಜನತಾ ದರ್ಶನದಲ್ಲಿ ಸಲ್ಲಿಕೆಯಾದ ಪ್ರತಿಯೊಂದು ಅರ್ಜಿಗಳಿಗೆ ಉತ್ತರ ಕೊಡುವುದರ ಜೊತೆಗೆ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯ ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ವಿಶೇಷವಾಗಿ ಬರಗಾಲದ ಸಂದರ್ಭದಲ್ಲಿ  ಈ ಮೊದಲು ಪಂಚಾಯಿತಿಗೊಂದರಂತೆ ಗೋಶಾಲೆ ತೆರೆಯಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಬರಗಾಲದ ಹಿನ್ನಲೆಯಲ್ಲಿ ಹೋಬಳಿಗೊಂದರಂತೆ ಗೋಶಾಲೆ ಸ್ಥಾಪನೆಗೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದ್ದು, ಸರ್ಕಾರ ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಹೋಬಳಿಗೆ ಒಂದರಂತೆ ಗೋಶಾಲೆ ಪ್ರಾರಂಭ ಮಾಡಲು ಕ್ರಮವಹಿಸಲಾಗಿದೆ. ಜಿಲ್ಲೆಯ 1891 ದೇವರ ಎತ್ತುಗಳ ಮೇವಿಗೆ ಪ್ರತಿ ತಿಂಗಳೂ ರೂ.22 ಲಕ್ಷ ಬೇಕಾಗಿದ್ದು, ಅದಕ್ಕೆ ಸಂಬಂಧಪಟ್ಟಂತೆ ಈಗಾಗಲೆ ರೂ.10 ಲಕ್ಷ ಅನುದಾನವನ್ನು ಪಶುಸಂಗೋಪನೆ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರು ಸಮಸ್ಯೆ ತಲೆದೋರಿದ ಕಡೆಗಳಲ್ಲಿ ತಕ್ಷಣವೇ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಲಾಗುತ್ತಿದ್ದು, ಇದರ ಜೊತೆಗೆ ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ನೀಡಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಹೇಳಿದರು.
29 ಸಾವಿರ ರೈತರ ಖಾತೆಗೆ ಶೀಘ್ರ ಬರ ಪರಿಹಾರ: ಫ್ರೂಟ್ಸ್ ತಂತ್ರಾಂಶ ಆಧರಿಸಿ ನೇರವಾಗಿ ರೈತರ ಖಾತೆ ಬರ ಪರಿಹಾರದ ಧನ ವರ್ಗಾಯಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ಚಳ್ಳಕೆರೆ ತಾಲ್ಲೂಕಿನಲ್ಲಿ ಜಾರಿಮಾಡಲಿದೆ. ಈಗಾಗಲೇ ತಾಲ್ಲೂಕಿನ 29 ಸಾವಿರ ರೈತರ ವಿವರಗಳನ್ನು ಪ್ರೂಟ್ಸ್ ತಂತ್ರಾಂಶಕ್ಕೆ ಜೋಡಣೆ ಮಾಡಲಾಗಿದೆ. ಶೀಘ್ರವಾಗಿ ಪರಿಹಾರ ಧನ ನೇರವಾಗಿ ರೈತರ ಖಾತೆ ಜಮೆಯಾಗಲಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜನರ ಮನೆ ಬಾಗಿಲಿಗೆ ತೆರಳಿ, ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶವನ್ನು ಜನತಾ ದರ್ಶನ ಕಾರ್ಯಕ್ರಮ ಹೊಂದಿದೆ. ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಕೇಂದ್ರಗಳಿಗೆ ಅಲೆದಾಟ ಮಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು. ಜನತಾ ದರ್ಶನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಐ.ಪಿ.ಆರ್.ಜಿ.ಎಸ್  ಪೋರ್ಟಲ್ ಮೂಲಕ ಗಣಕೀಕೃತಗೊಳಿಸಲಾಗುವುದು. ಹೀಗೆ ಗಣೀಕೃತಗೊಂಡ ಅರ್ಜಿಗಳಿಗೆ ಜಿಲ್ಲಾ ಹಂತದಲ್ಲಿ ಪರಿಹಾರ ದೊರಕದಿದ್ದರೆ. ಸರ್ಕಾರದ ಉನ್ನತ ಅಧಿಕಾರಿಗಳು ಸಹ ಈ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಲು ಐ.ಪಿ.ಆರ್.ಜಿ.ಎಸ್ ಪೋರ್ಟಲ್‍ನಲ್ಲಿ ಅವಕಾಶವಿದೆ. ಆಡಳಿತದಲ್ಲಿ ಪಾರರ್ಶಕತೆ ತರುವ ಸಲುವಾಗಿ ಸಕಾಲ ಹಾಗೂ ಇ-ಆಪೀಸ್‍ಗಳನ್ನು ಎಲ್ಲಾ ತಾಲ್ಲೂಕು ಕಚೇರಿ ಹಾಗೂ ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಇದುವರೆಗೂ ಜರುಗಿದ 8 ಜನತಾ ದರ್ಶನದಲ್ಲಿ 2229 ಅರ್ಜಿಗಳು ಸ್ವೀಕರಿಸಲಾಗಿದೆ. ಇದರಲ್ಲಿ 1304 ಅರ್ಜಿಗಳನ್ನು ವಿಲೇವಾರಿ ಮಾಡಿ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ. 925 ಅರ್ಜಿಗಳ ವಿಲೇವಾರಿಗೆ ಬಾಕಿಯಿದೆ. ಇದರಲ್ಲಿ 392 ಕಂದಾಯ ಹಾಗೂ 503 ಇತರೆ ಇಲಾಖೆ ಸಂಬಂಧಪಟ್ಟ ಅರ್ಜಿಗಳಿವೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ನಗರಸಭೆಯ ಸರ್ವ ಸದಸ್ಯರು ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ನಗರಸಭೆ ಸಭೆಯನ್ನು ನಡೆಸುವಂತೆ ಮನವಿ ಮಾಡಿದರು.

ಜನರ ಗಮನ ಸೆಳೆದ ವಸ್ತು ಪ್ರದರ್ಶನ ಮಳಿಗೆಗಳು:

ಜನತಾ ದರ್ಶನದ ಅಂಗವಾಗಿ ಶ್ರೀ ಗುರು ರಾಘವೇಂದ್ರ ಕಲ್ಯಾಣ ಮಂಟಪದ ಎದುರು ಹಾಕಲಾಗಿದ್ದ ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಮಳಿಗೆಗಳು ಜನರ ಗಮನ ಸೆಳೆದವು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯ ಪೋಟೋ ಸ್ಟ್ಯಾಂಡ್ ಬಳಿ ಮಹಿಳೆಯರು  ಪೋಟೋ  ತೆಗೆದುಕೊಳ್ಳುವ ದೃಶ್ಯ ಕಂಡುಬಂದಿತು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಚಳ್ಳಕೆರೆ ಶಾಸಕ ರಘುಮೂರ್ತಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಗೃಹಲಕ್ಷ್ಮೀ  ಪೋಟೋ   ಸ್ಟ್ಯಾಂಡ್ ಬಳಿ  ಪೋಟೋ  ಪೋಸ್ ನೀಡಿ ಸಂಭ್ರಮಿಸಿದರು.
ರೈತರಿಗೆ ಅನುಕೂಲವಾಗುವಂತೆ ಕೃಷಿ ವಸ್ತು ಪ್ರದರ್ಶನದಲ್ಲಿ ಕೃಷಿಗೆ ಅಗತ್ಯವಾದ ಯಂತ್ರಗಳು, ಸಾವಯವ ಗೊಬ್ಬರಗಳ ಬಳಕೆ, ರೇಷ್ಮೆ ಕೃಷಿ ಸಾಗಾಣಿಕೆ ಮಳಿಗೆಗಳನ್ನು ತೆರೆಯಲಾಗಿತ್ತು.
ಚಳ್ಳಕೆರೆ ನಗರಸಭೆಯಿಂದ ಕಸ ವಿಂಗಡಣೆ ಹಾಗೂ ನೈರ್ಮಲ್ಯ ಹಾಗೂ ಪರಿಸರ ರಕ್ಷಣೆ ಕುರಿತಾದ ವಿಡಿಯೋ ತುಣುಕನ್ನು ಎಲ್.ಇ.ಡಿ ಪರದೆ ಮೂಲಕ ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. ಸ್ತ್ರೀ ಸ್ವ-ಸಹಾಯ ಸಂಘಗಳು ಮಹಿಳೆಯರು ತಯಾರಿಸಿದ ರೊಟ್ಟಿ, ಸಿಹಿ ತಿನಿಸು, ಉಪ್ಪಿನಕಾಯಿ ಸೇರಿದಂತೆ ಇತರೆ ಉತ್ಪನ್ನಗಳನ್ನು ಜನರು ಆಸಕ್ತಿಯಿಂದ ಖರೀದಿಸಿದರು. ನಂದಿನಿ ಸಹಿ ಉತ್ಪನ್ನಗಳು, ಜಲಜೀವನ್ ಮಿಷನ್, ಶಿಕ್ಷಣ ಇಲಾಖೆ ಆರೋಗ್ಯ, ಅಲ್ಪಸಂಖ್ಯಾತರ ಅಭಿವೃದ್ಧಿ ಸೇರಿದಂತೆ ಇತರೆ ಇಲಾಖೆಗಳ ವಸ್ತು ಪ್ರದರ್ಶನ ಮಳಿಗೆಗಳು ಇದ್ದವು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇರ್ಂಧರ್ ಕುಮಾರ್ ಮೀನಾ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಡಿವೈಎಸ್‍ಪಿ ರಾಜಣ್ಣ, ತಹಶೀಲ್ದಾರ್ ರೆಹಾನ್ ಪಾಷಾ, ತಾಲ್ಲೂಕು ಪಂಚಾಯಿತಿ ಇಒ ಶಶಿಧರ್ ಸೇರಿದಂತೆ ಚಳ್ಳಕೆರೆ ನಗರಸಭೆ ಸದಸ್ಯರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
[t4b-ticker]

You May Also Like

More From Author

+ There are no comments

Add yours